ರಸ್ತೆ ಅಪಘಾತಕ್ಕೀಡಾದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಒದಗಿಸಬೇಕು ಮತ್ತು ಅವರಿಗೆ ಆನ್‌ಲೈನ್ ಮೂಲಕ ಪರಿಹಾರ ಮೊತ್ತ ವರ್ಗಾಯಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ [ಎಸ್ ರಾಜಶೇಖರನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಈ ವಿಚಾರವನ್ನು ಆಗಸ್ಟ್ 20 ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.
"ಹಿಟ್ ಅಂಡ್ ರನ್ ಮೋಟಾರು ಅಪಘಾತಗಳ ಯೋಜನೆ, 2022ರ ಪ್ರಕಾರ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಫಾರ್ಮ್ III ರ ವಿವಿಧ ವಿಚಾರಗಳ ಬಗ್ಗೆ ನಿರ್ದೇಶನಗಳನ್ನು ನೀಡಬೇಕಾಗುತ್ತದೆ, ಇದರಿಂದಾಗಿ ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅರ್ಹ ವ್ಯಕ್ತಿಗಳ ಖಾತೆಗೆ ಆನ್‌ಲೈನ್ ಮೂಲಕ ಪರಿಹಾರ ಧನ ವರ್ಗಾವಣೆಯನ್ನು ಮಾಡಲು ಸಾಧ್ಯವಾಗುತ್ತದೆ. ನಾವು ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಗೆ ಸಂಬಂಧಿಸಿದ್ದು” ಎಂದು ಪೀಠವು ಹೇಳಿದೆ.
ರಾಜಶೇಖರನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಈ ಆದೇಶ ಬಂದಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಂಘಟಿತ ಪ್ರಯತ್ನ ಮಾಡುವಂತೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿತ್ತು.
ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸ್ಟೀರಿಂಗ್ ಸಮಿತಿ ರಚನೆಗೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ನ್ಯಾಯಾಲಯ ಇದೀಗ ಮೋಟಾರು ವಾಹನಗಳ ಕಾಯಿದೆ ಜಾರಿ ಅದರಲ್ಲಿಯೂ ಸೆಕ್ಷನ್ 136ಎ (ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ರಸ್ತೆ ಸುರಕ್ಷತೆಯ ಜಾರಿ) ಕುರಿತು ವಿಚಾರಣೆ ನಡೆಸಲಿದೆ.
ಪರಿಹಾರ ಪಾವತಿಗೆ ಅನುಕೂಲವಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೋರ್ಟಲ್ ರೂಪಿಸುವಂತೆ ನಿರ್ದೇಶನ ನೀಡಬೇಕೆಂಬ ವಿಚಾರ ಕುರಿತಂತೆಯೂ ವಿಚಾರಣೆ ನಡೆಸುವುದಾಗಿ ಪೀಠ ಆಗಸ್ಟ್ 20ರ ಆದೇಶದಲ್ಲಿ ತಿಳಿಸಿತ್ತು.