ಸಮಾಜವನ್ನು ಜಾತಿ ವ್ಯವಸ್ಥೆ ಇನ್ನೂ ಆವರಿಸಿಕೊಂಡಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ: ನ್ಯಾ. ಚಂದ್ರಚೂಡ್

ಜಾತಿಯ ವಾಸ್ತವತೆ ಅರಿಯುವುದಕ್ಕಾಗಿ ಜಾತಿಯ ಆಧಾರದ ಮೇಲೆ ತಾರತಮ್ಯ, ಅಪಮಾನ ಹಾಗೂ ಹಲ್ಲೆಗೆ ಒಳಗಾಗಿರುವ ಜನರೊಂದಿಗೆ ಮಾತಿಗಿಳಿಯಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
Justice DY Chandrachud
Justice DY Chandrachud

ನಮ್ಮ ಸಮಾಜವನ್ನು ಜಾತಿ ವ್ಯವಸ್ಥೆ ಇನ್ನೂ ಆವರಿಸಿಕೊಂಡಿದ್ದು ನಾವು ಆ ವಾಸ್ತವದೊಂದಿಗೆ ಮುಖಾಮುಖಿಯಾಗಬೇಕಿದೆ ಮತ್ತು ಜಾತಿ ಆಧಾರದ ಮೇಲೆ ತಾರತಮ್ಯಕ್ಕೆ ತುತ್ತಾದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಕಛೇರಿಯಲ್ಲಿ ಮಂಗಳವಾರ ನಡೆದ 'ವೈವಿಧ್ಯತೆಯ ಅರಿವು- ಉನ್ನತ ಶಿಕ್ಷಣದಲ್ಲಿ ಬದಲಾವಣೆಯ ಅಗತ್ಯತೆʼ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.

ಜಾತೀಯತೆಯ ವಾಸ್ತವಾಂಶ ಅರಿಯಲು, ತಾರತಮ್ಯ ಎದುರಿಸಿದ ಜನರೊಂದಿಗೆ ಸಂವಾದ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. "ನಮ್ಮ ಸಮಾಜದಲ್ಲಿ ಇನ್ನೂ ಆವರಿಸಿಕೊಂಡಿರುವ ಜಾತಿ ತಾರತಮ್ಯಕ್ಕೆ ನಾವು ಮುಖಾಮುಖಿಯಾಗಿ ಜಾತಿಯ ಆಧಾರದ ಮೇಲೆ ತಾರತಮ್ಯಕ್ಕೆ ತುತ್ತಾದವರಿಗೆ ನ್ಯಾಯ ಒದಗಿಸಿಕೊಡಬೇಕು. ಅದು ಎಲ್ಲಕ್ಕಿಂತ ಹೆಚ್ಚು ಮುಖ್ಯ" ಎಂದು ಅವರು ಹೇಳಿದರು.

ಸಮಾಜದಲ್ಲಿ ಪ್ರಚಲಿತದಲ್ಲಿರುವ ಜಾತಿ ತಾರತಮ್ಯವನ್ನು ಹೇಗೆ ಕೊನೆಗೊಳಿಸಬೇಕು ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು “ಪ್ರಶ್ನೆಗೆ ಅಗೌರವ ತೋರುವ ಉದ್ದೇಶ ಹೊಂದಿಲ್ಲವಾದರೂ ಜಾತಿಯನ್ನು ತೊಡೆದುಹಾಕಬೇಕು ಎಂಬ ಇಡೀ ವಿಷಯ ಮೇಲ್ಜಾತಿಯವರು ಪ್ರಚಾರ ಮಾಡುವ ವಿಚಾರ ಎಂದು ಹೆಚ್ಚಾಗಿ ಗ್ರಹಿಸಲಾಗುತ್ತದೆ. ಜಾತಿಯ ವಾಸ್ತವತೆ ಅರಿಯುವುದಕ್ಕಾಗಿ ಜಾತಿಯ ಆಧಾರದ ಮೇಲೆ ತಾರತಮ್ಯ, ಅಪಮಾನ ಹಾಗೂ ಹಲ್ಲೆಗೆ ಒಳಗಾಗಿರುವ ಜನರೊಂದಿಗೆ ಮಾತನಾಡಬೇಕು” ಎಂದರು.

Also Read
ಕೋಲ ಕಟ್ಟುವ ವ್ಯಕ್ತಿಗೆ ಜಾತಿ ನಿಂದನೆ: ಜ್ಯೋತಿಷಿಗೆ ಜಾಮೀನು ನಿರಾಕರಿಸಿದ ಪುತ್ತೂರು ನ್ಯಾಯಾಲಯ

"ಜಾತಿಯು ಜನರ ಅಸ್ಮಿತೆಯನ್ನು ವ್ಯಾಖ್ಯಾನಿಸುತ್ತದೆ ಮತ್ತು ತಾರತಮ್ಯವನ್ನು ಆಚರಿಸುವ ಅಪರಾಧಿಗಳು ಜನರ ಜಾತಿಗಳನ್ನು ಅವರ ಜೀವನದ ದಿನವಹಿ ಕಾರ್ಯಗಳಲ್ಲಿ ನೆನಪಿಸುತ್ತಾರೆ" ಎಂದು ನ್ಯಾಯಮೂರ್ತಿಗಳು ವಿವರಿಸಿದರು. ಇದಕ್ಕಾಗಿ ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದಲ್ಲ, ಬದಲಿಗೆ ಶತಮಾನಗಳಿಂದ ತರತಮಕ್ಕೆ ತುತ್ತಾದವರನ್ನು ಸಬಲೀಕರಣಗೊಳಿಸುವುದೇ ಉತ್ತರ” ಎಂದರು.

"ನಮ್ಮ ದಿನನಿತ್ಯದ ಜೀವನದಿಂದ ನಾವು ಹಲವು ಉದಾಹರಣೆಗಳನ್ನು ಕೇಳುತ್ತಿರುವಂತೆಯೇ ಆ ತಾರತಮ್ಯ ಇನ್ನೂ ಮುಂದುವರೆದಿದೆ. ನಮ್ಮ ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯದ ವ್ಯಾಪ್ತಿಯನ್ನು ಅರಿತುಕೊಳ್ಳುವಲ್ಲಿ ಅದಕ್ಕೆ ಉತ್ತರವಿದೆ " ಎಂದು ಅವರು ಹೇಳಿದರು.

ಪೂರ್ಣ ಭಾಷಣವನ್ನು ಇಲ್ಲಿ ವೀಕ್ಷಿಸಿ:

Related Stories

No stories found.
Kannada Bar & Bench
kannada.barandbench.com