[ಜಾರಕಿಹೊಳಿ ಸಿ.ಡಿ ಪ್ರಕರಣ] ಲಿಖಿತ ಆಕ್ಷೇಪಣೆ ಸಲ್ಲಿಸಲು ಜಾರಕಿಹೊಳಿ, ಎಸ್‌ಐಟಿಗೆ ಅಂತಿಮ ಅವಕಾಶ ನೀಡಿದ ಹೈಕೋರ್ಟ್‌

ಜಾರಕಿಹೊಳಿ ಆಪ್ತ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣ ವಜಾ ಮಾಡಬೇಕು ಎಂದು ಸಂತ್ರಸ್ತೆ ಯುವತಿ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ನಡೆಸಿತು.
Justice S Sunil Dutt Yadav and Karnataka High Court
Justice S Sunil Dutt Yadav and Karnataka High Court

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಲಿಖಿತ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಅಂತಿಮ ಅವಕಾಶ ಕಲ್ಪಿಸಿದೆ.

ಜಾರಕಿಹೊಳಿ ಅವರ ಆಪ್ತ ಎಂ ವಿ ನಾಗರಾಜ್‌ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣದ ತನಿಖೆಗೆ ಸದ್ಯಕ್ಕೆ ಮಧ್ಯಂತರ ತಡೆ ನೀಡಬೇಕು ಮತ್ತು ಶಾಶ್ವತವಾಗಿ ಪ್ರಕರಣ ವಜಾ ಮಾಡಬೇಕು ಎಂದು ಸಂತ್ರಸ್ತೆ ಯುವತಿ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಎಸ್ಐ‌ಟಿ ಪರ ವಕೀಲರು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾಯಿಸಬೇಕು. ಅಲ್ಲದೇ, ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಸಂತ್ರಸ್ತೆ ಪರ ವಕೀಲ ಸಂಕೇತ್‌ ಏಣಗಿ ಆಕ್ಷೇಪಿಸಿದರು. “ಇದು ವಿಶೇಷ ಪ್ರಕರಣವಾಗಿದೆ. ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಪ್ರಕರಣದ ಮರು ವರ್ಗಾವಣೆಯ ಅವಶ್ಯಕತೆ ಇಲ್ಲ” ಎಂದು ವಾದಿಸಿದರು.

Also Read
[ಜಾರಕಿಹೊಳಿ ಪ್ರಕರಣ] ಹೈಕೋರ್ಟ್‌ ನೋಟಿಸ್‌ ಸ್ವೀಕರಿಸದ ಜಾರಕಿಹೊಳಿ; ಆರೋಪಿ ಪರ ಎಸ್‌ಐಟಿ ವಕೀಲರ ವಾದಕ್ಕೆ ಆಕ್ಷೇಪ

ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ಜಾರಕಿಹೊಳಿ ಮತ್ತು ಎಸ್‌ಐಟಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ಜುಲೈ 6ಕ್ಕೆ ವಿಚಾರಣೆ ಮುಂದೂಡಿತು.

ಸಂತ್ರಸ್ತೆ ಸಲ್ಲಿಸಿದ್ದ ರಿಟ್‌ ಮನವಿಯನ್ನು ಪ್ರಥಮ ಬಾರಿಗೆ ಜೂನ್‌ 15ರಂದು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತ್ತು. ಕಳೆದ ಸೋಮವಾರ ಏಕಾಏಕಿ ಪ್ರಕರಣವನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಿಸಿದ್ದ ಸಂತ್ರಸ್ತೆ ಪರ ವಕೀಲ ಏಣಗಿ ಅವರು “ರೋಸ್ಟರ್‌ ಅನ್ವಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಎಸ್‌ ಸುನಿಲ್‌ ದತ್ತ ಯಾದವ್‌ ಅವರ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು” ಎಂದು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com