ಬಸವರಾಜ ಹೊರಟ್ಟಿ ವಿರುದ್ಧ ಜಾತಿ ನಿಂದನೆ ಪ್ರಕರಣ: ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಕೆ

ಸರ್ಕಾರದ ಪರ ವಕೀಲರು ಧಾರವಾಡ ಗಾಮೀಣಾ ಠಾಣಾ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದ ನ್ಯಾಯಾಲಯ.
Karnataka HC and Basavaraj Horatti
Karnataka HC and Basavaraj Horatti

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಎಫ್‌ಐಆರ್ ರದ್ದತಿ ಕೋರಿ ಬಸವರಾಜ ಹೊರಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಸಕದಸ್ಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರು ಧಾರವಾಡ ಗಾಮೀಣಾ ಠಾಣಾ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಜುಲೈ 11ಕ್ಕೆ ಪೀಠವು ಮುಂದೂಡಿದ್ದು, ಅರ್ಜಿದಾರರ ವಿರುದ್ಧದ ತನಿಖೆಗೆ ವಿಧಿಸಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿತು.

ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗಕ್ಕೆ ಸೇರಿದ ಮೋಹನ್ ಚಂಬಪ್ಪ ಗುಡಿಸಲುಮನಿ ಅವರು 2022ರ ಜನವರಿ 25ರಂದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಹೊರಟ್ಟಿಯವರ ವಿರುದ್ಧ ದೂರು ಸಲ್ಲಿಸಿದ್ದರು.

ನಾನು ಮುಗದಾ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರೌಢ ಶಾಲೆಗೆ ತೆರಳಿ, ಸರ್ವೋದಯ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ ಯಾವುದೇ ಅಧಿಕಾರ ಹೊಂದಿಲ್ಲ. ಆದ ಕಾರಣ ಸಂಸ್ಥೆಯಲ್ಲಿ ಅಳವಡಿಸಿರುವ ಅವರ ನಾಮ ಫಲಕ ತೆಗೆಯಬೇಕು ಎಂಬುದಾಗಿ ಶಾಲಾ ಸಿಬ್ಬಂದಿಗೆ ವಿನಂತಿಸಿದ್ದೆ. ಈ ವೇಳೆ ಮೊದಲ ನಾಲ್ಕು ಆರೋಪಿಗಳಾದ ವೆಂಕಟೇಶ ಲಕ್ಸಾಣಿ, ಚೈತ್ರಾ ಮೇಟಿ, ನಿರ್ಮಲಾ ಚವ್ಹಾಣ ಮತ್ತು ದೊಡ್ಡಪ್ಪ ಕೆಂಗಪ್ಪ ಅವರು ಸಿಟ್ಟಾಗಿ, ಬಸವರಾಜ ಹೊರಟ್ಟಿ ಅವರ ಪ್ರಚೋದನೆ ಮೇರೆಗೆ ನನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದರು. ಕೊಠಡಿಯಲ್ಲಿ ಅಕ್ರಮವಾಗಿ ಕೂಡಿಹಾಕಿ, ನನ್ನ ಕಾರಿನ ಮೇಲೆ ಕಲ್ಲು ತೂರಿ ಹಾನಿಗೊಳಿಸಿದರು ಎಂದು ಆರೋಪಿಸಿದ್ದರು.

Also Read
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

ಇದರಿಂದ ಬಸವರಾಜ ಹೊರಟ್ಟಿ ಹಾಗೂ ಇತರೆ ನಾಲ್ವರ ವಿರುದ್ಧ ಹಲ್ಲೆ, ಉದ್ದೇಶಪೂರ್ವಕ ಅವಮಾನ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿದ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಜಾತಿ ನಿಂದನೆ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಹೊರಟ್ಟಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು 2022ರ ಜನವರಿ 31ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಸವರಾಜ ಹೊರಟ್ಟಿ ಅವರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಎಫ್‌ಐಆರ್‌ನಲ್ಲೂ ಅವರ ವಿರುದ್ಧ ಗಂಭೀರ ಆರೋಪಗಳಿಲ್ಲ ಎಂದು ತಿಳಿಸಿ ಅವರ ವಿರುದ್ಧದ ತನಿಖೆಗೆ ಸೀಮಿತವಾಗಿ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com