ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ವಿವಿಧ ಜಾತಿಗಳಿಗಾಗಿ ಆರಂಭಿಸಲಾಗಿರುವ ಎಂಟು ನಿಗಮಗಳನ್ನು ಪ್ರತಿವಾದಿಗಳನ್ನಾಗಿಸುವ/ಕಕ್ಷಿದಾರರನ್ನಾಗಿಸುವ ಮನವಿಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅನುಮತಿಸಿದ್ದು, ಅವುಗಳಿಗೆ ಆಕ್ಷೇಪಣೆ ಸಲ್ಲಿಸಲು ಆದೇಶ ಮಾಡಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತಿತರರು ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ನಡೆಸಿತು.
“ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಗಳನ್ನು ಪಕ್ಷಕಾರರನ್ನಾಗಿಸುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ಮನವಿಗೆ ಅನುಮತಿಸಲಾಗಿದೆ. ಪ್ರತಿವಾದಿಗಳಾಗಿರುವ ಈ ನಿಗಮಗಳು ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆ ಸಲ್ಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಪ್ರಕರಣವನ್ನು ತುರ್ತಾಗಿ ಆಲಿಸುವ ಅಗತ್ಯವಿದೆ. ಹೀಗಾಗಿ, ಸಮೀಪದ ದಿನಾಂಕವನ್ನು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲ ಸಿ ಎಂ ಪೂಣಚ್ಚ ಅವರು “ಕೆಲವು ನಿಗಮ ಮತ್ತು ಮಂಡಳಿಗಳನ್ನು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಪಕ್ಷಕಾರರನ್ನಾಗಿಸುವ ಸಂಬಂಧ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಬೇಕು” ಎಂದು ಕೋರಿದ್ದರು.
ಅಲ್ಲದೇ, “ಕಳೆದ ವರ್ಷದ ಡಿಸೆಂಬರ್ 21ರ ಆದೇಶದಲ್ಲಿ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರೂಪಿಸಿರುವ ಪ್ರಶ್ನೆಗಳ ಕುರಿತಾಗಿ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಬಯಸಿದೆ” ಎಂದಿದ್ದರು. ಇದಕ್ಕೆ ಪ್ರೊ. ರವಿವರ್ಮ ಕುಮಾರ್ ಅವರು “ರಾಜ್ಯ ಸರ್ಕಾರವೇ ನಿಗಮ ಮತ್ತು ಮಂಡಳಿಗಳನ್ನು ಸೃಷ್ಟಿಸಿದೆ. ರಾಜ್ಯ ಸರ್ಕಾರದ ಸಮಾಧಾನಕ್ಕಾಗಿ ಅವುಗಳನ್ನು ಪಕ್ಷಕಾರರನ್ನಾಗಿ ಸೇರ್ಪಡೆಗೊಳಿಸಲು ಬಯಸಿದೆ” ಎಂದಿದ್ದರು.