ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಅರ್ಜಿದಾರರು ಕಾಂಗ್ರೆಸ್ ಇಲ್ಲವೇ ತೃಣಮೂಲ ಕಾಂಗ್ರೆಸ್‌ಗೆ ಸೇರಿದವರಾಗಿದ್ದು, ಆ ಪಕ್ಷಗಳ ಉನ್ನತ ನಾಯಕರ ವಿರುದ್ಧ ಇ ಡಿ ತನಿಖೆ ನಡೆಸುತ್ತಿದೆ ಎಂದು ಕೇಂದ್ರ ಹೇಳಿದೆ.
Jaya Thakur, Saket Gokhale, Randeep Singh Surjewala, Mahua Moitra with ED
Jaya Thakur, Saket Gokhale, Randeep Singh Surjewala, Mahua Moitra with ED

ಪ್ರಸ್ತುತ ಜಾರಿ ನಿರ್ದೇಶನಾಲಯದ ನಿರ್ದೇಶಕ (ಇ ಡಿ) ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಡಾ ಜಯ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅರ್ಜಿದಾರರಾದ ಜಯಾ ಠಾಕೂರ್, ಸಾಕೇತ್ ಗೋಖಲೆ, ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಮಹೂವ ಮೊಯಿತ್ರಾ ಅವರು ಕಾಂಗ್ರೆಸ್ ಇಲ್ಲವೇ ತೃಣಮೂಲ ಕಾಂಗ್ರೆಸ್‌ಗೆ ಸೇರಿದವರಾಗಿದ್ದು, ಆ ಪಕ್ಷಗಳ ಉನ್ನತ ನಾಯಕರ ವಿರುದ್ಧ ಇ ಡಿ ತನಿಖೆ ನಡೆಸುತ್ತಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

"ಬಹುತೇಕ ಪ್ರಕರಣಗಳಲ್ಲಿ ಸಕ್ಷಮ ನ್ಯಾಯಾಲಯಗಳು ಪ್ರಕರಣವನ್ನು ಗಣನೆಗೆ ತೆಗೆದುಕೊಂಡಿವೆ ಇಲ್ಲವೇ ಸಾಂವಿಧಾನಿಕ ನ್ಯಾಯಾಲಯಗಳು ಅವರಿಗೆ ಯಾವುದೇ ಪರಿಹಾರ ನೀಡಲು ನಿರಾಕರಿಸಿವೆ" ಎಂದು ಅಫಿಡವಿಟ್ ಹೇಳಿದೆ.

ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಟಿಎಂಸಿ ಹಾಗೂ ಇತರ ನಾಯಕರು ಸಲ್ಲಿಸಿದ ಕನಿಷ್ಠ 8 ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಕೃಷ್ಣ ಚಂದರ್ ಸಿಂಗ್, ವಿನೀತ್ ನಾರಾಯಣ್ ಮತ್ತು ಮನೋಹರಲಾಲ್ ಶರ್ಮಾ ಇತರ ಅರ್ಜಿದಾರರಾಗಿದ್ದಾರೆ.

ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸಿರುವುದು, ಅವರಿಗೆ ಹೆಚ್ಚುವರಿಯಾಗಿ ಅಧಿಕಾರಾವಧಿ ವಿಸ್ತರಿಸುವುದರ ವಿರುದ್ಧ ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್ 2021ರಂದು ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಮಿಶ್ರಾ ಅವರನ್ನು ಇ ಡಿ ನಿರ್ದೇಶಕರಾಗಿ ನವೆಂಬರ್‌ 2018ರಲ್ಲಿ ಮೊದಲ ಬಾರಿಗೆ ಎರಡು ವರ್ಷಗಳ ಅವಧಿಗೆ ನೇಮಿಸಲಾಯಿತು. ಮೇ 2020ಕ್ಕೆ ಅವರು ನಿವೃತ್ತಿ ವಯೋಮಾನವಾದ 60 ವಯಸ್ಸು ತಲುಪಿದ್ದರು. ಆದರೆ, ನವೆಂಬರ್‌ 13, 2020ರಂದು 2018ರ ಅವರ ನೇಮಕಾತಿ ಆದೇಶಕ್ಕೆ ಪೂರ್ವಾನ್ವಯವಾಗುವಂತೆ ಮಾರ್ಪಾಡು ಮಾಡಿ ಸೇವಾವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿ ರಾಷ್ಟ್ರಪತಿಯವರು ಆದೇಶಿಸಿದರು. ಇದನ್ನು ಎನ್‌ಜಿಒ ಸಂಸ್ಥೆ ಕಾಮನ್‌ಕಾಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ತದನಂತರವೂ ಕೂಡ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು.

