ನಿಯಮ ರೂಪಿಸುವ, ಸಮಿತಿ, ಪೀಠ ರಚಿಸುವ ಅಧಿಕಾರ ಸಿಐಸಿಗೆ ಇದೆ: ಸುಪ್ರೀಂ ಕೋರ್ಟ್

ತನ್ನ ಕಾರ್ಯಭಾರ ನಿರ್ವಹಿಸಲು ಮತ್ತು ನಾಗರಿಕರ ಮಾಹಿತಿಯ ಹಕ್ಕನ್ನು ಎತ್ತಿಹಿಡಿಯಲು ಮಾಹಿತಿ ಆಯುಕ್ತರ ಪೀಠ ರಚಿಸುವ ಮತ್ತು ಅವರಿಗೆ ಕೆಲಸ ನಿಯೋಜಿಸುವ ಸಾಮರ್ಥ್ಯ ಸಿಐಸಿಗೆ ಅತ್ಯಗತ್ಯ ಎಂದು ಹೇಳಿದ ನ್ಯಾಯಾಲಯ.
Central Information Commission
Central Information Commission
Published on

ಪೀಠ ರಚಿಸುವ, ಆದೇಶ ಹೊರಡಿಸುವ, ನಿಯಮಾವಳಿ ರೂಪಿಸುವ ಮತ್ತು ತನ್ನ ಕಾರ್ಯಚಟುವಟಿಕೆಗಳಲ್ಲಿ ಸಮಿತಿ ರಚಿಸುವ ಅಧಿಕಾರ ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ಇದೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ [ಕೇಂದ್ರ ಮಾಹಿತಿ ಆಯೋಗ ಮತ್ತು ಡಿಡಿಎ ಇನ್ನಿತರರ ನಡುವಣ ಪ್ರಕರಣ].

ಆಯೋಗದೊಳಗೆ ಕೆಲಸದ ಪರಿಣಾಮಕಾರಿ ನಿರ್ವಹಣೆ ಮತ್ತು ಹಂಚಿಕೆಗೆ ಇದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ತಿಳಿಸಿದೆ.

Also Read
ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್; ಕೇಜ್ರಿಗೆ ದಂಡ

"ಆರ್‌ಟಿಐ ಕಾಯಿದೆ ಸಿಐಸಿಗೆ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸ್ಪಷ್ಟವಾಗಿ ವ್ಯಕ್ತಗೊಳಿಸದೆ ಇದ್ದರೂ, ಆರ್‌ಟಿಐ ಕಾಯಿದೆಯ ಸೆಕ್ಷನ್ 12(4) ಅಡಿಯಲ್ಲಿ ನೀಡಲಾದ ಸಮಗ್ರ ಅಧಿಕಾರಗಳು ಆಯೋಗದ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಅಂತರ್ಗತವಾಗಿ ಒಳಗೊಂಡಿವೆ. ಆದೇಶವನ್ನು ಪೂರೈಸಲು ಅಗತ್ಯವಾದ ವಿವಿಧ ಕಾರ್ಯವಿಧಾನ ಮತ್ತು ವ್ಯವಸ್ಥಾಪಕ ಅಂಶಗಳನ್ನು ತಿಳಿಸುವುದಕ್ಕಾಗಿ ಈ ನಿಯಮಗಳು ಆಯೋಗದ ದಕ್ಷ ಆಡಳಿತ ಮತ್ತು ಕಾರ್ಯಾಚರಣೆಯ ಅಗತ್ಯ ಸಾಧನಗಳಾಗಿವೆ” ಎಂದು ನ್ಯಾಯಾಲಯ ನುಡಿದಿದೆ.

ದೆಹಲಿ ಹೈಕೋರ್ಟ್‌ ಮೇ 2010ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸುವ ವೇಳೆ ಈ ಅಭಿಪ್ರಾಯಗಳನ್ನು ತಿಳಿಸಲಾಗಿದೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 12(4)ರ ಅಡಿಯಲ್ಲಿ ಮುಖ್ಯ ಮಾಹಿತಿ ಆಯುಕ್ತರಿಗೆ ಅಂತಹ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಸಿಐಸಿ ಪ್ರಸ್ತುತ ಮೇಲ್ಮನವಿ ಸಲ್ಲಿಸಿತ್ತು.

ತನ್ನ  ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಸಿಐಸಿ ಅಧಿಕಾರಿಗಳ ಸಮಿತಿ  ರಚಿಸುವುದನ್ನು ಪ್ರಶ್ನಿಸಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆಡಳಿತಾತ್ಮಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಮೂಲಭೂತ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಒತ್ತಿಹೇಳಿತು.

ಸಿಐಸಿ ಅಧಿಕಾರಗಳ ಕುರಿತಂತೆ ನಿರ್ಬಂಧಿತ ವ್ಯಾಖ್ಯಾನ  ಮಾಡುವುದು ಅಥವಾ ಆಯೋಗದ ಕಾರ್ಯಾಚರಣೆಯಲ್ಲಿ ನೇರವಾಗಿ ಮಧ್ಯಪ್ರವೇಶಿಸುವುದು ಆಯೋಗದ ಸ್ವಾಯತ್ತತೆಗೆ ಅಡ್ಡಿಯುಂಟು ಮಾಡಿ ಅದರ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೆ ಸಿಐಸಿಗೆ ತನ್ನದೇ ಆದ ನಿಯಮಾವಳಿಗಳನ್ನು ರೂಪಿಸಲು ಮತ್ತು ತನ್ನ ಅಧಿಕಾರವನ್ನು ತಾನು ರಚಿಸಿದ ಸಮಿತಿಗೆ ನೀಡಲು ಆರ್‌ಟಿಐ ಕಾಯಿದೆಯ ಸೆಕ್ಷನ್ 12(4) ಮತ್ತು 15(4) ಸ್ಪಷ್ಟವಾಗಿ ಅವಕಾಶ ಒದಗಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Also Read
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಗ್ಗೆ ಆರ್‌ಟಿಐ ಮಾಹಿತಿ ಕೋರಿಕೆ: ಸಿಐಸಿ ಆದೇಶಕ್ಕೆ ಹೈಕೋರ್ಟ್ ತಡೆ

ಆದ್ದರಿಂದ, ಅದರ ವ್ಯಾಪಕ ನಿಯಂತ್ರಕ ಅಧಿಕಾರಗಳ ವಿರುದ್ಧದ ವಾದಗಳು ಸಾಧಾರವಾಗಿರದೆ ಶಬ್ದಾರ್ಥ ವ್ಯತ್ಯಾಸದ ಪ್ರಶ್ನೆಗಳಾಗಿರುತ್ತವೆ ಎಂದು ಅದು ನುಡಿದಿದೆ. ಈ ಅವಲೋಕನಗಳೊಂದಿಗೆ ಸಿಐಸಿಯ ಮೇಲ್ಮನವಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿತು.

ಸಿಐಸಿ ಪರ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಡಿಡಿಎ ಪರ ವಕೀಲ ನಿತಿನ್ ಮಿಶ್ರಾ ವಾದ ಮಂಡಿಸಿದ್ದರು. ಮೂಲ ಮಾಹಿತಿ ಹಕ್ಕು ಅರ್ಜಿದಾರರನ್ನು ವಕೀಲ ಸರ್ಬಜಿತ್ ರಾಯ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com