ಇ ಡಿ ಪ್ರಕರಣದಲ್ಲಿ ದೊರೆತಿದ್ದ ಜಾಮೀನು ವಿಫಲಗೊಳಿಸಲೆಂದು ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತು: ನ್ಯಾ. ಭುಯಾನ್

ಕೇಂದ್ರ ಸರ್ಕಾರದ ಪಂಜರದ ಗಿಣಿ ಎಂದು ತನ್ನ ಬಗ್ಗೆ ಇರುವ ಕಲ್ಪನೆಯನ್ನು ತೊಡೆಯಲು ಸಿಬಿಐ ಮುಂದಾಗಬೇಕು ಎಂದು ನ್ಯಾಯಮೂರ್ತಿಗಳು ಕಿವಿಮಾತು ಹೇಳಿದರು.
Justice Ujjal Bhuyan
Justice Ujjal Bhuyan
Published on

ದೆಹಲಿ ಅಬಕಾರಿ ನೀತಿಗೆ  ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯದ (ಇ ಡಿ) ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ವಿಫಲಗೊಳಿಸಲೆಂದು ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿತ್ತು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಶುಕ್ರವಾರ ತಿಳಿಸಿದರು.

ಸಿಬಿಐ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡುವ ವೇಳೆ ಪ್ರಕಟಿಸಿದ ತಮ್ಮ ಪ್ರತ್ಯೇಕವಾದ ಆದರೆ ಸಹಮತದ ತೀರ್ಪಿನಲ್ಲಿ, ನ್ಯಾಯಮೂರ್ತಿ ಭುಯಾನ್ ಅವರು ಈ ವಿಚಾರ ತಿಳಿಸಿದರು.

Also Read
ದೆಹಲಿ ಅಬಕಾರಿ ನೀತಿ ಕುರಿತ ಸಿಬಿಐ ಪ್ರಕರಣ: ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ ಜಾಮೀನು

“ಸಿಬಿಐ ಬಂಧನ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಾರ್ಚ್‌ 2023ರಲ್ಲಿಯೇ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತಾದರೂ ಅವರನ್ನು ಸಿಬಿಐ ಬಂಧಿಸಲಿಲ್ಲ, ಬದಲಿಗೆ ಇ ಡಿ ಪ್ರಕರಣದಲ್ಲಿ ಅವರ ಬಂಧನಕ್ಕೆ ತಡೆ ನೀಡಿದ ನಂತರವಷ್ಟೇ ಸಿಬಿಐ ಕ್ರಿಯಾಶೀಲವಾಯಿತು. ಹೀಗಾಗಿ 22 ತಿಂಗಳಿಗೂ ಹೆಚ್ಚು ಕಾಲ ಸುಮ್ಮನಿದ್ದ ಸಿಬಿಐ ಆನಂತರ ಕಾರ್ಯಪ್ರವೃತ್ತವಾಗಿ ಕೇಜ್ರಿವಾಲ್‌ ಅವರನ್ನು ವಶಕ್ಕೆ ನೀಡುವಂತೆ ಕೋರಿತು. ಸಿಬಿಐನ ಇಂತಹ ಕ್ರಮ ಬಂಧನದ ಸಂದರ್ಭದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕುತ್ತದೆ. ಸಿಬಿಐ ಬಂಧನ ಇಡಿ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ಹತಾಶೆಗೊಳಿಸುವುದಾಗಿದೆ” ಎಂದರು.

“ಪಂಜರದ ಗಿಣಿ ಎನ್ನುವ ತನ್ನ ಬಗ್ಗೆ ಇರುವ ಕಲ್ಪನೆಯನ್ನು ತೊಡೆಯಲು ಸಿಬಿಐ ಮುಂದಾಗಬೇಕು. ತಾನು ಬಂಧಮುಕ್ತ ಗಿಣಿ ಎಂದು ಅದು ನಿರೂಪಿಸಬೇಕು. ಅದು ಸಂಶಾಯತೀತವಾಗಿರಬೇಕು” ಎಂದು ಅವರು ಕಿವಿಮಾತು ಹೇಳಿದರು.

