ಕಾವೇರಿ ನದಿ ನೀರು ವಿವಾದ: ಕೇಂದ್ರ, ಸಿಡಬ್ಲ್ಯುಎಂಎಗೆ ನಿರ್ದೇಶನ ಕೋರಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಇದು ಅಂತಾರಾಜ್ಯ ನದಿ ನೀರು ವಿಚಾರವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ನದಿ ನೀರು ವ್ಯಾಜ್ಯ ಕಾಯಿದೆ ಅನ್ವಯ ಈ ವಿಚಾರಗಳಲ್ಲಿ ಹೈಕೋರ್ಟ್ ಯಾವುದೇ ಆದೇಶ ನೀಡಲಾಗದು, ಸುಪ್ರೀಂ ಕೋರ್ಟ್ ಮಾತ್ರ ವಿಚಾರಣೆ ನಡೆಸಿ ಆದೇಶ ಮಾಡಬಹುದು ಎಂದ ಪೀಠ.
High Court of Karnataka
High Court of Karnataka

ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಾಲಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ತಿಳಿಸುವ ಕಾಲಂ ಅನ್ನು ಕಾವೇರಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಸೇರ್ಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಅಂಗೀಕರಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಬೆಂಗಳೂರಿನ 'ಜಾಗೃತ ಕರ್ನಾಟಕ ಜಾಗೃತ ಭಾರತ' ಸಂಘಟನೆಯ ಅಧ್ಯಕ್ಷ ಕೆ ಎನ್ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರು ತಮ್ಮ ವಾದವನ್ನು ಮಂಡಿಸಲು ಮುಂದಾದಾಗ ಮಧ್ಯಪ್ರವೇಶಿಸಿದ ಪೀಠವು ಅರ್ಜಿಗೆ ಹೈಕೋರ್ಟ್‌ನ ಕಚೇರಿ ಕೆಲವೊಂದು ಆಕ್ಷೇಪಣೆಗಳನ್ನು ಎತ್ತಿದೆ, ಅವುಗಳನ್ನು ಮೊದಲು ನೀವು ಸರಿಪಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಅದಕ್ಕೆ ಉತ್ತರಿಸಿದ ಅರ್ಜಿದಾರರು, ಇದು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಮುಖ ವಿಚಾರವಾಗಿದೆ. ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಕೆಲವೊಂದು ತಪ್ಪಾಗಿದ್ದು, ಅವುಗಳನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದರು.

ಆಗ ಆಗ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಇದು ಅಂತಾರಾಜ್ಯ ನದಿ ನೀರು ವಿಚಾರವಾಗಿದೆ. ಅಂತಾರಾಜ್ಯ ನದಿ ನೀರು ವ್ಯಾಜ್ಯ ಕಾಯಿದೆ- 1956ರ ಅನ್ವಯ ಈ ವಿಚಾರಗಳಲ್ಲಿ ಹೈಕೋರ್ಟ್ ಯಾವುದೇ ಆದೇಶ ನೀಡಲಾಗದು. ಸುಪ್ರೀಂ ಕೋರ್ಟ್ ಮಾತ್ರ ಅಂತಹ ವಿಚಾರಗಳಲ್ಲಿ ವಿಚಾರಣೆ ನಡೆಸಿ ಅದೇಶ ನೀಡಬಹುದಾಗಿದೆ ಎಂದು ತಿಳಿಸಿದರು.

Also Read
ಸುಪ್ರೀಂನಲ್ಲಿ ಗುರುವಾರ ಕಾವೇರಿ ನದಿ ನೀರು ವಿವಾದದ ವಿಚಾರಣೆ: ಮಧ್ಯಪ್ರವೇಶಿಸಲು ಕೋರಿದ ಬೆಂಗಳೂರಿನ ಎಂಟು ಸಂಸ್ಥೆಗಳು

ಅಂತಿಮವಾಗಿ, ಮೊದಲಿಗೆ ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಎತ್ತಿರುವ ಆಕ್ಷೇಪಗಳಿಗೆ ಅರ್ಜಿದಾರರು ಉತ್ತರ ನೀಡಿಲ್ಲ. ಅಂತಾರಾಜ್ಯ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಾತ್ರ ಅರ್ಜಿಗಳನ್ನು ಪುರಸ್ಕರಿಸಬಹುದು. ಇತರೆ ನ್ಯಾಯಾಲಯಗಳಿಗೆ ನಿರ್ಬಂಧ ಇದೆ. ಹಾಗಾಗಿ, ಅರ್ಜಿದಾರರ ಮನವಿಗಳನ್ನು ಈ ಹೈಕೋರ್ಟ್‌‌ ಪುರಸ್ಕರಿಸಲಾಗದು. ಅಗತ್ಯವಿದ್ದರೆ ಅರ್ಜಿದಾರರು ಇತರೆ ಪರ್ಯಾಯ ವೇದಿಕೆಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸಿ ಅರ್ಜಿ ವಜಾಗೊಳಿಸಿತು.

ಕರ್ನಾಟಕ ಪಾಲಿಗೆ ಹಂಚಿಕೆಯಾಗಿರುವ ಕಾವೇರಿ ನದಿ ನೀರಿನ ಪ್ರಮಾಣವನ್ನು ತಿಳಿಸುವ ಕಾಲಂ ಕಾವೇರಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಇಲ್ಲ. ಆದರೆ, ತಮಿಳುನಾಡಿಗೆ ಸಂಬಂಧಿಸಿದ ಕಾಲಂ ಮಾತ್ರ ಇದೆ. ಆದ್ದರಿಂದ, ಕರ್ನಾಟಕದ ಕಾಲಂ ಅನ್ನು ನ್ಯಾಯಾಧಿಕರಣ ತೀರ್ಪಿನಲ್ಲಿ ಸೇರ್ಪಡಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com