ಪ್ರಕರಣದಲ್ಲಿ ಹಿರಿಯ ವಕೀಲ ಕೆ ವಿ ವಿಶ್ವನಾಥನ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂ ಕೋರ್ಟ್ ಸೋಮವಾರ ನೇಮಕ ಮಾಡಿದೆ. ಸೆಪ್ಟೆಂಬರ್ 12 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

Also Read
ಇ ಡಿ ನಿರ್ದೇಶಕ ಮಿಶ್ರಾ ಸೇವಾವಧಿ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಅಫಿಡವಿಟ್‌ನಲ್ಲಿರುವ ಇತರೆ ಸಮರ್ಥನೆಗಳು

  • ಇ ಡಿಯಿಂದ ನಿರ್ವಹಿಸಬೇಕಾದ ವಿಶೇಷ ಕಾರ್ಯವು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಮತ್ತು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿ 2ರಿಂದ 5 ವರ್ಷಗಳ ಅವಧಿಯನ್ನು ಹೊಂದಿರಬೇಕು ಎಂಬ ಕಾರಣದಿಂದ ಅಧಿಕಾರಾವಧಿ ವಿಸ್ತರಿಸಲಾಗಿದೆ.

  • ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿರುವ ಹಿಂದೆ ಸ್ಪಷ್ಟ ರಾಜಕೀಯ ಹಿತಾಸಕ್ತಿ ಇದೆ.

  • ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೆಚ್ಚಾಗಿ ಸಲ್ಲಿಸುತ್ತಿರುವುದನ್ನು ಸುಪ್ರೀಂ ಕೋರ್ಟ್ ಸ್ವತಃ ಗಮನಿಸಿದ್ದು ಅಂತಹ ಅಭ್ಯಾಸವನ್ನು ಅದು ನಿರಾಕರಿಸಿದೆ.

  • ವಾಸ್ತವವಾಗಿ, ಅಧಿಕಾರಾವಧಿಗೆ ಸಂಬಂಧಿಸಿದಂತೆ ಎರಡು ಶಾಸನಗಳಲ್ಲಿ ಈಗ ಸ್ಪಷ್ಟ ಸಕ್ರಿಯಗೊಳಿಸುವ ಷರತ್ತುಗಳನ್ನು ಅಳವಡಿಸಲಾಗಿದೆ.

  • ಸ್ವಾತಂತ್ರ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಿಬಿಐ ಮತ್ತು ಇ ಡಿ ನಿರ್ದೇಶಕರ ಅಧಿಕಾರಾವಧಿಗೆ ಗರಿಷ್ಠ ಮಿತಿ ವಿಧಿಸಿರುವುದು ತರ್ಕಬದ್ಧವಾಗಿದೆ.

  • ಆದ್ದರಿಂದ ಅವರ ಅಧಿಕಾರಾವಧಿಯನ್ನು ವಿಶೇಷ ಸಂದರ್ಭಗಳಲ್ಲಿ, ಆಯಾ ಕಾಯಿದೆಯ ಅಡಿಯಲ್ಲಿ ಸೂಚಿಸಲಾದ ಸಮಿತಿಯ ಶಿಫಾರಸಿನ ಮೇರೆಗೆ ಮತ್ತು ಲಿಖಿತವಾಗಿ ದಾಖಲಿಸುವ ಕಾರಣಕ್ಕಾಗಿ ಆರಂಭಿಕ ಷರತ್ತುಗಳನ್ನು ಮೀರಿ ವಿಸ್ತರಿಸಬೇಕಾಗಬಹುದು. ಸಿಬಿಐ ಅಥವಾ ಇಡಿ ನಿರ್ದೇಶಕರನ್ನು ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ವಿಸ್ತರಿಸಬಾರದು ಎಂಬ ಯಾವುದೇ ನಿರ್ಬಂಧವಿಲ್ಲ.

  • ತಮ್ಮ ರಾಜಕೀಯ ಪಕ್ಷದ ನಾಯಕರು ಮಾಡಿದ ಅಪರಾಧಗಳ ಬಗ್ಗೆ ಈ ತನಿಖಾ ಸಂಸ್ಥೆಗಳು ಕಣ್ಣು ಮುಚ್ಚಿ ಕುಳಿತಿದ್ದಾಗ ಮಾತ್ರ ಇವು ಸ್ವತಂತ್ರವಾಗಿವೆ ಎಂದು ಅರ್ಜಿದಾರರು ಅಂದುಕೊಳ್ಳುತ್ತಾರೆ.

Related Stories

No stories found.
Kannada Bar & Bench
kannada.barandbench.com