ಮೂರು ವಿಚಾರಣಾ ನ್ಯಾಯಾಲಯಗಳಿಗೆ ತಬ್ಲೀಘಿಗಳ ಬಾಕಿ ಪ್ರಕರಣ; 8 ವಾರಗಳಲ್ಲಿ ನಿರ್ಧರಿಸಲು ಅಲಾಹಾಬಾದ್ ಹೈಕೋರ್ಟ್ ಸೂಚನೆ

ಪ್ರಕರಣದ ಉಸ್ತುವಾರಿಯನ್ನು ಹೈಕೋರ್ಟ್‌ನ ರೆಜಿಸ್ಟ್ರಾರ್ ಜನರಲ್ ವಹಿಸಬೇಕಿದ್ದು, ಮೂರು ತಿಂಗಳ ಒಳಗಾಗಿ ವರದಿಯನ್ನು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಮೂರು ವಿಚಾರಣಾ ನ್ಯಾಯಾಲಯಗಳಿಗೆ ತಬ್ಲೀಘಿಗಳ ಬಾಕಿ ಪ್ರಕರಣ; 8 ವಾರಗಳಲ್ಲಿ ನಿರ್ಧರಿಸಲು ಅಲಾಹಾಬಾದ್ ಹೈಕೋರ್ಟ್ ಸೂಚನೆ
Tabligi Jamaat and Allahabad HC

ಪ್ರಕರಣಗಳ ತುರ್ತು ವಿಲೇವಾರಿ ಮಾಡುವ ದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಲ್ಲಿ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ದಾಖಲಾಗಿ ವಿಚಾರಣೆಗೆ ಬಾಕಿ ಇರುವ ದೂರುಗಳನ್ನು ಉತ್ತರ ಪ್ರದೇಶದ ಲಖನೌ, ಮೀರತ್ ಮತ್ತು ಬರೇಲಿ ಜಿಲ್ಲೆಗಳ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗೆ ಎರಡು ವಾರಗಳಲ್ಲಿ ವರ್ಗಾಯಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಶಶಿ ಕಾಂತ್ ಗುಪ್ತಾ ಮತ್ತು ಶಮೀಮ್ ಅಹ್ಮದ್ ಅವರಿದ್ದ ವಿಭಾಗೀಯ ಪೀಠವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧದ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಕೆಳಗಿನಂತೆ ವರ್ಗಾವಣೆ ಮಾಡುವಂತೆ ಸೂಚಿಸಿದೆ.

“...ಕಾನ್ಪುರ, ಗೋರಖ್‌ಪುರ, ಪ್ರಯಾಗರಾಜ್, ವಾರಾಣಸಿ ಮತ್ತು ಲಖನೌ ವಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲಖನೌನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಬೇಕು. ಅದೇ ರೀತಿ ಆಗ್ರಾ ಮತ್ತು ಮೀರತ್ ವಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮೀರತ್‌ನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಬೇಕು. ಅಂತಿಮವಾಗಿ ಬರೇಲಿ ವಲಯದಲ್ಲಿ ಬಾಕಿರುವ ಪ್ರಕರಣಗಳನ್ನು ಅಲ್ಲಿನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಬೇಕು.”
ಅಲಹಾಬಾದ್ ಹೈಕೋರ್ಟ್‌

ಮುಂದಿನ ಎಂಟು ವಾರಗಳಲ್ಲಿ ಸಂಬಂಧಿತ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗಳು ಪ್ರಕರಣಗಳ ವಿಚಾರಣೆ ನಡೆಸಿ ಅವುಗಳನ್ನು ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಸಂಬಂಧ ಪಟ್ಟ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು ಎಂದೂ ಹೈಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್ 4, 2020ರಂದು ಹೊರಡಿಸಿರುವ ಆದೇಶದಲ್ಲಿ ಸಂಬಂಧಪಟ್ಟ ಪಕ್ಷಕಾರರ ಭರವಸೆಗಳನ್ನು ದಾಖಲಿಸಿಕೊಡಿದೆ. ಇದರಲ್ಲಿ ಎಲ್ಲ ಪಕ್ಷಕಾರರು ವಿಚಾರಣಾ ನ್ಯಾಯಾಲಯಗಳಿಗೆ ವಿಡಿಯೋ ಕಾನ್ಫರೆನ್ಸ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಪ್ರಕರಣಗಳ ತುರ್ತು ವಿಚಾರಣೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಈ ಆದೇಶವನ್ನು ಹೈಕೋರ್ಟ್ ಅವಲಂಬಿಸಿದೆ.

