ರಾಜಕಾರಣಿಗಳು, ರೈತರು, ಹೋರಾಟಗಾರರ ಮೇಲಿನ ಪ್ರಕರಣಗಳ ಏ.8ರವರೆಗೆ ಹಿಂಪಡೆಯುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಅರ್ಜಿಯಲ್ಲಿ ಆಕ್ಷೇಪಿಸಿರುವ ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂಬ ಬಗ್ಗೆ ಅಫಿಡವಿಟ್‌ ಸಲ್ಲಿಸಿ ವಿವರ ನೀಡಿದ ಸರ್ಕಾರ ಪರ ವಕೀಲರು.
ರಾಜಕಾರಣಿಗಳು, ರೈತರು, ಹೋರಾಟಗಾರರ ಮೇಲಿನ ಪ್ರಕರಣಗಳ ಏ.8ರವರೆಗೆ ಹಿಂಪಡೆಯುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ
Published on

ರಾಜ್ಯದ ವಿವಿಧ ಸಂಘಟನೆಗಳ ಹೋರಾಟಗಾರರು, ರಾಜಕಾರಣಿಗಳು ಹಾಗೂ ಅತ್ಯಂತ ಪ್ರಭಾವಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಏಪ್ರಿಲ್‌ 8ರವರೆಗೆ ಹಿಂಪಡೆಯುವುದಿಲ್ಲ ಎಂದು ಕರ್ನಾಟಕ ಹೈಕೊರ್ಟ್‌ಗೆ ರಾಜ್ಯ ಸರ್ಕಾರ ಸೋಮವಾರ ಭರವಸೆ ನೀಡಿದೆ.

ಹೋರಾಟಗಾರರು, ರಾಜಕಾರಣಿಗಳು, ಪ್ರಭಾವಿಗಳು ಹಾಗೂ ಮತ್ತಿತರರ ವಿರುದ್ಧ ದಾಖಲಾಗಿರುವ ವಿವಿಧ 43 ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರವು 2024ರ ಅಕ್ಟೋಬರ್‌ 10ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು ಅಫಿಡವಿಟ್‌ ಸಲ್ಲಿಸಿ, ಅರ್ಜಿಯಲ್ಲಿ ಆಕ್ಷೇಪಿಸಿರುವ ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂಬ ಬಗ್ಗೆ ವಿವರ ನೀಡಿದರು. ಜೊತೆಗೆ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

Also Read
ರಾಜಕಾರಣಿಗಳು, ರೈತರು, ಹೋರಾಟಗಾರರ ವಿರುದ್ಧದ 60 ಪ್ರಕರಣ ಹಿಂತೆಗೆತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಈ ಮನವಿಗೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು “ಅರ್ಜಿ ಕುರಿತು ಹಿಂದಿನ ವಿಚಾರಣೆಯಲ್ಲಿ ಪ್ರಕರಣ ಬಗ್ಗೆ ರಾಜ್ಯ ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡಿಸುವುದಾಗಿ ತಿಳಿಸಿದರು. ಇದೀಗ ಸರ್ಕಾರಿ ವಕೀಲರು ಕಾಲಾವಕಾಶ ಕೋರುತ್ತಿದ್ದಾರೆ. ಕಾಲಾವಕಾಶ ಬೇಕಾದರೆ ಅರ್ಜಿಯ ಮುಂದಿನ ವಿಚಾರಣೆವರೆಗೆ ಪ್ರಮಾಣ ಪತ್ರದಲ್ಲಿ ತಿಳಿಸಿರುವಂತೆ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ 21 ಪ್ರಕರಣಗಳನ್ನು ಹಿಂಪಡೆಯುವುದಿಲ್ಲ ಎಂಬುದಾಗಿ ಭರವಸೆ ನೀಡಬೇಕು” ಎಂದರು.

ಅದಕ್ಕೆ ನಿಲೋಫರ್‌ ಅಕ್ಬರ್‌ ಅವರು “ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ರಾಜ್ಯ ಸರ್ಕಾರವು ಅರ್ಜಿಯಲ್ಲಿ ಆಕ್ಷೇಪಿಸಿರುವ ಯಾವುದೇ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ” ಎಂದು ಸರ್ಕಾರಿ ವಕೀಲರು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ಪೀಠವು ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಿತು.

Kannada Bar & Bench
kannada.barandbench.com