ಜಯಲಲಿತಾ ವಜ್ರಾಭರಣ ತಮಿಳುನಾಡಿಗೆ ಹಸ್ತಾಂತರ: ಆಸ್ತಿ ಹರಾಜಿನ ಹಣವನ್ನು ಗ್ರಾಮೀಣರ ಶಿಕ್ಷಣ, ಆರೋಗ್ಯಕ್ಕೆ ಬಳಸಲು ಆದೇಶ

ದಂಡವಾಗಿ ಪಾವತಿಯಾಗಿರುವ ₹20 ಕೋಟಿ ₹20 ಸಾವಿರದ ಪೈಕಿ ₹13 ಕೋಟಿಯನ್ನು ಕರ್ನಾಟಕ ಸರ್ಕಾರದ ಖಾತೆಗೆ ಮತ್ತು ಉಳಿದ ₹7 ಕೋಟಿ ₹20 ಸಾವಿರವನ್ನು ತಮಿಳುನಾಡು ಸರ್ಕಾರದ ಖಾತೆಗೆ ವರ್ಗಾಯಿಸುವಂತೆ ನ್ಯಾಯಾಲಯವು ಕಚೇರಿಗೆ ಆದೇಶಿಸಿದೆ.
Tamilnadu former CM J Jayalalithaa
Tamilnadu former CM J Jayalalithaa
Published on

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಮತ್ತು ಇತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸುವ ಪ್ರಕ್ರಿಯೆಯನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಶನಿವಾರ ಪೂರ್ಣಗೊಳಿಸಿದೆ. ಆ ಮೂಲಕ ಸರಿ ಸುಮಾರು ಮೂರು ದಶಕಗಳ ಬಳಿಕ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ. ತಮಿಳುನಾಡಿಗೆ ಮರಳಿಸಿರುವುದರಲ್ಲಿ ಜಯಲಲಿತಾ ಅವರ ಚಿನ್ನದ ಡಾಬು, ಕಿರೀಟ, ಕತ್ತಿ, ವಿವಿಧ ವಿನ್ಯಾಸದ ಆಕರ್ಷಕ ಸರಗಳು, ವಜ್ರ ವೈಢೂರ್ಯ ಸೇರಿವೆ.

ತಮಿಳುನಾಡಿನ ಗೃಹ ಮತ್ತು ಅಬಕಾರಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೆ ಅನ್ನೆ ಮೇರಿ ಸ್ವರ್ಣಾ, ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ವಿಶೇಷ ತನಿಖಾ ತಂಡದ ಪೊಲೀಸ್‌ ವರಿಷ್ಠಾಧಿಕಾರಿ ವಿಮಲಾ, ಉಪ ಪೊಲೀಸ್‌ ವರಿಷ್ಠಾಧಿಕಾರಿ ಪುಗಳ್‌ ವೆಂದನ್‌ ನೇತೃತ್ವದ ತಂಡಕ್ಕೆ ವಜ್ರಾಭರಣ, ನಗದನ್ನು ಮರಳಿಸಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಅವರು ಆದೇಶದಲ್ಲಿ ದಾಖಲಿಸಿದ್ದಾರೆ.