ಲಖನೌ, ಮೀರತ್ ಮತ್ತು ಬರೇಲಿಯ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗಳಿಗೆ ವರ್ಗಾಯಿಸಲಾಗಿರುವ ಪ್ರಕರಣಗಳ ವಿಚಾರಣೆಯ ಮೇಲೆ ನಿಗಾ ಇಡುವಂತೆ ಹೈಕೋರ್ಟ್‌ನ ರೆಜಿಸ್ಟ್ರಾರ್ ಜನರಲ್‌ಗೆ ಸೂಚಿಸಲಾಗಿದ್ದು, ಮೂರು ತಿಂಗಳ ಒಳಗಾಗಿ ವರದಿಯನ್ನು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಅವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ದಾಖಲಾಗಿರುವ ದೂರುಗಳನ್ನು ಸಂಬಂಧಪಟ್ಟ ವಿಚಾರಣಾಧೀನ ನ್ಯಾಯಾಲಯಗಳಿಗೆ ವರ್ಗಾಯಿಸಿ ತುರ್ತು ವಿಲೇವಾರಿ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌‌ 4ರ ಆದೇಶದಲ್ಲಿ ನಿರ್ದೇಶಿಸಿತ್ತು.

Also Read
ತಬ್ಲೀಘಿಗಳನ್ನು ಹರಕೆಯ ಕುರಿಯಾಗಿಸಲಾಗಿದೆ, ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ: ಬಾಂಬೆ ಹೈಕೋರ್ಟ್‌

ಸುಪ್ರೀಂ ಕೋರ್ಟ್‌ನಲ್ಲಿ ಎರಡು ದೂರುಗಳನ್ನು ಅರ್ಜಿದಾರರು ಎತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಅವುಗಳು ಇಂತಿವೆ.

  1. ಉತ್ತರ ಪ್ರದೇಶದ ವಿವಿಧೆಡೆ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ಹಲವು ಕ್ರಿಮಿನಲ್ ದೂರುಗಳು ದಾಖಲಾಗಿದ್ದು, ಸಂಬಂಧಪಟ್ಟ ನ್ಯಾಯಾಲಯಗಳು ವಿಭಿನ್ನ ಷರತ್ತುಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡುತ್ತಿವೆ. ಇದರಲ್ಲಿ ಏಕರೂಪತೆ ಇಲ್ಲವಾಗಿದೆ.

  2. ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಪ್ರಕ್ರಿಯೆ ಬಾಕಿ ಇರುವುದರಿಂದ ಆರೋಪಿಗಳಿಗೆ ಓಡಾಟದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಉತ್ತರ ಪ್ರದೇದ ಒಂದು ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಸುವ ಅವಶ್ಯಕತೆ ಇದೆ.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಷ್ ಗೋಯಲ್ ಅವರು ಸೆಪ್ಟೆಂಬರ್ 4ರಂದು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಸಂಬಂಧಿತ ಭಾಗವನ್ನು ನ್ಯಾಯಾಲಯಕ್ಕೆ ವಿವರಿಸಿದರು. ಉತ್ತರ ಪ್ರದೇಶ ದೊಡ್ಡ ರಾಜ್ಯವಾಗಿರುವುದರಿಂದ ಒಂದು ನ್ಯಾಯಾಲಯ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವುದು ಪ್ರಾಯೋಗಿಕವಾಗಿ ಕಷ್ಟ ಎಂಬ ವಾದವನ್ನೂ ಹೈಕೋರ್ಟ್ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ವಲಯವಾರು ಪ್ರಕರಣಗಳ ವಿಚಾರಣೆಗೆ ಹಂಚಿಕೆ ಮಾಡುವ ಮೂಲಕ ನ್ಯಾಯಾಲಯವು ತುರ್ತು ವಿಲೇವಾರಿಗೆ ಆದ್ಯತೆ ನೀಡಿದೆ. ಈ ಆಧಾರದ ಮೇಲೆ ಸರ್ಕಾರದ ಮನವಿಯನ್ನು ವಿಲೇವಾರಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com