ಜಾರಿ ನಿರ್ದೇಶನಾಲಯದ (ಇ ಡಿ) ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿ ವಿಸ್ತರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಹತ್ತು ದಿನಗಳ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಮಿಶ್ರಾ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಡಾ. ಜಯ ಠಾಕೂರ್, ರಣದೀಪ್ ಸಿಂಗ್ ಸುರ್ಜೆವಾಲಾ, ಸಾಕೇತ್ ಗೋಖಲೆ, ಮೊಹುವಾ ಮೊಯಿತ್ರಾ ಸೇರಿದಂತೆ ಕಾಂಗ್ರೆಸ್, ಟಿಎಂಸಿ ಹಾಗೂ ಇತರ ಪಕ್ಷಗಳ ನಾಯಕರು, ಸಲ್ಲಿಸಿದ್ದ ಕನಿಷ್ಠ 8 ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಕೃಷ್ಣ ಚಂದರ್ ಸಿಂಗ್, ವಿನೀತ್ ನರೈನ್ ಮತ್ತು ಮನೋಹರಲಾಲ್ ಶರ್ಮಾ ಅರ್ಜಿ ಸಲ್ಲಿಸಿದ ಇತರ ವ್ಯಕ್ತಿಗಳಾಗಿದ್ದಾರೆ.
ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸಿರುವುದು, ಅವರಿಗೆ ಹೆಚ್ಚುವರಿಯಾಗಿ ಅಧಿಕಾರಾವಧಿ ವಿಸ್ತರಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2021ರಂದು ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಮಿಶ್ರಾ ಅವರನ್ನು ಇ ಡಿ ನಿರ್ದೇಶಕರಾಗಿ ನವೆಂಬರ್ 2018ರಲ್ಲಿ ಮೊದಲ ಬಾರಿಗೆ ಎರಡು ವರ್ಷಗಳ ಅವಧಿಗೆ ನೇಮಿಸಲಾಯಿತು. ಮೇ 2020ಕ್ಕೆ ಅವರು ನಿವೃತ್ತಿ ವಯೋಮಾನವಾದ 60 ವಯಸ್ಸು ತಲುಪಿದ್ದರು. ಆದರೆ, ನವೆಂಬರ್ 13, 2020ರಂದು 2018ರ ಅವರ ನೇಮಕಾತಿ ಆದೇಶಕ್ಕೆ ಪೂರ್ವಾನ್ವಯವಾಗುವಂತೆ ಮಾರ್ಪಾಡು ಮಾಡಿ ಸೇವಾವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿ ರಾಷ್ಟ್ರಪತಿಯವರು ಆದೇಶಿಸಿದರು. ಇದನ್ನು ಎನ್‌ಜಿಒ ಸಂಸ್ಥೆ ಕಾಮನ್‌ಕಾಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ತದನಂತರವೂ ಕೂಡ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದೆ.