ಎನ್‌ಸಿಎಲ್‌ಟಿಯಿಂದ ಅನುಕೂಲಕರ ತೀರ್ಪು ದೊರಕಿಸಿಕೊಡಲು ಲಂಚ ಕೇಳಿದ ನ್ಯಾಯವಾದಿಗಳು: ಸಿಬಿಐ ತನಿಖೆ

ಅನುಕೂಲಕರ ಆದೇಶಕ್ಕಾಗಿ ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿದಂತೆ ಎಯು ಕಾರ್ಪೊರೇಟ್ ಸಲಹಾ ಮತ್ತು ಕಾನೂನು ಸೇವಾ ಸಂಸ್ಥೆಯ ಒಡೆಯರಾದ ಮಹಿ ಭಟ್ ಮತ್ತು ಅಕ್ಷತ್ ಕೇತನ್ ವಿರುದ್ಧ ಸಂಸ್ಥೆಯ ನಿರ್ದೇಶಕರೊಬ್ಬರು ದೂರು ದಾಖಲಿಸಿದ್ದಾರೆ.
CBI
CBI
Published on

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ (ಎನ್‌ಸಿಎಲ್‌ಟಿ) ಅನುಕೂಲಕರ ಆದೇಶ ದೊರಕಿಸಿಕೊಡುವುದಕ್ಕಾಗಿ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ ನಿವೃತ್ತ ಸದಸ್ಯರೊಬ್ಬರ ಮನೆಯಲ್ಲಿ ಸಿಬಿಐ ಈಚೆಗೆ ಶೋಧ ನಡೆಸಿದೆ.  

ಪ್ರಕರಣದ ಎಫ್‌ಐಆರ್‌ ʼಬಾರ್‌ ಅಂಡ್‌ ಬೆಂಚ್‌ʼಗೆ ದೊರೆತಿದ್ದು ಭಾರೀ ಪ್ರಮಾಣದ ಲಂಚ ನೀಡಿದರೆ ಕಕ್ಷಿದಾರರಿಗೆ ಅನುಕೂಲಕರವಾದ ತೀರ್ಪನ್ನು ನ್ಯಾಯಮಂಡಳಿಯಿಂದ ಕೊಡಿಸುವುದಾಗಿ ವಕೀಲರೊಬ್ಬರ ವಿರುದ್ಧ ದೂರು ದಾಖಲಾಗಿದೆ.

Also Read
ಅತ್ಯಾಚಾರದ ಸುಳ್ಳು ಪ್ರಕರಣ ದಾಖಲು: ಮಹಿಳೆ, ವಕೀಲರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ಅಲಾಹಾಬಾದ್ ಹೈಕೋರ್ಟ್

ಜನವರಿ 27, 2025 ರಂದು ನೀಡಿದ ದೂರಿನ ಪ್ರಕಾರ, ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್‌ ಲೀಗಲ್‌ ಸರ್ವೀಸಸ್‌ ಜೊತೆ ನಂಟು ಹೊಂದಿರುವ ಮಹಿ ಭಟ್‌ ಎಂಬ ವ್ಯಕ್ತಿ ತಾನು ಮುಂಬೈನಲ್ಲಿರುವ ಎನ್‌ಸಿಎಲ್‌ಟಿ ಸದಸ್ಯ ರೀಟಾ ಕೊಹ್ಲಿ ಅವರೊಂದಿಗೆ ನಿಕಟ ಸಂಪರ್ಕವಿರುವುದಾಗಿ ಹೇಳಿಕೊಂಡು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ನಿರ್ದೇಶಕ ಆರೋಪಿಸಿದ್ದರು.  ₹ 1.5 ಕೋಟಿ ಲಂಚ ನೀಡಿದರೆ ದಿವಾಳಿತನ ಪ್ರಕರಣದಲ್ಲಿ ಅನುಕೂಲಕರ ತೀರ್ಪು ದೊರಕಿಸಿಕೊಡುವುದಾಗಿ ಮಹಿ ಅವರು ತಮಗೆ ಭರವಸೆ ನೀಡಿದ್ದರು. ಮಾತುಕತೆ ಬಳಿಕ ಲಂಚದ ಮೊತ್ತವನ್ನು ಮೊತ್ತವನ್ನು ₹ 1 ಕೋಟಿಗೆ ಇಳಿಸಲಾಗಿತ್ತು ಎಂದು ದೂರು ನೀಡಿರುವ ನಿರ್ದೇಶಕ ವಿವರಿಸಿದ್ದರು.

ಜನವರಿ 28, 29 , ಫೆಬ್ರವರಿ 3 ಹಾಗೂ 4ರಂದು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಸಿಬಿಐ ಅಧಿಕಾರಿಗಳು ದೂರಿನ ತನಿಖೆ ನಡೆಸಿದ್ದರು. ದೂರುದಾರರ ಸಂಸ್ಥೆಯು ದಿವಾಳಿ ಮತ್ತು ದಿವಾಳಿತನ ಸಂಹಿತೆಯ (IBC) ಸೆಕ್ಷನ್ 7ರ ಅಡಿಯಲ್ಲಿ NCLT ಮುಂಬೈ ಮುಂದೆ ಮತ್ತೊಂದು ಕಂಪನಿಯ ವಿರುದ್ಧ ಅರ್ಜಿ ಸಲ್ಲಿಸಿದೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ನ್ಯಾಯಮಂಡಳಿ ವಿಚಾರಣೆ ಪೂರ್ಣಗೊಳಿಸಿ ಆಗಸ್ಟ್ 29, 2024ರಂದು ಆದೇಶವನ್ನು ಕಾಯ್ದಿರಿಸಿತ್ತು. ಅದರ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

ಮಹಿ ಅವರು, ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್ ಲೀಗಲ್ ಸರ್ವೀಸಸ್ ಮಾಲೀಕ ಅಕ್ಷತ್ ಖೇತಾನ್ ಅವರ ಸಹಯೋಗದೊಂದಿಗೆ "ಶುಲ್ಕ"ದ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಮಹಿ ಕಂಪೆನಿಯ ವಕೀಲರಲ್ಲದಿದ್ದರೂ ನ್ಯಾಯಮಂಡಳಿಯ ಸದಸ್ಯರ ಮೇಲೆ ಭ್ರಷ್ಟ ವಿಧಾನಗಳ ಮೂಲಕ ಪ್ರಭಾವ ಬೀರಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

ಹೆಚ್ಚಿನ ವಿಚಾರಣೆಯಲ್ಲಿ ಮಹಿ ಆರಂಭದಲ್ಲಿ ಲಂಚದ ಶೇ 50ರಷ್ಟನ್ನು ಮುಂಗಡವಾಗಿ ಕೇಳಿದ್ದರು. ಆದರೆ ಮಾತುಕತೆಯ ನಂತರ ₹ 20 ಲಕ್ಷ ಮೊತ್ತದ ಶೇ 20ರಷ್ಟು ಲಂಚ ಪಡೆಯಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ. ಈ ಮೊತ್ತವನ್ನು ಫೆಬ್ರವರಿ 4, 2025 ರಂದು ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್ ಲೀಗಲ್ ಸರ್ವೀಸಸ್‌ಗೆ ಸೇರಿದ HDFC ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಉಳಿದ ₹ 80 ಲಕ್ಷವನ್ನು ಅಂತಿಮ ಆದೇಶದ ಘೋಷಣೆಯ ದಿನದಂದು ನಗದು ರೂಪದಲ್ಲಿ ಪಾವತಿಸಬೇಕಾಗಿತ್ತು. ಇದನ್ನು ಫೆಬ್ರವರಿ 14 2025ಕ್ಕಿಂತ ಮೊದಲು ನಿರೀಕ್ಷಿಸಲಾಗಿತ್ತು.

Also Read
ಮುಡಾ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಸ್ನೇಹಮಯಿ ಕೃಷ್ಣ

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 61 (ಕ್ರಿಮಿನಲ್ ಪಿತೂರಿ) ಮತ್ತು 1988ರ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7-ಎ (ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭ ಪಡೆಯುವುದು) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಹಿರಿಯ ವಕೀಲೆಯಾಗಿರುವ ರೀಟಾ ಕೊಹ್ಲಿ, ಪ್ರಸ್ತುತ ಜೈಪುರದಲ್ಲಿರುವ ಎನ್‌ಸಿಎಲ್‌ಟಿಯ ನ್ಯಾಯಾಂಗ ಸದಸ್ಯರಾಗಿದ್ದಾರೆ.

Kannada Bar & Bench
kannada.barandbench.com