ವಿಚಾರಣೆ ವೇಳೆ ಸಿಬಿಐ ಬಂಧನ ಕಾನೂನುಬದ್ಧವಾಗಿದೆ ಎಂದು ನ್ಯಾ. ಸೂರ್ಯಕಾಂತ್‌ ತಿಳಿಸಿದರೆ ಇದಕ್ಕೆ ನ್ಯಾ. ಭುಯಾನ್‌  ಅಸಮ್ಮತಿ ವ್ಯಕ್ತಪಡಿಸಿದರು.

“ಇ ಡಿ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ದೊರೆತಿರುವಾಗ ಕೇಜ್ರಿವಾಲ್‌ ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿ ಜಾಮೀನು ಪಡೆಯಬೇಕಿತ್ತು ಎಂಬ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರ ವಾದವನ್ನು ಪುರಸ್ಕರಿಸಲಾಗದು. ಈ ಪ್ರಕರಣದಲ್ಲಿ ಮತ್ತೊಮ್ಮೆ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದು ಸಂಪೂರ್ಣ ಅಸಮರ್ಥನೀಯ” ಎಂದ ಅವರು “ಜಾಮೀನಿಗೆ ಆದ್ಯತೆ ನೀಡುವುದು ವಿಕಸಿತ ನ್ಯಾಯಶಾಸ್ತ್ರ ವ್ಯವಸ್ಥೆಯ ಒಂದು ಮುಖ. ಜಾಮೀನಿಗೇ ಆದ್ಯತೆ ಅನಿವಾರ್ಯವಾದರೆ ಮಾತ್ರ ಜೈಲು ಎನ್ನುವುದನ್ನು ಮನಗಾಣಬೇಕು. ವಿಚಾರಣಾ ಪ್ರಕ್ರಿಯೆ ಅಥವಾ ಬಂಧನಕ್ಕೆ ಕಾರಣವಾಗುವ ಹಂತಗಳು ಕಿರುಕುಳವಾಗಿ ಮಾರ್ಪಡಾಗಬಾರದು, ಹೀಗಾಗಿ ಸಿಬಿಐ ಬಂಧನವು ನ್ಯಾಯಸಮ್ಮತವಲ್ಲ ಹಾಗಾಗಿ ಮೇಲ್ಮನವಿದಾರರನ್ನು (ಕೇಜ್ರಿವಾಲ್) ತಕ್ಷಣವೇ ಬಿಡುಗಡೆ ಮಾಡಬೇಕು” ಎಂದು ಆದೇಶಿಸಿದರು.

ತನಿಖೆಗೆ ಸಹಕರಿಸುವುದು ಎಂದರೆ ಆರೋಪಿಯು ಪ್ರಾಸಿಕ್ಯೂಷನ್ ಬಯಸಿದ ರೀತಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಲ್ಲ ಎಂಬುದಾಗಿ ನ್ಯಾಯಮೂರ್ತಿಗಳು ಸಿಬಿಐ ಕಿವಿ ಹಿಂಡಿದರು.

Also Read
ʼಹಾವು ಏಣಿ ಆಟʼದ ವಾದಕ್ಕೆ ಸಾಕ್ಷಿಯಾದ ಕೇಜ್ರಿವಾಲ್ ಜಾಮೀನು ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

“ಇ ಡಿ ಪ್ರಕರಣದಲ್ಲಿ ಕೇಜ್ರಿವಾಲ್ ಜಾಮೀನಿನ ಮೇಲೆ ಇರುವಾಗ ಅವರನ್ನು ಜೈಲಿನಲ್ಲಿಡುವುದು ನ್ಯಾಯದ ಅಪಹಾಸ್ಯವಾಗುತ್ತದೆ. ಬಂಧನದ ಅಧಿಕಾರವನ್ನು ಮಿತವಾಗಿ ಬಳಸಬೇಕು. ಕಿರುಕುಳ ನೀಡಲೆಂದು ಕಾನೂನನ್ನು ಬಳಸುವಂತಿಲ್ಲ” ಎಂದರು.

ದೆಹಲಿ ಸಚಿವಾಲಯ ಪ್ರವೇಶಿಸದಂತೆ ಮತ್ತು ಕಡತಗಳಿಗೆ ಸಹಿ ಹಾಕದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ವಿಧಿಸಿದ್ದ ಷರತ್ತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಭುಯಾನ್‌ ಆದರೆ ಅದು ಬೇರೊಂದು ಇ ಡಿ ಪ್ರಕರಣವಾಗಿರುವುದರಿಂದ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Kannada Bar & Bench
kannada.barandbench.com