ಶಾರೂಖ್ ಜೊತೆಗಿನ ವಾಟ್ಸಾಪ್ ಸಂವಾದ ಬಹಿರಂಗಕ್ಕೆ ಸಿಬಿಐ ಆಕ್ಷೇಪ: ಸಮೀರ್ ವಾಂಖೆಡೆಗೆ ಬಾಂಬೆ ಹೈಕೋರ್ಟ್ ನಿರ್ಬಂಧ

ವಾಟ್ಸಾಪ್ ಮೂಲಕ ಯಾವುದೇವಿಷಯ ಪ್ರಕಟಿಸಬಾರದು, ಪತ್ರಿಕಾ ಹೇಳಿಕೆ ನೀಡಬಾರದು ಅಥವಾ ಸಾಕ್ಷ್ಯ ಹಾಳುಮಾಡಬಾರದು ಎಂಬ ಷರತ್ತಿನೊಂದಿಗೆ ಜೂನ್ 8 ರವರೆಗೆ ಸಮೀರ್ ಅವರನ್ನು ಬಂಧಿಸದಂತೆ ರಜಾಕಾಲೀನ ಪೀಠ ಮಧ್ಯಂತರ ರಕ್ಷಣೆ ನೀಡಿದೆ.
Sameer Wankhede and Bombay High Court
Sameer Wankhede and Bombay High Court
Published on

ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು 2021ರಲ್ಲಿ ಬಂಧಿಸಿದ್ದಾಗ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಮಾದಕವಸ್ತು ನಿಯಂತ್ರಣ ದಳದ ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್‌ ವಾಂಖೆಡೆ ಅವರ ವಿರುದ್ಧ ಹೂಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಬಾಂಬೆ ಹೈಕೋರ್ಟ್‌ ಜೂನ್‌  8ರವರೆಗೆ ವಿಸ್ತರಿಸಿದೆ.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್‌ ಮೂಲಕವಾಗಲಿ ಅಥವಾ ಇನ್ನಾವುದೇ ಮಾಧ್ಯಮದ ಮೂಲಕವಾಗಲಿ ಯಾವುದೇ ವಿಷಯ ಪ್ರಕಟಿಸಬಾರದು, ಪತ್ರಿಕಾ ಹೇಳಿಕೆ ನೀಡಬಾರದು ಹಾಗೂ ಸಾಕ್ಷ್ಯ ಹಾಳು ಮಾಡಬಾರದು ಎಂದು ನ್ಯಾಯಮೂರ್ತಿಗಳಾದ ಅಭಯ್ ಅಹುಜಾ ಮತ್ತು ಎಂ ಎಂ ಸಥಯೆ ಅವರಿದ್ದ ರಜಾಕಾಲೀನ ಪೀಠ ಷರತ್ತು ವಿಧಿಸಿತು. ನ್ಯಾಯಾಲಯದ ಕೆಲಸದ ಅವಧಿ ಮುಗಿಯುವುದರೊಳಗೆ ಅಫಿಡವಿಟ್‌ ಸಲ್ಲಿಸುವಂತೆಯೂ ಸಮೀರ್‌ ಅವರಿಗೆ ಪೀಠ ಆದೇಶಿಸಿತು.

ಶಾರೂಖ್‌ ಜೊತೆಗಿನ ವಾಟ್ಸಾಪ್‌ ಸಂವಾದ ಬಹಿರಂಗಪಡಿಸಿ ಅದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದನ್ನು ಸಿಬಿಐ ಆಕ್ಷೇಪಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತು ವಿಧಿಸಿತು.

ಸಿಬಿಐ ಪರವಾಗಿ ಕುಲದೀಪ್‌ ಪಾಟೀಲ್‌, ವಾಂಖೆಡೆ ಪರವಾಗಿ ಅಬಾದ್‌ ಪಾಂಡಾ ವಾದ ಮಂಡಿಸಿದರು. ವಾದ ಆಲಿಸುವ ವೇಳೆ ವಾಂಖೆಡೆ ಅವರ ಕಾರ್ಯ ವೈಖರಿಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತಾದರೂ ಮೇ 19 ರಂದು ನೀಡಲಾದ ರಕ್ಷಣೆಯನ್ನು ಜೂನ್ 8 ರವರೆಗೆ ವಿಸ್ತರಿಸುವುದು ಸೂಕ್ತವೆಂದು ಪರಿಗಣಿಸಿತು.

Also Read
ಆರ್ಯನ್‌ ಖಾನ್‌ ಪ್ರಕರಣ: ಮುಖ್ಯ ತನಿಖಾಧಿಕಾರಿ ಹುದ್ದೆಯಿಂದ ಸಮೀರ್‌ ವಾಂಖೆಡೆ ವರ್ಗಾವಣೆ

ಮುಂಬೈ- ಗೋವಾ ನಡುವೆ ಸಂಚರಿಸುತ್ತಿದ್ದ ಐಷಾರಾಮಿ ಹಡಗಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಎನ್‌ಸಿಬಿ ಮುಂಬೈ ಘಟಕ ಆರ್ಯನ್‌ ಖಾನ್‌ ವಿರುದ್ಧ ಮಾದಕವಸ್ತು ಪ್ರಕರಣ ದಾಖಲಿಸಿತ್ತು. ಹೀಗಾಗಿ ಆರ್ಯನ್‌ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು. ಆರ್ಯನ್‌ ಅವರಿಗೆ ಮೇ 27, 2022 ರಂದು ಪ್ರಕರಣದಿಂದ ಕ್ಲೀನ್ ಚಿಟ್ ನೀಡಲಾಗಿತ್ತು.

ಬಳಿಕ ಸಿಬಿಐ, ವಾಂಖೆಡೆ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಆರಂಭದಲ್ಲಿ ವಾಂಖೆಡೆ ಅವರು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಾದೇಶಿಕ ನ್ಯಾಯವ್ಯಾಪ್ಗಿ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ನಿಂದ ಅರ್ಜಿ ಹಿಂಪಡೆದಿದ್ದ ವಾಂಖೆಡೆ ಅವರಿಗೆ ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯ ನೀಡಲಾಗಿತ್ತು.

ನಂತರ, ಎಫ್‌ಐಆರ್ ರದ್ದುಗೊಳಿಸುವಂತೆ ಹಾಗೂ ಮಧ್ಯಂತರ ಪರಿಹಾರ ನೀಡುವಂತೆ ಕೋರಿ ವಕೀಲ ಕರಣ್ ಜೈನ್ ಮೂಲಕ ಪ್ರಸ್ತುತ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನಲ್ಲಿ ವಾಂಖೆಡೆ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com