H A Mohan, Judge, CBI Special Court
H A Mohan, Judge, CBI Special Court

ತಮಿಳುನಾಡಿನ ಪರವಾನಗಿ ಹೊಂದಿರುವ ಪ್ರಭಾಕರ್‌ ಅವರು ವಜ್ರಾಭರಣಗಳನ್ನು ತೂಕ ಮಾಡಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ಹಿರಿಯ ವಕೀಲ ಕಿರಣ್‌ ಜವಳಿ ಅವರು ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ವಜ್ರ, ಪಚ್ಚೆ ಮತ್ತು ಮಾಣಿಕ್ಯದ ಹರಳುಗಳನ್ನು ಒಳಗೊಂಡ ಚಿನ್ನಾಭರಣಗಳನ್ನು ತಮಿಳುನಾಡು ಅಧಿಕಾರಿಗಳ ತಂಡ ಸ್ವೀಕರಿಸಿದೆ. 27 ಸಾವಿರ ಗ್ರಾಂ ತೂಕದ ಮೂರು ಬೆಳ್ಳಿ ವಸ್ತುಗಳನ್ನು (ಚಿನ್ನಾಭರಣಗಳನ್ನು ಇಡಲು ಬಳಕೆ ಮಾಡುವ ಸಣ್ಣ ಪೆಟ್ಟಿಗೆಗಳು ಸೇರಿ) ತಮಿಳುನಾಡಿಗೆ ಮರಳಿಸಲಾಗಿದೆ. ₹59,870 ಮತ್ತು ₹1,60,514 ಹಳೆಯ ನೋಟುಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸಲಾಗಿದ್ದ, ನೋಟು ಅಮಾನ್ಯೀಕರಣದಿಂದ ಮೌಲ್ಯ ಕಳೆದುಕೊಂಡಿರುವ ಆ ನೋಟುಗಳನ್ನು ಆರ್‌ಬಿಐ ತಮಿಳುನಾಡು ಸರ್ಕಾರಕ್ಕೆ ಬದಲಿಸಿಕೊಡಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ಚಿನ್ನದ ತಟ್ಟೆ
ಚಿನ್ನದ ತಟ್ಟೆ

₹10 ಕೋಟಿ ನಿಶ್ಚಿತ ಠೇವಣಿ; ಐಷಾರಾಮಿ ಬಸ್‌ ಹರಾಜು

2023ರವರೆಗೆ ₹10,18,78,591 ಕೋಟಿ ಮೌಲ್ಯದ ನಿಶ್ಚಿತ ಠೇವಣಿ ರಸೀದಿಯೂ ನ್ಯಾಯಾಲಯದ ವಶದಲ್ಲಿದ್ದು, ಎಲ್ಲಾ ಹಣವನ್ನು ತಮಿಳುನಾಡು ಸರ್ಕಾರಕ್ಕೆ ಎಲ್ಲಾ ಬ್ಯಾಂಕ್‌ಗಳು ವರ್ಗಾಯಿಸಬೇಕು. ತಮಿಳುನಾಡು ಸರ್ಕಾರಕ್ಕೆ ವರ್ಗಾವಣೆ ಪ್ರಕ್ರಿಯೆ ಮೇಲೆ ಡಿವೈಎಸ್‌ಪಿ ಪುಗಳ್‌ ವೆಂದನ್‌ ನಿಗಾ ಇಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಜಯಲಲಿತಾ ಅವರ ಚಿನ್ನದ ಕಿರೀಟ
ಜಯಲಲಿತಾ ಅವರ ಚಿನ್ನದ ಕಿರೀಟ

ಜಫ್ತಿ ಪ್ರಕ್ರಿಯೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿರುವ ಐಷಾರಾಮಿ ಬಸ್‌ ಚೆನ್ನೈನ ಎಸ್‌ಐಟಿ ವಶದಲ್ಲಿದ್ದು, ಅದರ ಮಾಲೀಕತ್ವದ ಬಗ್ಗೆ ಯಾರೂ ಚಕಾರ ಎತ್ತಿಲ್ಲವಾದ್ದರಿಂದ ಅದನ್ನು ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಿ ತಮಿಳುನಾಡು ಸರ್ಕಾರದ ಖಾತೆಗೆ ಹಣ ಜಮೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

1,526 ಎಕರೆ ವಶ; ನಿವೇಶನ ಹಂಚಲು ನ್ಯಾಯಾಲಯ ಸಲಹೆ

2014ರ ಸೆಪ್ಟೆಂಬರ್‌ 27ರಂದು ಆರು ಕಂಪೆನಿಗಳ ಹೆಸರಿನಲ್ಲಿ ಚೆನ್ನೈ, ತಾಂಜಾವೂರು, ಚೆಂಗಲಪಟ್ಟು, ಕಾಂಚೀಪುರಂ, ತಿರುವಳ್ಳೂರು, ಥೂತುಕುಡಿಯಲ್ಲಿರುವ 1,526.16 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿತ್ತು. ಈ ಸಂಬಂಧ 2023ರ ಡಿಸೆಂಬರ್‌ 16ರಂದು ವರದಿ ಸಲ್ಲಿಕೆ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

