ಕಾವೇರಿ ವಿವಾದ: ಆ.25ಕ್ಕೆ ಸುಪ್ರೀಂ ವಿಚಾರಣೆ; ನಿತ್ಯ 24 ಸಾವಿರ ಕ್ಯೂಸೆಕ್ಸ್‌ ನೀರು ಹರಿಸಲು ತಮಿಳುನಾಡು ಕೋರಿಕೆ

ಬಿಳಿಗುಂಡ್ಲು ಮುಖಾಂತರ 01.06.2023 ರಿಂದ 10.08.2023ರ ಅವಧಿಯಲ್ಲಿ 16.387 ಟಿಎಂಸಿ ನೀರು ಹರಿದಿದ್ದು, ವಾಸ್ತವಿಕವಾಗಿ 55.253 ಟಿಎಂಸಿ ನೀರು ಹರಿಸಬೇಕಿತ್ತು. ಇದರಿಂದ 38.860 ಟಿಎಂಸಿ ನೀರು ಕೊರತೆಯಾಗಿದೆ ಎಂದು ತಮಿಳುನಾಡಿನ ವಾದ.
ಕಾವೇರಿ ವಿವಾದ: ಆ.25ಕ್ಕೆ ಸುಪ್ರೀಂ ವಿಚಾರಣೆ; ನಿತ್ಯ 24 ಸಾವಿರ ಕ್ಯೂಸೆಕ್ಸ್‌ ನೀರು ಹರಿಸಲು ತಮಿಳುನಾಡು ಕೋರಿಕೆ

ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚಿಸಿದೆ. ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ, ಬಿ ಆರ್‌ ಗವಾಯಿ ಮತ್ತು ಪ್ರಶಾಂತ್‌ ಮಿಶ್ರಾ ಅವರ ನೇತೃತ್ವದ ಪೀಠವು ಇದೇ ಆಗಸ್ಟ್‌ 25ರಂದು ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ನಡೆಸಲಿದೆ.

ಬೆಳೆದು ನಿಂತಿರುವ ಬೆಳೆಯ ಪೋಷಣೆಗಾಗಿ ಈ ತಿಂಗಳ ಅಂತ್ಯದವರೆಗೆ ನಿತ್ಯ 24,000 ಕ್ಯೂಸೆಕ್ಸ್‌ ನೀರನ್ನು ಕರ್ನಾಟಕದ ಅಣೆಕಟ್ಟೆಗಳಿಂದ ಬಿಳಿಗುಂಡ್ಲು ಜಲಮಾಪನ ಕೇಂದ್ರದ ಮುಖಾಂತರ ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಕೋರಿದೆ.

