ಸಿಸಿಐನ ಪ್ಲೇಸ್ಟೋರ್‌ ತನಿಖೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಗೂಗಲ್‌

ಡಿಸೆಂಬರ್‌ 31ರ ಒಳಗೆ ಗೂಗಲ್‌ ತನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿಸಿಐ ಗಡುವು ವಿಧಿಸಿದೆ. ಈ ಹಿಂದೆ ನವೆಂಬರ್‌ 19ರ ಒಳಗೆ ಪ್ರತಿಕ್ರಿಯಿಸಬೇಕು ಎಂದು ಗೂಗಲ್‌ಗೆ ಸಿಸಿಐ ಆದೇಶಿಸಿತ್ತು.
Google, Karnataka High Court
Google, Karnataka High Court
Published on

ಪ್ಲೇಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶಬೇಕು ಎಂದು ಟೆಕ್‌ ದೈತ್ಯ ಸಂಸ್ಥೆ ಗೂಗಲ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಮನವಿ ಸಲ್ಲಿಸಿದೆ.

ಭಾರತದಲ್ಲಿ ತನ್ನ ಸುಧಾರಿತ ಪ್ಲೇಸ್ಟೋರ್‌ ನಿಯಮಗಳನ್ನು ಸ್ವಯಂಪ್ರೇರಿತವಾಗಿ ಮುಂದಿನ ವರ್ಷದ ಅಕ್ಟೋಬರ್‌ 31ರ ವರೆಗೆ ಮುಂದೂಡಿರುವುದಾಗಿ ಗೂಗಲ್‌ ವಾದಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಐ ಸಮಿತಿಗೆ ನ್ಯಾಯಿಕ ಸದಸ್ಯರನ್ನು ನೇಮಿಸುವಂತೆಯೂ ಗೂಗಲ್‌ ಕೋರಿದೆ. ದೂರುದಾರರ ಗುರುತನ್ನು ಬಹಿರಂಗಪಡಿಸಬೇಕು. ಇದರಿಂದ ದೂರಿಗೆ ಸಮರ್ಥವಾಗಿ ಪ್ರತಿಕ್ರಿಯಿಸಲು ನೆರವಾಗಲಿದೆ ಎಂದು ಗೂಗಲ್‌ ಹೇಳಿದೆ.

ಸಿಸಿಐ ಪ್ರಶ್ನೆಗೆ ಉತ್ತರಿಸಲು ಎಂಟು ವಾರಗಳ ಕಾಲಾವಕಾಶ ನೀಡಬೇಕು ಎಂದು ಗೂಗಲ್‌ ಹೇಳಿದೆ. “ಈಗಾಗಲೇ ಜಾರಿಯಲ್ಲಿರುವ ನೀತಿ, ನಿಯಮ ಮತ್ತು ಪ್ರಕ್ರಿಯೆಗೆ ಅನುಗುಣವಾಗಿ ಮುಂದುವರಿಯಲು ಗೂಗಲ್‌ ಪ್ಲೇಸ್ಟೋರ್‌ ಕುರಿತಾದ ಸಿಸಿಐ ತನಿಖೆ ಕುರಿತು ಸಲ್ಲಿಕೆಯಾಗಿರುವ ಮಧ್ಯಂತರ ಪರಿಹಾರ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಂಸ್ಥೆಯು ಮನವಿ ಸಲ್ಲಿಸಿದೆ. ಸಿಸಿಐ ತನಿಖಾ ಪ್ರಕ್ರಿಯೆ ಬಗ್ಗೆ ನಮಗೆ ಗೌರವವಿದೆ. ನ್ಯಾಯಸಮ್ಮತ ತನಿಖೆ ದೃಷ್ಟಿಯಿಂದ ನಾವು ನಿರಂತರವಾಗಿ ತನಿಖೆಗೆ ಸಹಕಾರ ನೀಡಲಿದ್ದೇವೆ” ಎಂದು ಗೂಗಲ್‌ ವಕ್ತಾರರು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಮಧ್ಯಂತರ ಪರಿಹಾರ ಕೋರಿ ಸಿಸಿಐಗೆ ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ (ಎಡಿಐಎಫ್‌) ಮನವಿ ಸಲ್ಲಿಸಿದೆ. “ಗೂಗಲ್‌ ರಿಟ್‌ ಮನವಿ ಸಲ್ಲಿಸಿರುವುದನ್ನು ಇಡೀ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಮತ್ತೊಂದು ತಂತ್ರ” ಎಂದು ಎಡಿಐಎಫ್‌ ಆಪಾದಿಸಿದೆ.

ಮತ್ತೊಂದೆಡೆ ಡಿಸೆಂಬರ್‌ 31ರ ಒಳಗೆ ಗೂಗಲ್‌ ತನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿಸಿಐ ಗಡುವು ವಿಧಿಸಿದೆ. ಈ ಹಿಂದೆ ನವೆಂಬರ್‌ 19ರ ಒಳಗೆ ಪ್ರತಿಕ್ರಿಯಿಸಬೇಕು ಎಂದು ಗೂಗಲ್‌ಗೆ ಸಿಸಿಐ ಆದೇಶಿಸಿತ್ತು.

Also Read
ವಕಾಲತ್ತು, ತೀರ್ಪುಗಳನ್ನು ಕನ್ನಡದಲ್ಲಿ ನೀಡಲು ನಿರ್ದೇಶಿಸಿ: ಮುಖ್ಯ ನ್ಯಾಯಮೂರ್ತಿಗಳಿಗೆ ಕನ್ನಡ ಪ್ರಾಧಿಕಾರದ ಮನವಿ

ವಿವಾದವೇನು?

ಡಿಜಿಟಲ್‌ ಮಾಹಿತಿಯನ್ನು ಪ್ಲೇಸ್ಟೋರ್‌ ಮೂಲಕ ಮಾರಾಟ ಮಾಡಲು ಬಯಸುವ ಅಪ್ಲಿಕೇಶನ್‌ಗಳು ಪ್ಲೇ ಬಿಲ್ಲಿಂಗ್‌ ವ್ಯವಸ್ಥೆ ಬಳಸಬೇಕು. ಒಟ್ಟಾರೆ ಖರೀದಿ ಮೊತ್ತದ ನಿರ್ದಿಷ್ಟ ಪ್ರಮಾಣವನ್ನು ಶುಲ್ಕವಾಗಿ ಪಾವತಿಸಬೇಕು. ನಿಯಮಗಳು ಬದಲಾವಣೆಯಾಗಿರುವುದರಿಂದ ಪ್ಲೇ ಬಿಲ್ಲಿಂಗ್‌ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಗೂಗಲ್‌ ಹೇಳಿತ್ತು.

“ಇದಕ್ಕೆ ಭಾರತದ ಡೆವಲಪರ್‌ಗಳು ಮತ್ತು ನವೋದ್ಯಮಗಳು ಆತಂಕ ವ್ಯಕ್ತಪಡಿಸಿದ್ದವು. ಭಾರತದ ಅಪ್ಲಿಕೇಶನ್‌ ಡೆವಲಪರ್‌ಗಳು ತಮ್ಮ ಡಿಜಿಟಿಲ್‌ ಸೇವೆಗಳನ್ನು ಪ್ಲೇ ಬಿಲ್ಲಿಂಗ್‌ ವ್ಯವಸ್ಥೆಯ ಮೂಲಕವೇ ಮಾರಾಟ ಮಾಡಬೇಕು ಎಂದು ಒತ್ತಾಯಿಸುವಂತಿಲ್ಲ” ಎಂದು ಆಕ್ಷೇಪಿಸಿವೆ.

Kannada Bar & Bench
kannada.barandbench.com