Senior Advocate Kiran S Javali
Senior Advocate Kiran S Javali

ಈ ಪ್ರಕರಣದಲ್ಲಿ ಸಾರ್ವಜನಿಕ ಭಾವನೆಗಳು ಅಪಾರವಾಗಿದ್ದು, ಸಾಕಷ್ಟು ವಸ್ತು, ಸಾಮಗ್ರಿಗಳನ್ನು ಅಕ್ರಮ ಎಂದು ಘೋಷಿಸಲಾಗಿರುವುದರಿಂದ ಅದನ್ನು ತಮಿಳುನಾಡು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿತ್ತು. ಸಂಬಂಧಿತ ಜಿಲ್ಲಾಧಿಕಾರಿಗಳು ಆಸ್ತಿಗಳನ್ನು ಹರಾಜು ಮಾಡಿ ಆ ಹಣವನ್ನು ತಮಿಳುನಾಡು ಬೊಕ್ಕಸಕ್ಕೆ ಜಮೆ ಮಾಡುವಂತೆ ಆದೇಶಿಸುವುದರ ಬದಲಿಗೆ ತಮಿಳುನಾಡು ಸರ್ಕಾರವು ಈ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಳಿಸಿಕೊಳ್ಳಬಹುದು. ಇಲ್ಲವೇ, ಸಾಧ್ಯವಾದರೆ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿ, ನಿವೇಶನರಹಿತ ಜನರಿಗೆ ಹಂಚಬಹುದು ಅಥವಾ ಅವುಗಳನ್ನು ಹರಾಜು ಹಾಕುವ ಮೂಲಕ ಹಣ ಸಂಗ್ರಹಿಸಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.

ಚಿನ್ನದ ಡಾಬು
ಚಿನ್ನದ ಡಾಬು

ವಿಸ್ತೃತ ನೆಲೆಯಲ್ಲಿ ಜನರ ಹಿತಾಸಕ್ತಿ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ವಜ್ರ, ಹವಳ ಮತ್ತು ಮಾಣಿಕ್ಯಗಳನ್ನು ಪ್ರತ್ಯೇಕಿಸಿ ಸದ್ಯದ ದರಕ್ಕೆ ಆರ್‌ಬಿಐಗೆ ವಜ್ರಾಭರಣಗಳನ್ನು ಮಾರಾಟ ಮಾಡಿ, ಆ ಹಣವನ್ನು ಜನರ ಕಲ್ಯಾಣಕ್ಕೆ ಬಳಕೆ ಮಾಡಬಹುದು. ಇದೇ ರೀತಿಯಲ್ಲಿ ಆಸ್ತಿಗಳನ್ನು ಹರಾಜಿನಲ್ಲಿ ಮಾರಾಟ ಮಾಡಿ ಸಾರ್ವಜನಿಕ ಏಳ್ಗೆಗೆ ಬಳಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಗ್ರಾಮೀಣರ ಶಿಕ್ಷಣ, ಆರೋಗ್ಯಕ್ಕೆ ಹಣ ಬಳಸಿ

ತಮಿಳುನಾಡು ಸರ್ಕಾರವು ತನಗೆ ದೊರೆತಿರುವ ನ್ಯಾಯಾಂಗ ಅಧಿಕಾರವನ್ನು ಬಳಸಿ ವಜ್ರಾಭರಣ ಮತ್ತು ಆಸ್ತಿ ಮಾರಾಟದಿಂದ ಬರುವ ಹಣವನ್ನು ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳ ಪ್ರಾಥಮಿಕ ಶಿಕ್ಷಣ ಮತ್ತು ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಬಳಕೆ ಮಾಡಬೇಕು. ಏಕೆಂದರೆ ಇದು ಅವರಿಗೆ ಅಗತ್ಯವಾಗಿದೆ. ಹೀಗೆ ಮಾಡಿದರೆ ಸಂವಿಧಾನ ರೂಪಿಸಿದವರ ಆಶಯವನ್ನು ಈಡೇರಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೀಗೆ ಮಾಡುವುದರಿಂದ ಹಾಲಿ ಪ್ರಕರಣದಂಥವುಗಳು ಮರುಕಳಿಸಲು ಆಸ್ಪದ ನೀಡದೇ ಅತ್ಯುನ್ನತ ಸ್ಥಾನದಲ್ಲಿರುವವರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿರುವುದು ಮತ್ತು ಜನರ ಹಿತದೃಷ್ಟಿಯಿಂದ ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂಬ ಸಂದೇಶ ರವಾನೆಯಾಗಲಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ನ್ಯಾಯಿಕ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬ ಭರವಸೆ ಮತ್ತು ನಂಬಿಕೆ ಹೊಂದಿರುವುದಾಗಿ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಜನರ ಹಿತದೃಷ್ಟಿಯಿಂದ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ.

ವಜ್ರದ ಆಭರಣ
ವಜ್ರದ ಆಭರಣ

ಕರ್ನಾಟಕ ಸರ್ಕಾರಕ್ಕೆ ₹13 ಕೋಟಿ ಕಾನೂನು ವೆಚ್ಚದ ಹಣ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎರಡು ಮತ್ತು ಮೂರನೇ ದೋಷಿಗಳಾಗಿದ್ದ ಶಶಿಕಲಾ ಮತ್ತು ಸುಧಾಕರನ್‌ ಅವರು ₹20 ಕೋಟಿ ₹20 ಸಾವಿರ ದಂಡ ಪಾವತಿಸಿರುವ ಹಣ ನ್ಯಾಯಾಲಯದ ಬಳಿ ಇದೆ. ಹಿಂದಿನ ಆದೇಶದ ಪ್ರಕಾರ ಐದು ಕೋಟಿಯನ್ನು ಕಾನೂನು ವೆಚ್ಚದ ರೂಪದಲ್ಲಿ ಕರ್ನಾಟಕ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಪಾವತಿಸಬೇಕಿದೆ. ಈ ನ್ಯಾಯಾಲಯದ ಆದೇಶಗಳನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಆನಂತರ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು ಎಂಬ ಮಾಹಿತಿಯನ್ನು 2021ರ ಜುಲೈ 26ರಂದು ಅಭಿಯೋಜನಾ ಇಲಾಖೆಯು ಈ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಈ ಪ್ರಕರಣಗಳನ್ನು ನಡೆಸಲು ಹಿರಿಯ ವಕೀಲರಿಗೆ ವೆಚ್ಚ ಪಾವತಿಸಲು ಸುಮಾರು 5 ಕೋಟಿ ರೂ. ವೆಚ್ಚವಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಈ ಸಂಬಂಧ ಇಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್‌ ಜವಳಿ ಅವರು ತಮ್ಮ ನೇಮಕಾತಿಯೂ ಸೇರಿ ಕಾನೂನು ಹೋರಾಟದ ವೆಚ್ಚವು 5 ಕೋಟಿ ರೂ ಸೇರಿದಂತೆ ಒಟ್ಟು 8 ಕೋಟಿ ರೂ ಅನ್ನು ಕರ್ನಾಟಕ ಸರ್ಕಾರ ವೆಚ್ಚ ಮಾಡಿದೆ ಎಂದು ಅಗತ್ಯ ದಾಖಲೆಗಳೊಂದಿಗೆ ಮೆಮೊ ಸಲ್ಲಿಸಿದ್ದಾರೆ.

ಕಾನೂನು ವೆಚ್ಚದ ಹೊರತಾಗಿ ಕರ್ನಾಟಕ ಸರ್ಕಾರವು ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ ಮತ್ತು ಸಾರಿಗೆ ಇತ್ಯಾದಿಗಳಿಗೆ ವೆಚ್ಚ ಮಾಡಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ಸೂಚಿಸಿಲಾಗಿದ್ದ ರೂ. 5 ಕೋಟಿ ಜೊತೆಗೆ ಹೆಚ್ಚುವರಿಯಾಗಿ ರೂ. 8 ಕೋಟಿಯನ್ನು ತಮಿಳುನಾಡು ಸರ್ಕಾರವು ಕರ್ನಾಟಕಕ್ಕೆ ಪಾವತಿಸಬೇಕು ಎಂದು ಆದೇಶಿಸಿದೆ.

ಹೀಗಾಗಿ, ದಂಡವಾಗಿ ಪಾವತಿಯಾಗಿರುವ ₹20 ಕೋಟಿ ₹20 ಸಾವಿರದ ಪೈಕಿ ₹13 ಕೋಟಿಯನ್ನು ಕರ್ನಾಟಕ ಸರ್ಕಾರದ ಖಾತೆಗೆ ಮತ್ತು ಉಳಿದ ₹7 ಕೋಟಿ ₹20 ಸಾವಿರವನ್ನು ತಮಿಳುನಾಡು ಸರ್ಕಾರದ ಖಾತೆಗೆ ವರ್ಗಾಯಿಸುವಂತೆ ನ್ಯಾಯಾಲಯವು ಕಚೇರಿಗೆ ಆದೇಶಿಸಿದೆ.

ಫೋಟೊ, ವಿಡಿಯೋ ಒದಗಿಸಲು ನಿರ್ದೇಶನ

 ಎಲ್ಲರ ಸಹಕಾರದಿಂದ ಅತ್ಯಂತ ಸರಾಗ ಮತ್ತು ಸುಲಲಿತವಾಗಿ ವಜ್ರಾಭರಣ ಮತ್ತು ನಗದು ಮರಳಿಸುವ ಪ್ರಕ್ರಿಯೆ ಮುಗಿದಿದೆ. ತಮಿಳುನಾಡು ಸರ್ಕಾರ ನಿಯೋಜಿಸಿದ್ದವರ ಮೂಲಕ ಇಡೀ ವರ್ಗಾವಣೆ ಪ್ರಕ್ರಿಯೆಯ ಫೋಟೊ ಮತ್ತು ವಿಡಿಯೋಗ್ರಫಿ ಮಾಡಲಾಗಿದೆ. ಇದರ ಹಾರ್ಡ್‌ ಮತ್ತು ಸಾಫ್ಟ್‌ ಕಾಪಿಗಳನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ವಿಶೇಷ ಸರ್ಕಾರಿ ಅಭಿಯೋಜಕ ಜವಳಿ ಅವರೊಂದಿಗೆ ವಕೀಲ ಶಾಶ್ವತ್‌ ಅವರು ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ವಿ ಕೆ ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿಗೆ ನಾಲ್ಕು ವರ್ಷ ಜೈಲು ಮತ್ತು ₹100 ಕೋಟಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿದ್ದರು. ಜೊತೆಗೆ ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.

ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ 1996 ಜೂನ್‌ 14ರಂದು ದಾಖಲಿಸಿದ್ದ ದೂರನ್ನು ಆಧರಿಸಿ ಜೂನ್‌ 18ರಂದು ಡಿಎಂಕೆ ಸರ್ಕಾರವು ಜಯಲಲಿತಾ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. 1997ರಲ್ಲಿ ಜಯಲಲಿತಾ 66.65 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. 2003ರ ಅಕ್ಟೋಬರ್‌ 21ರಂದು ಜಯಲಲಿತಾ, ವಿ ಕೆ ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ವಿರುದ್ಧ ಆರೋಪ ನಿಗದಿ ಮಾಡಲಾಗಿತ್ತು.

2003ರ ಫೆಬ್ರವರಿಯಲ್ಲಿ ಡಿಎಂಕೆ ನಾಯಕ ಅನಬಾಗನ್‌ ಅವರು ಪ್ರಕರಣವನ್ನು ಚೆನ್ನೈನದಿಂದ ಹೊರಗಡೆಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. 2003ರ ನವೆಂಬರ್‌ 18ರಂದು ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ಪ್ರಕರಣ ವರ್ಗಾಯಿಸಿತ್ತು. 2011ರಲ್ಲಿ ವಿಚಾರಣೆ ಆರಂಭವಾಗಿತ್ತು.

Kannada Bar & Bench
kannada.barandbench.com