ಇತರರ ಆರೋಗ್ಯ ದಂಡಿಸುವಂತೆ ಸಂಭ್ರಮಾಚರಣೆ ಇರಬಾರದು: ಪಟಾಕಿಯಲ್ಲಿ ಬೇರಿಯಂ ಲವಣ ನಿಷೇಧಿಸುವಂತೆ ಮತ್ತೆ ಸೂಚಿಸಿದ ಸುಪ್ರೀಂ

ಆದರೆ ಪಟಾಕಿಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಜನರ ಅದರಲ್ಲಿಯೂ ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯಕ್ಕೆ ಹಾನಿಯುಂಟುಮಾಡುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗುತ್ತಿದೆ ಎಂದು ತಿಳಿಸಿತು.
ಇತರರ ಆರೋಗ್ಯ ದಂಡಿಸುವಂತೆ ಸಂಭ್ರಮಾಚರಣೆ ಇರಬಾರದು: ಪಟಾಕಿಯಲ್ಲಿ ಬೇರಿಯಂ ಲವಣ ನಿಷೇಧಿಸುವಂತೆ ಮತ್ತೆ ಸೂಚಿಸಿದ ಸುಪ್ರೀಂ
Supreme court of India, Firecrackers

ದೀಪಾವಳಿ ಹಬ್ಬ ಸನ್ನಿಹಿತವಾಗಿರುವಂತೆಯೇ ಪಟಾಕಿಗಳಲ್ಲಿ ಬೇರಿಯಮ್ ಲವಣಗಳ ಬಳಕೆ ನಿಷೇಧಿಸುವಂತೆ ಜೊತೆಗೆ ಈ ಹಿಂದೆ ನೀಡಲಾಗಿದ್ದ ಇತರೆ ನಿರ್ದೇಶನಗಳನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಶುಕ್ರವಾರ ಪುನರುಚ್ಚರಿಸಿತು. (ಅರ್ಜುನ್ ಗೋಪಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ).

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ವರ್ತಿಸುವವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಮತ್ತೊಬ್ಬರ ಆರೋಗ್ಯಕ್ಕೆ ಎರವಾಗುವಂತೆ ಸಂಭ್ರಮಾಚರಣೆ ಇರಬಾರದು ಎಂದು ಹೇಳಿದೆ.

“ಆಚರಣೆಯ ನೆಪದಲ್ಲಿ, ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಒದಗಿಸಲಾದ ಇತರರ ಆರೋಗ್ಯದ ಹಕ್ಕನ್ನು ಉಲ್ಲಂಘಿಸಲು ಯಾರಿಗೂ ಅನುಮತಿ ನೀಡಲಾಗದು ಮತ್ತು ಇತರರ ಅದರಲ್ಲಿಯೂ ವಿಶೇಷವಾಗಿ ಹಿರಿಯ ನಾಗರಿಕರ ಮತ್ತು ಮಕ್ಕಳ ಜೀವನದೊಂದಿಗೆ ಆಟವಾಡಲು ಯಾರಿಗೂ ಅನುಮತಿ ನೀಡುವುದಿಲ್ಲ” ಎಂದು ಅದು ಹೇಳಿತು.

ಆದರೆ ಪಟಾಕಿಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ನಾಗರಿಕರ, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯಕ್ಕೆ ಹಾನಿಯುಂಟುಮಾಡುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ತಿಳಿಸಿತು.

ನಿಷೇಧಿತ ಪಟಾಕಿಗಳನ್ನು "ಹಸಿರು ಪಟಾಕಿ” ಎಂಬ ವೇಷದಲ್ಲಿ ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದ ನಂತರ ಪಟಾಕಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ನಿರ್ದೇಶನಗಳನ್ನು ನೀಡಲಾಯಿತು.

Also Read
ಆದೇಶ ಉಲ್ಲಂಘನೆ: ದೇಶದ ಆರು ಪ್ರಮುಖ ಪಟಾಕಿ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ನ್ಯಾಯಾಲಯ ನೀಡಿರುವ ವಿವಿಧ ನಿರ್ದೇಶನಗಳ ಹೊರತಾಗಿಯೂ ಅವುಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು ದುರದೃಷ್ಟಕರ ಎಂದು ಹೇಳಿದ ಪೀಠ ಆರೋಪಗಳು ನಿಜವೆಂದು ಕಂಡು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಸಹಿಸಲಾಗುವುದಿಲ್ಲ ಎಂದು ಹೇಳಿತು.

ನಿಯಮ ಪಾಲನೆಯ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿದ್ದರೂ ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸಲು ಸರ್ಕಾರಿ ಸಂಸ್ಥೆಗಳು ಒಲವು ತೋರುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಮತ್ತು ಆತ್ಮಸಾಕ್ಷಿಗನುಗುಣವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಯಾವುದೇ ಲೋಪ ಉಂಟಾದಲ್ಲಿ ಸ್ಥಳೀಯ ಅಧಿಕಾರಿಗಳು ಖುದ್ದು ಹೊಣೆಗಾರರಾಗುತ್ತಾರೆ ಎಂದು ಕೂಡ ಅದು ಎಚ್ಚರಿಕೆ ನೀಡಿದೆ.

ನಿರ್ದಿಷ್ಟ ಪ್ರದೇಶದಲ್ಲಿ ಯಾವುದೇ ನಿಷೇಧಿತ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿ , ಕಾರ್ಯದರ್ಶಿಗಳು (ಗೃಹ ಇಲಾಖೆ), ಸಂಬಂಧಪಟ್ಟ ಪ್ರದೇಶದ ಪೊಲೀಸ್ ಕಮಿಷನರ್, ಎಸ್‌ಪಿ, ಪೊಲೀಸ್‌ ಠಾಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅದು ವಿವರಿಸಿದೆ.

ನ್ಯಾಯಾಲಯದ ನಿರ್ದೇಶನಗಳನ್ನು ಸಮರ್ಪಕವಾಗಿ ಪ್ರಚಾರ ಮಾಡಲು ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 30ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com