ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಆರೋಪಿಯಾಗಿರುವ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳನ್ನು ಶನಿವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ 2019ರ ಸೆಪ್ಟೆಂಬರ್ 6ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಹಾಗೂ ಸಿಬಿಐ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ವಿನಯ್ ಕುಲಕರ್ಣಿ ಮತ್ತು ಬಸವರಾಜ ಶಿವಪ್ಪ ಮುತ್ತಗಿ ಮತ್ತಿತರರು ಸಲ್ಲಿಸಿದ್ದ ತಕರಾರು ಮನವಿಗಳಿಗೆ ಸಂಬಂಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಎನ್ ಎಸ್ ಸಂಜಯ್ ಗೌಡ ನೇತೃತ್ವದ ರಜಾ ಕಾಲದ ವಿಭಾಗೀಯ ಪೀಠ ಪ್ರಕಟಿಸಿದೆ. ಪ್ರಕರಣದ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ. ಈಗ ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರ್ಕಾರವು ಹೊಸದಾಗಿ ತನಿಖೆ ನಡೆಸುವಂತೆ ಸೂಚಿಸಿದೆ. ಜತೆಗೆ, ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2ನೇ ಎಫ್‌ಐಆರ್ ದಾಖಲಿಸಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಮೃತರ ತಾಯಿ ಹಾಗೂ ಸಹೋದರ ಸಲ್ಲಿಸಿದ್ದ ಅರ್ಜಿಗಳನ್ನು ಇದೇ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ. ಹೀಗಿದ್ದರೂ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಕ್ರಮ ಕಾನೂನುಬಾಹಿರ ಎಂದು ಆಕ್ಷೇಪಿಸಿದ್ದರು.
ಇದಕ್ಕೆ ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಸಿಬಿಐ ತನಿಖೆಗೆ ವಹಿಸಲಾಗಿದೆ. ಹೆಚ್ಚುವರಿ ತನಿಖೆಯ ಅಗತ್ಯವಿರುವುದನ್ನು ಮನಗಂಡ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದೆ. ಇದು ಸರ್ಕಾರ ಕೈಗೊಂಡ ಆಡಳಿತಾತ್ಮಕ ಕ್ರಮವಾಗಿದ್ದು, ಇದರಲ್ಲಿ ಯಾವುದೇ ಲೋಪವಿಲ್ಲ ಎಂದಿದೆ.
ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ತೀರ್ಪು ನೀಡುವ ಹಂತದಲ್ಲಿದೆ. ಈ ಹಂತದಲ್ಲಿ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ಹೆಚ್ಚುವರಿ ತನಿಖೆ ನಡೆಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ಜಿಲ್ಲಾ ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿಗಳು ಹಸ್ತಕ್ಷೇಪ ಮಾಡಿದ್ದು, ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳಿಗೆ ಬೆದರಿಕೆಯೊಡ್ಡಿ, ಪ್ರತಿಕೂಲ ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದಾರೆ ಎಂಬ ವಿಚಾರ ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ. ಆದ್ದರಿಂದ, ಕಾನೂನು ಚೌಕಟ್ಟಿನಲ್ಲಿ ಸಿಬಿಐ ನಡೆಸುತ್ತಿರುವ ಹೆಚ್ಚುವರಿ ತನಿಖೆಯನ್ನು ಪ್ರಶ್ನಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಸಿಬಿಐ ತನಿಖೆಗೆ ಆದೇಶಿಸಿರುವುದು ರಾಜಕೀಯ ಪ್ರೇರಿತ ಕ್ರಮ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಸಿಬಿಐ ತನಿಖೆ ಅಗತ್ಯವಿರುವುದರಿಂದಲೇ ಸರ್ಕಾರ ಅನುಮತಿ ನೀಡಿದೆ. ತನಿಖಾ ಸಂಸ್ಥೆಯನ್ನು ಆಯ್ಕೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಇಂಥದ್ದೇ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕೋರಲು ಆರೋಪಿಗಳಿಗೆ ಅಧಿಕಾರವಿಲ್ಲ. ಆರಂಭದಲ್ಲಿ ಎಫ್‌ಐಆರ್ ದಾಖಲಿಸಿದ್ದ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ತನಿಖೆ ವಹಿಸಿಕೊಂಡ ಸಿಬಿಐ ಧಾರವಾಡ ಉಪನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಮರುನೋಂದಣಿ ಮಾಡಿಕೊಂಡಿದೆಯೇ ವಿನಾ ಎರಡನೇ ಎಫ್‌ಐಆರ್ ದಾಖಲಿಸಿಲ್ಲ. ಇದರಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ದರಿಂದ ಆರೋಪಿಗಳು ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕು ಎಂದು ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಪೀಠಕ್ಕೆ ಮನವಿ ಮಾಡಿದ್ದರು.
2016ರ ಜೂನ್ 15ರಂದು ಬಿಜೆಪಿ ಮುಖಂಡ ಯೋಗೀಶ ಗೌಡ ಹತ್ಯೆಯಾಗಿತ್ತು. ಪ್ರಕರಣದ ಸಂಬಂಧ ಬಸವರಾಜ್ ಶಿವಪ್ಪ ಮುತ್ತಗಿ, ವಿಕ್ರಮ್ ಉದಯ ಕುಮಾರ್ ಬಳ್ಳಾರಿ, ಕೀರ್ತಿ ಕುಮಾರ್ ಬಸವರಾಜ್ ಕಮಟ್ಟಿ ಮತ್ತಿತರರನ್ನು ಬಂಧಿಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ, ಕ್ರಿಮಿನಲ್ ಒಳಸಂಚು, ಅಕ್ರಮ ಕೂಟ, ದರೋಡೆ, ಸಾಕ್ಷ್ಯ ನಾಶ ಆರೋಪದಡಿ ತನಿಖೆ ನಡೆಸಿ, ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಮೃತ ಯೋಗೀಶ ಗೌಡ ತಾಯಿ ತುಂಗಮ್ಮ ಹಾಗೂ ಸಹೋದರ ಗುರುನಾಥ ಗೌಡರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್, ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಸಹ ವಜಾಗೊಳಿಸಿತ್ತು. ಈ ಮಧ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ 2019ರ ಸೆಪ್ಟೆಂಬರ್ 6ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ.