ನ್ಯಾಯಮೂರ್ತಿಗಳ ಮೇಲಿನ ಪ್ರಾಯೋಜಿತ ದಾಳಿಗಳ ವಿರುದ್ಧ ಕೇಂದ್ರದ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು: ಸಿಜೆಐ ರಮಣ

ನವದೆಹಲಿಯ ವಿಜ್ಞಾನ ಭವನದಲ್ಲಿ ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
Supreme Court, CJI NV Ramana
Supreme Court, CJI NV Ramana

“ನ್ಯಾಯಮೂರ್ತಿಗಳ ಮೇಲೆ ದೈಹಿಕ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ನಡೆಸುವುದು ಹೆಚ್ಚಾಗಿದ್ದು, ಇದು ಪ್ರಾಯೋಜಿತವೂ ಮತ್ತು ತಾಳಮೇಳ ಹೊಂದಿರುವಂತೆ ಕಾಣುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶುಕ್ರವಾರ ಆತಂಕ ವ್ಯಕ್ತಪಡಿಸಿದರು. ನವದೆಹಲಿಯ ವಿಜ್ಞಾನ ಭವನದಲ್ಲಿ ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಯುತ್ತಿರುವುದು ನ್ಯಾಯಾಂಗಕ್ಕೆ ಅತ್ಯಂತ ಕಳವಳಕಾರಿಯಾದ ಬೆಳವಣಿಗೆಯಾಗಿದೆ. ನ್ಯಾಯಿಕ ಅಧಿಕಾರಿಗಳ ಮೇಲೆ ದೈಹಿಕ ದಾಳಿ ನಡೆಸುತ್ತಿರುವುದು ದಿನೇದಿನೇ ಹೆಚ್ಚುತ್ತಿದೆ. ಮಾಧ್ಯಮದಲ್ಲಿ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗವನ್ನು ಕೇಂದ್ರೀಕರಿಸಿ ದಾಳಿ ಮಾಡಲಾಗುತ್ತಿದೆ. ದಾಳಿಗಳು ಪ್ರಾಯೋಜಿತವಾಗಿವೆ ಎಂದೆನಿಸುತ್ತಿದ್ದು, ತಾಳಮೇಳ ಹೊಂದಿವೆ. ಕಾನೂನು ರಕ್ಷಿಸುವ ಸಂಸ್ಥೆಗಳು ನಿರ್ದಿಷ್ಟವಾಗಿ ಕೇಂದ್ರೀಯ ಸಂಸ್ಥೆಗಳು ಇಂಥ ದುರುದ್ದೇಶಪೂರಿತ ದಾಳಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಸುಭದ್ರವಾದ ವಾತಾವರಣ ಸೃಷ್ಟಿಸುವುದು ಸರ್ಕಾರಗಳ ಕೆಲಸವಾಗಿದೆ. ಹೀಗಾದಾಗ ನ್ಯಾಯಮೂರ್ತಿಗಳು ಮತ್ತು ನ್ಯಾಯಿಕ ಅಧಿಕಾರಿಗಳು ನಿರ್ಭೀತಿಯಿಂದ ಕಾರ್ಯನಿರ್ವಹಿಸುತ್ತಾರೆ” ಎಂದು ಸಿಜೆಐ ಹೇಳಿದರು.

“ಸಂವಿಧಾನ ಸಭೆಯು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿದೆ. ನಾಗರಿಕರ ಬಗೆಹರಿಸದ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಕಾರ್ಯಾಂಗವನ್ನು ಎಚ್ಚರಿಸಲು ನ್ಯಾಯಿಕ ಮಧ್ಯಪ್ರವೇಶ ಮಾಡಲಾಗುತ್ತದೆಯೇ ವಿನಾ ಅದರ ಪಾತ್ರ ಕಸಿದುಕೊಳ್ಳಲು ಅಲ್ಲ” ಎಂದು ಸಿಜೆಐ ಹೇಳಿದರು.

ಭಾರತದ ನ್ಯಾಯಾಂಗದ ಎಲ್ಲಾ ಹಂತಗಳಲ್ಲೂ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನ್ಯಾ. ರಮಣ ಅವರು “ಖಾಲಿ ಇರುವ ನ್ಯಾಯಿಕ ಅಧಿಕಾರಿಗಳ ಹುದ್ದೆಗಳನ್ನು ತುಂಬಬೇಕು. ಹೆಚ್ಚು ಹುದ್ದೆ ಸೃಷ್ಟಿಸಬೇಕು. ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಹುದ್ದೆಗಳನ್ನು ತುಂಬ ಬೇಕು. ನ್ಯಾಯಾಲಯದ ಪ್ರಕ್ರಿಯೆಗೆ ಸಹಕರಿಸುವುದಕ್ಕೆ ಪೊಲೀಸ್‌ ಮತ್ತು ಕಾರ್ಯಾಂಗದಲ್ಲಿ ಜಾಗೃತಿ ಮೂಡಿಸಲು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ಇದಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನ್ಯಾಯಿಕ ಮೂಲಸೌಕರ್ಯ ಪ್ರಾಧಿಕಾರ ಸೃಷ್ಟಿಸಬೇಕಿದೆ. ಇದಕ್ಕೆ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋರುತ್ತೇನೆ” ಎಂದು ಸಿಜೆಐ ಹೇಳಿದರು.

ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ಪರಿಕರಗಳು ಸಿಗುವಂತೆ ಮಾಡುವುದು ಅಗತ್ಯ ಎಂದು ಒತ್ತಿಹೇಳಿದ ಸಿಜೆಐ ರಮಣ ಅವರು ವಿಭಿನ್ನ ದೃಷ್ಟಿಕೋನದ ಸುಧಾರಣೆಯನ್ನು ಸೂಚಿಸುವ ವಿಸ್ತೃತ ನೆಲೆಯಲ್ಲಿ ನ್ಯಾಯಾಂಗದ ಭಾರತೀಕರಣದ ಬಗ್ಗೆ ಪ್ರಸ್ತಾಪಿಸಿದರು. “ಇಂದು ಭಾರತದಲ್ಲಿರುವ ನ್ಯಾಯಾಂಗ ವ್ಯವಸ್ಥೆಯು ವಸಹಾತುಶಾಹಿ ಕಾಲದ್ದಾಗಿದೆ. ಸಾಮಾಜಿಕ ವಾಸ್ತವ ಅಥವಾ ಸ್ಥಳೀಯ ಪರಿಸ್ಥಿತಿಯನ್ನು ಅದು ಪರಿಗಣಿಸಿಲ್ಲ. ಪಾಲಿಸಲಾಗುತ್ತಿರುವ ನಿಯಮಗಳು, ವಾದದ ಭಾಷೆ ಮತ್ತು ತೀರ್ಪು, ಇದೆಲ್ಲದರ ಮಧ್ಯೆ ಅತಿ ಹೆಚ್ಚಿನ ವೆಚ್ಚದಿಂದಾಗಿ ನ್ಯಾಯಾಂಗ ವ್ಯವಸ್ಥೆಯಿಂದ ಸಾಮಾನ್ಯ ಮನುಷ್ಯ ದೂರ ಉಳಿಯುವಂತಾಗಿದೆ. ನ್ಯಾಯಾಲಯಗಳ ಮೆಟ್ಟಿಲೇರಲು ಜನರು ಹಿಂಜರಿಯುವಂತಿರಬಾರದು. ಯಾವಾಗ ದಾವೆದಾರರು ನೇರವಾಗಿ ಭಾಗವಹಿಸಲು ಅವಕಾಶ ಪಡೆಯುತ್ತಾರೋ ಆಗ ಪ್ರಕ್ರಿಯೆ ಮತ್ತು ಫಲಿತಾಂಶದಲ್ಲಿ ಅವರ ನಂಬಿಕೆ ಬಲಗೊಳ್ಳುತ್ತದೆ” ಎಂದು ಸಿಜೆಐ ರಮಣ ಹೇಳಿದರು.

Also Read
[ಸಂವಿಧಾನ ದಿನ] ದುರುದ್ದೇಶಪೂರಿತ ದಾಳಿಗಳಿಂದ ನ್ಯಾಯಾಂಗವನ್ನು ರಕ್ಷಿಸಿ: ವಕೀಲರಿಗೆ ಸಿಜೆಐ ರಮಣ ಕರೆ

“ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆ ಸಂಖ್ಯೆ ಒಂದೇ ಒಂದು ಹೇಳಲು ಖುಷಿಯಾಗುತ್ತದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ವರು ಮಹಿಳಾ ನ್ಯಾಯಮೂರ್ತಿಗಳಿದ್ದು, ಈ ಸಂಖ್ಯೆ ಹೆಚ್ಚಬೇಕು. ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿಯು ನಿರಂತರವಾಗಿ ನಡೆಯುತ್ತಿದೆ. ಸಾಂವಿಧಾನಿಕ ವ್ಯವಸ್ಥೆ ಕಾರ್ಯನಿರ್ವಹಿಸುವ ರೀತಿಯನ್ನು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅರ್ಥೈಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ” ಎಂದು ಮೆಚ್ಚುಗೆ ಸೂಚಿಸಿದರು.

“ಸಮಾಜ ಕೇಂದ್ರಿತವಾಗಿ ಕೆಲಸ ಮಾಡುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆ. ಈ ದಿನ, 'ನಾವು, ಜನರ' ಹಿತಾಸಕ್ತಿ ಕಾಯುವ ಮೂಲಕ ಸಂವಿಧಾನವನ್ನು ಎತ್ತಿಹಿಡಿಯಲು ತನ್ನನ್ನು ತಾನು ಪುನಾ ಸಮರ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ದೇಶಭಕ್ತಿಯ ಕಾರ್ಯವು ನ್ಯಾಯಾಂಗಕ್ಕೆ ಇದೆ ಎಂದು ನಾನು ಭಾವಿಸುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

Related Stories

No stories found.
Kannada Bar & Bench
kannada.barandbench.com