ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕೋಲ ಕಟ್ಟುವ ವ್ಯಕ್ತಿಯ ದೈವ ನರ್ತನ ಸೇವೆಗೆ ಅಡ್ಡಿಪಡಿಸಿದ ಮತ್ತು ಜಾತಿನಿಂದನೆ ಮಾಡಿದ ಆರೋಪದ ಮೇಲೆ ಜ್ಯೋತಿಷಿಯೊಬ್ಬರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ [ಡಿ ಸತ್ಯನಾರಾಯಣ ಮತ್ತು ಬೆಳ್ಳಾರೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಶೇಷಪ್ಪ ಪರವರ ಬಿ ಅವರ ನಡುವಣ ಪ್ರಕರಣ]
“ಒಂದು ವೇಳೆ ಅರ್ಜಿದಾರರಿಗೆ (ಜ್ಯೋತಿಷಿ) ಜಾಮೀನು ನೀಡಿದರೆ ಅವರು ಮುಂದಿನ ತನಿಖೆಗೆ ಅಡ್ಡಿ ಉಂಟು ಮಾಡುವ, ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ, ಅವರನ್ನು ನಾಪತ್ತೆಯಾಗಿಸುವ ಹಾಗೂ ಇಂಥದ್ದೇ ಕೃತ್ಯ ಎಸಗುವ ಸಾಧ್ಯತೆಗಳನ್ನು ನಿರಾಕರಿಸಲಾಗದು. ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಹಾಗೂ ತನಿಖೆ ಇನ್ನೂ ಪೂರ್ಣಗೊಂಡಿಲ್ಲದೇ ಇರುವುದರಿಂದ ಅರ್ಜಿದಾರ ಜಾಮೀನಿಗೆ ಅರ್ಹರಲ್ಲ ಎಂಬುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ” ಎಂದು ನ್ಯಾಯಾಧೀಶ ಆರ್ ಓಂಕಾರಪ್ಪ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಪುತ್ತೂರಿನ ನಿಡಪಳ್ಳಿ ಹಾಗೂ ಸುಳ್ಯದಲ್ಲಿ ಕಳೆದ ಮೂರು ವರ್ಷಗಳಿಂದ ದೈವ ನರ್ತನ ಸೇವೆ ಸಲ್ಲಿಸುತ್ತಿರುವ ʼಪರವʼ ಪರಿಶಿಷ್ಟ ಜಾತಿಗೆ ಸೇರಿದ ಬಾಳಿಲ ನಿವಾಸಿ ಶೇಷಪ್ಪ ಪರವ ಬಿ ಅವರು ಪುತ್ತೂರಿನ ಡಿವೈಎಸ್‌ಪಿ ಅವರಿಗೆ ಕಳೆದ ಮೇ ತಿಂಗಳಲ್ಲಿ ಲಿಖಿತ ದೂರೊಂದನ್ನು ಸಲ್ಲಿಸಿದ್ದರು. ಅದರ ಪ್ರಕಾರ ಅಯ್ಯನಕಟ್ಟೆಯಲ್ಲಿ ನೇಮೋತ್ಸವದ ವೇಳೆ ನಡೆದ ʼಅಷ್ಟಮಂಗಲʼ ಜ್ಯೋತಿಷ್ಯ ಚರ್ಚೆಯಲ್ಲಿ ಪ್ರಕರಣದ ಅರ್ಜಿದಾರ/ಆರೋಪಿಯಾದ ತಂತ್ರಿ ಹಾಗೂ ಜ್ಯೋತಿಷಿ ಸತ್ಯನಾರಾಯಣ ಭಟ್ ತಮ್ಮ ಮಾನಹಾನಿ ಮಾಡಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ತಾನು ದೈವ ನರ್ತನ ಸೇವೆ ಮಾಡಬಾರದು ಎಂದು ಬೆದರಿಸಿದ್ದಲ್ಲದೆ ತನ್ನನ್ನು ಚಪ್ಪಲಿಯಿಂದ ಹೊಡೆದಿದ್ದಾರೆ. ಅಲ್ಲದೆ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ತಾನು ಮಾಡುವ ಕಸುಬಿಗೆ ಅಡ್ಡಿ ಪಡಿಸಿ, ಆರ್ಥಿಕವಾಗಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದರ ವಿರುದ್ಧ ಜ್ಯೋತಿಷಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪಿ ಭಟ್ ಪರ ವಕೀಲರು “ಅರ್ಜಿದಾರರು (ಜ್ಯೋತಿಷಿ) ಮುಗ್ಧರಾಗಿದ್ದು ಗೌರವಾನ್ವಿತ ಕುಟುಂಬದಿಂದ ಬಂದಿದ್ದಾರೆ. ಸಮಾಜದೊಂದಿಗೆ ಆಳ ಸಂಬಂಧ ಹೊಂದಿದ್ದಾರೆ. ಅವರು ನಾಪತ್ತೆಯಾಗುವ ಸಂಭವ ಇಲ್ಲ” ಎಂದು ವಾದಿಸಿದ್ದರು. ಇದಕ್ಕಾಗಿ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದ್ದರು.
ಆದರೆ ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ವಾದದಲ್ಲಿ “2015ರ ಎಸ್‌ಸಿ ಎಸ್‌ಟಿ ತಿದ್ದುಪಡಿ ಕಾಯಿದೆಯ 3(1) (za)(C) ಹಾಗೂ 3(1)(zc) ಸೆಕ್ಷನ್‌ಗಳಡಿ ಅರ್ಜಿದಾರ/ಆರೋಪಿ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಆರೋಪಿಸಲಾಗಿರುವ ಕೃತ್ಯ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆಗೆ ಅರ್ಹ. ಈ ಹಂತದಲ್ಲಿ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ” ಎಂದಿದ್ದರು.
ನ್ಯಾಯಾಲಯಕ್ಕೆ ಲಿಖಿತ ವಿವರಣೆ ನೀಡಿದ್ದ ಶೇಷಪ್ಪ ಅವರು “ಅರ್ಜಿದಾರರು ಸಮಾಜದಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಈಗ ಜಾಮೀನು ದೊರೆತರೆ ತನ್ನ ವಿರುದ್ಧ ನೀಡಲಾದ ದೂರನ್ನು ಹಿಂತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ” ಎಂದು ಅಳಲು ತೋಡಿಕೊಂಡಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 438 ಅಡಿ ಜ್ಯೋತಿಷಿ ಭಟ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: