

ಡಿಸೆಂಬರ್ 2025ರಲ್ಲಿ ನಡೆದ ಭಾರೀ ಪ್ರಮಾಣದ ವಿಮಾನ ರದ್ದತಿ ಹಾಗೂ ಅದರಿಂದ ಟಿಕೆಟ್ ದರ ಏರಿಕೆ ಉಂಟಾದ ಹಿನ್ನೆಲೆಯಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೋ) ವಿರುದ್ಧ ಮಾರುಕಟ್ಟೆಯ ಪ್ರಾಬಲ್ಯದ ದುರುಪಯೋಗದ ಆರೋಪದ ಕುರಿತು ವಿವರವಾದ ತನಿಖೆಗೆ ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಫೆಬ್ರವರಿ 4ರಂದು ಆದೇಶಿಸಿದೆ [ಕಾರ್ತಿಕೇಯ ರಾವಲ್ ಮತ್ತು ಇಂಡಿಗೋ ನಡುವಣ ಪ್ರಕರಣ].
2025ರ ಡಿಸೆಂಬರ್ 3ರಿಂದ 5ರ ನಡುವೆ ಇಂಡಿಗೋ 2,507 ವಿಮಾನಗಳನ್ನು ರದ್ದುಪಡಿಸಿದ್ದು, 1,852 ವಿಮಾನಗಳನ್ನು ವಿಳಂಬಗೊಳಿಸಿದೆ. ಇದರಿಂದ ದೇಶದಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ತೊಂದರೆಗೆ ಒಳಗಾದರು ಎಂದಿರುವ ಆಯೋಗ ಈ ಅಡಚಣೆಗಳಿಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಸಚಿವಾಲಯ ವಿಧಿಸಿದ್ದ ₹22.20 ಕೋಟಿ ದಂಡವನ್ನೂ ಪರಿಗಣಿಸಿದೆ.
ಇಂಡಿಗೋ ದೇಶೀಯ ವಿಮಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಸುಮಾರು ಶೇ.60ರ ಪಾಲು ಹೊಂದಿರುವುದರಿಂದ ವಿಮಾನಯಾನ ಸಂಸ್ಥೆಯ ಈ ನಡೆ ಮೇಲ್ನೋಟಕ್ಕೆ ಪ್ರಾಬಲ್ಯದ ದುರುಪಯೋಗಕ್ಕೆ ಸಮ ಎಂದು ತೀರ್ಮಾನಿಸಿರುವ ಸಿಸಿಐ ತನಿಖೆಗೆ ಆದೇಶಿಸಿದೆ.
ಆದೇಶವನ್ನು ಸ್ಪರ್ಧಾ ಕಾಯಿದೆ, 2002ರ ಸೆಕ್ಷನ್ 26(1) ಅಡಿಯಲ್ಲಿ ಹೊರಡಿಸಲಾಗಿದ್ದು, ಕಾಯ್ದೆಯಡಿ ಮಹಾನಿರ್ದೇಶಕರು (ಡಿಜಿ) 90 ದಿನಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಇಂಡಿಗೋ ಪ್ರಯಾಣಿಕರೊಬ್ಬರು ಈ ಸಂಬಂಧ ದೂರು ನೀಡಿದ್ದರು. ಇಂಡಿಗೋ ಯಾವುದೇ ಮುನ್ಸೂಚನೆ ನೀಡದೆ ವಿಮಾನಗಳನ್ನು ರದ್ದುಪಡಿಸಿದ್ದು ನಂತರ ಅದೇ ಮಾರ್ಗಗಳಲ್ಲಿ ಗಣನೀಯವಾಗಿ ಹೆಚ್ಚಿನ ದರಗಳನ್ನು ವಿಧಿಸಿದೆ ಎಂದು ದೂರಿದ್ದರು.
ದೆಹಲಿ ಗೋವಾ ಬೆಂಗಳೂರು ಮಾರ್ಗದ ವಿಮಾನಗಳು ರದ್ದದ ಬಳಿ ಇಂಡಿಗೋ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೆಚ್ಚಿನ ದರದಲ್ಲಿ ಮರುಬುಕಿಂಗ್‌ಗೆ ಒತ್ತಾಯಿಸಿತ್ತು. ಇದು ಪ್ರಾಬಲ್ಯ ಹೊಂದಿರುವ ವಿಮಾನಯಾನ ಸಂಸ್ಥೆಯಿಂದ ಅತಿಯಾದ ಬೆಲೆ ವಿಧಿಸುವ ಕೃತ್ಯವಾಗಿದ್ದು, ಕಾಯಿದೆಯ ಸೆಕ್ಷನ್ 4ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಇದೇ ವೇಳೆ, ವಿಚಾರಣೆ ನಡೆಸುವ ಅಧಿಕಾರ ಸಿಸಿಐಗೆ ಇಲ್ಲ ಎಂದು ಇಂಡಿಗೋ ಆಕ್ಷೇಪಿಸಿದ್ದು ಪ್ರಕರಣ ಸಂಪೂರ್ಣವಾಗಿ ಭಾರತೀಯ ವಾಯುಯಾನ ಕಾಯಿದೆ 2024 ಹಾಗೂ ವಿಮಾನ ನಿಯಮಾವಳಿ 1937ರ ಅಡಿಯಲ್ಲಿ ಬರುತ್ತದೆ. ಅವುಗಳ ಪ್ರಕಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಿಯಂತ್ರಣಾಧಿಕಾರ ಹೊಂದಿದೆ ಎಂದಿದೆ.
ಆದರೆ ಡಿಜಿಸಿಎಗೆ ಟಿಕೆಟ್ ದರಗಳ ಆರ್ಥಿಕ ನಿಯಂತ್ರಣಾಧಿಕಾರವಿಲ್ಲ ಎಂದ ಸಿಸಿಐ, ಪ್ರಾಬಲ್ಯ, ಮಾರುಕಟ್ಟೆ ಸ್ವರೂಪ ಹಾಗೂ ಸ್ಪರ್ಧಾ ದುರುಪಯೋಗ ಪರಿಶೀಲನೆ ತನ್ನ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಇಂಡಿಗೋ ವಿರುದ್ಧ ಪ್ರಾಬಲ್ಯದ ದುರುಪಯೋಗಕ್ಕೆ ಸಂಬಂಧಿಸಿದಂತೆ ಮೇಲ್ನೋಟದ ಪ್ರಕರಣವಿದೆ ಎಂದು ನಿರ್ಣಯಿಸಿದ ಅದು, 90 ದಿನಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಾನಿರ್ದೇಶಕರಿಗೆ ಸಿಸಿಐ ನಿರ್ದೇಶನ ನೀಡಿದೆ.