ನ್ಯಾಯ ಮಂಡಳಿ ಆದೇಶಿಸಿರುವಂತೆ ಮತ್ತು ಆ ಆದೇಶವನ್ನು ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿರುವಂತೆ ಸೆಪ್ಟೆಂಬರ್‌ ತಿಂಗಳಲ್ಲಿ 36.76 ಟಿಎಂಸಿ ಅಡಿ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕು. ಪ್ರಸಕ್ತ ನೀರಾವರಿ ವರ್ಷದಲ್ಲಿ 01.06.2023 ರಿಂದ 31.07.2023ರವರೆಗಿನ 28.849 ಟಿಎಂಸಿ ಅಡಿ ನೀರಿನ ಕೊರತೆಯನ್ನು ಭರಿಸಲು ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ತಮಿಳುನಾಡಿಗೆ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆದೇಶ ಪಾಲಿಸುವಂತೆ ಸೂಚಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲುಎಂಎ) ಆದೇಶಿಸಬೇಕು. ಪ್ರಸಕ್ತ ವರ್ಷದಲ್ಲಿ ಬಾಕಿ ಉಳಿದಿರುವ ತಿಂಗಳುಗಳಲ್ಲಿ ತೀರ್ಪಿನ ಅನುಸಾರ ನಿಗದಿ ಪಡಿಸಲಾಗಿರುವ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಕೋರಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿನಲ್ಲಿನ ಪರಿಸ್ಥಿತಿ ಅವಲೋಕಿಸಿ ಆಗಸ್ಟ್‌ 10ರಂದು ನಡೆದ ಕಾವೇರಿ ನೀರು ನಿಯಂತ್ರಣಾ ಸಮಿತಿಯ (ಸಿಡಬ್ಲುಆರ್‌ಸಿ) 84ನೇ ಸಭೆಯಲ್ಲಿ ತಿಳಿಸಿರುವಂತೆ ಬಿಳಿಗುಂಡ್ಲುವಿನ ಜಲಮಾಪನ ಕೇಂದ್ರದಲ್ಲಿ 01.06.2023 ರಿಂದ 09.08.2023ರ ಅವಧಿಯಲ್ಲಿ 15.799 ಟಿಎಂಸಿ ಅಡಿ ನೀರು ಮಾತ್ರ ಹರಿದಿದೆ. ಸಾಮಾನ್ಯ ಸಂದರ್ಭದಲ್ಲಿ ಈ ಅವಧಿಯಲ್ಲಿ ನೀರಿನ ಹರಿವಿನ ಪ್ರಮಾಣ 53.77 ಟಿಎಂಸಿ ಆಗಿರುತ್ತಿತ್ತು. ಹಾಗಾಗಿ, ಆಗಸ್ಟ್‌ 9ರ ವೇಳೆಗೆ 37.971 ಟಿಎಂಸಿ ಅಡಿ ನೀರು ಕೊರತೆಯಾಗಿದೆ. ಕೆಆರ್‌ಎಸ್‌ ಮತ್ತು ಕಬಿನಿ ಜಲಾಯಶಗಳಿಂದ 01.08.2023 ರಿಂದ 09.08.2023ರ ಅವಧಿಯಲ್ಲಿ 6.6 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್‌ಎಸ್‌ ಮತ್ತು ಕಬಿನಿಯಿಂದ ನಿತ್ಯ 15000 ಕ್ಯೂಸೆಕ್ಸ್‌ ನೀರನ್ನು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಲೆಕ್ಕಕ್ಕೆ ಸಿಗುವಂತೆ ಆಗಸ್ಟ್‌ 11ರಿಂದ ಬಿಡುಗಡೆ ಮಾಡುವಂತೆ ಸಿಡಬ್ಲುಆರ್‌ಸಿಯು ಕರ್ನಾಟಕದ ಸದಸ್ಯರಿಗೆ ನಿರ್ದೇಶಿಸಿತ್ತು ಎಂದು ತಮಿಳುನಾಡು ಅರ್ಜಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕ ನಾಲ್ಕು ಜಲಾಶಯಗಳಲ್ಲಿ ಆಗಸ್ಟ್‌ 8ರ ವೇಳೆಗೆ 93.535 ಅಡಿ ನೀರಿದ್ದು, ಇದೇ ಸಂದರ್ಭಕ್ಕೆ ಮೆಟ್ಟೂರು ಜಲಾಶಯದಲ್ಲಿ ಕುಡಿಯುವ ನೀರಿಗೆ ಬಳಕೆ ಮಾಡಿ 22.39 ಟಿಎಂಸಿ ಅಡಿ ಇತ್ತು. ಬಳಕೆಗೆ ಸಾಧ್ಯವಾಗದ ಮತ್ತು ನೀರಾವರಿ ವ್ಯವಸಾಯಕ್ಕೆ ಬಳಕೆ ಮಾಡಬಹುದಾದ ನೀರು 10 ಟಿಎಂಸಿ ಅಡಿ ನೀರು ಮಾತ್ರ. ಹೀಗಾಗಿ, ನೀರಿನ ಬಳಕೆಯನ್ನು 14000 ಕ್ಯೂಸೆಕ್ಸ್‌ನಿಂದ 7500 ಕ್ಯೂಸೆಕ್ಸ್‌ಗೆ ಇಳಿಸಲಾಗಿದೆ. ತಕ್ಷಣ ಕರ್ನಾಟಕ ನೀರು ಹರಿಸದಿದ್ದರೆ, ಮೆಟ್ಟೂರು ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಈಗ ಬಿಡುಗಡೆ ಮಾಡಲಾಗಿರುವ ನೀರನ್ನು ನಿರ್ವಹಿಸಲಾಗದು. ಆದ್ದರಿಂದ ತಕ್ಷಣ ಬ್ಯಾಕ್‌ಲಾಗ್‌ ನೀರನ್ನು ಬಿಡುಗಡೆ ಮಾಡಲು ಸಿಡಬ್ಲುಎಂಎಗೆ ನಿರ್ದೇಶಿಸಬೇಕು. ಆನಂತರ ಮಾಸಿಕವಾಗಿ ನೀರು ಬಿಡುಗಡೆ ಮಾಡಲು ಆದೇಶಿಸಬೇಕು. 2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್‌ ಆದೇಶ ಮತ್ತು ಸಿಡಬ್ಲುಎಂಎ ನಿರ್ದೇಶನದಂತೆ ಕರ್ನಾಟಕದ ಜಲಾಶಯಗಳಿಂದ ದಿನನಿತ್ಯ ನೀರು ಬಿಡುಗಡೆ ಮಾಡುವುದರ ಮೇಲೆ ನಿಗಾ ಇಡಲು ವ್ಯವಸ್ಥೆ ರೂಪಿಸಲು ಕೋರಲಾಗಿದೆ.

ಆಗಸ್ಟ್‌ 11ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲುಎಂಎ) ಸಭೆಯಲ್ಲಿ ಕರ್ನಾಟಕವು ತಮಿಳುನಾಡು ಕೋರಿಕೆಯಂತೆ 15,000 ಕ್ಯೂಸೆಕ್ಸ್‌ ನೀರು ಬಿಡುಗಡೆ ಅಸಾಧ್ಯ ಎಂದು ಹೇಳಿದ್ದು, 8,000 ಕ್ಯೂಸೆಕ್ಸ್‌ ಬಿಡುಗಡೆ ಮಾಡಲಾಗುವುದು ಎಂದಿತ್ತು. ಈ ಸಂಬಂಧ ತಮಿಳುನಾಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಗಂಭೀರ ಆಕ್ಷೇಪಣೆ ಎತ್ತಿದ್ದರು. ಆದರೆ, ಸಿಡಬ್ಲುಎಂಎಯು ಸ್ವೇಚ್ಛೆಯಿಂದ ಕೆಅರ್‌ಎಸ್‌ ಮತ್ತು ಕಬಿನಿಯಿಂದ ಒಟ್ಟು 10000 ಕ್ಯೂಸೆಕ್ಸ್‌ ನೀರನ್ನು ಆಗಸ್ಟ್‌ 12ರಿಂದ ಮುಂದಿನ 15 ದಿನಗಳವರೆಗೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೆಟ್ಟೂರು ಜಲಾಶಯವನ್ನು ನಂಬಿ 4.913 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ವ್ಯವಸಾಯ ಮಾಡಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಸಕ್ತ ಮಾನ್ಸೂನ್‌ನಲ್ಲಿ ಕುರುವೈ ಫಸಲು ಮಾಡಲಾಗಿದೆ. ಹೀಗಾಗಿ, ನೈರುತ್ಯ ಮಾನ್ಸೂನ್‌ ವೇಳೆಗೆ ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ ಅತಿಮುಖ್ಯವಾಗಿದೆ. 40 ಲಕ್ಷ ರೈತರು ಮತ್ತು 1 ಕೋಟಿ ಕಾರ್ಮಿಕರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೆಟ್ಟೂರು ಜಲಾಶಯವನ್ನು ಜೀವನಕ್ಕಾಗಿ ಆಧರಿಸಿದ್ದಾರೆ. ಹೀಗಾಗಿ, ನೀರಿನ ಕೊರತೆಯು ಕೃಷಿ ಉತ್ಪಾದನೆಗೆ ಹೊಡೆತ ನೀಡಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಿಳಿಗುಂಡ್ಲು ಮುಖಾಂತರ 01.06.2023 ರಿಂದ 10.08.2023ರ ಅವಧಿಯಲ್ಲಿ 16.387 ಟಿಎಂಸಿ ಅಡಿ ನೀರು ಹರಿದಿದ್ದು, ವಾಸ್ತವಿಕವಾಗಿ 55.253 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಇದರಿಂದ 38.860 ಟಿಎಂಸಿ ಅಡಿ ನೀರು ಕೊರತೆಯಾಗಿದೆ. ಕರ್ನಾಟಕದ ನಾಲ್ಕು ಜಲಾಶಯಗಳಿಗೆ 01.06.2023 ಮತ್ತು 10.08.2023ರ ನಡುವೆ ಶೇ. 61ರಷ್ಟು ಒಳಹರಿವು ಇತ್ತು ಎಂದು ಕರ್ನಾಟಕ ಹೇಳಿದೆ. ಆದರೂ ತಮಿಳುನಾಡಿಗೆ ಶೇ. 61ರಷ್ಟರಲ್ಲಿ ನಿರ್ದಿಷ್ಟ ಭಾಗ ನೀರು ದೊರೆತಿಲ್ಲ ಎಂದು ವಾದಿಸಲಾಗಿದೆ.

01.08.2023ರ ವೇಳೆಗೆ ಕರ್ನಾಟಕದಲ್ಲಿನ ನೀರಿನ ಸಂಗ್ರಹದ ಗರಿಷ್ಠ ಮಟ್ಟ 114.6 ಟಿಎಂಸಿ ಅಡಿಗೆ ಬದಲಾಗಿ 91.9 ಟಿಎಂಸಿ ಅಡಿ ಇದೆ. ಅದಾಗ್ಯೂ, 01.08.2023 ರಿಂದ 07.08.2023ರವರೆಗೆ ಏಳು ದಿನಗಳವರೆಗೆ 10,000 ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡುವಾಗಲೂ ಸಿಡಬ್ಲುಎಂಎ ನಿರ್ದೇಶನವನ್ನು ಕರ್ನಾಟಕ ಪಾಲಿಸಿಲ್ಲ. ಈ ಮೂಲಕ ನಿರ್ದೇಶನಗಳಿಗೆ ಅಗೌರವ ತೋರಲಾಗಿದೆ. ಅಲ್ಲದೇ, ಕಾವೇರಿ ನೀರನ್ನೇ ಆಧರಿಸಿರುವ ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿಗೆ ಗಂಭೀರ ಹಾನಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com