ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಗ್ಗೆ ಆರ್‌ಟಿಐ ಮಾಹಿತಿ ಕೋರಿಕೆ: ಸಿಐಸಿ ಆದೇಶಕ್ಕೆ ಹೈಕೋರ್ಟ್ ತಡೆ

ತನ್ನ ದೇಣಿಗೆಗಳಿಗೆ ಆದಾಯ ತೆರಿಗೆ ಕಾಯಿದೆಯಡಿ ವಿನಾಯಿತಿ ಕೋರಿ ಟ್ರಸ್ಟ್ ಸಲ್ಲಿಸಿದ ಅರ್ಜಿ ಮತ್ತು ಟ್ರಸ್ಟ್ ಡೀಡ್‌ ಪ್ರತಿಯನ್ನು ಹಂಚಿಕೊಳ್ಳುವಂತೆ ಕೇಂದ್ರ ಮಾಹಿತಿ ಆಯೋಗವು ಸಿಬಿಡಿಟಿಗೆ ಈ ಹಿಂದೆ ಆದೇಶ ನೀಡಿತ್ತು.
Ayodhya Ram Mandir
Ayodhya Ram Mandir

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದಂತೆ ಆರ್‌ಟಿಐ ಕಾಯಿದೆಯಡಿ ಮಾಹಿತಿ ನೀಡುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ ನಿರ್ದೇಶಿಸಿದ್ದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಕ್ಕೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತಡೆ ನೀಡಿದೆ.

ಸುಪ್ರೀಂ ಕೋರ್ಟ್‌ 2019ರಲ್ಲಿ ನೀಡಿದ್ದ ಅಯೋಧ್ಯೆ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸಿತ್ತು.

ಕೈಲಾಶ್ ಚಂದ್ರ ಮೂಂದ್ರಾ ಎಂಬುವವರಿಗೆ ಮಾಹಿತಿ ನಿರಾಕರಿಸಿದ್ದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ), ಮತ್ತು ಮೇಲ್ಮನವಿ ಪ್ರಾಧಿಕಾರವಾದ ಸಿಬಿಡಿಟಿಗಳ ಆದೇಶವನ್ನು ಸಿಐಸಿ ನವೆಂಬರ್ 30, 2022ರಂದು ರದ್ದುಗೊಳಿಸಿತ್ತು.

Also Read
ಅಯೋಧ್ಯೆ ತೀರ್ಪಿಗೆ ಒಂದು ವರ್ಷ: ಅಂದಿನಿಂದ ಇಲ್ಲಿಯವರೆಗೆ ನಡೆದ ಘಟನಾವಳಿಗಳ ಸುತ್ತ ಹೊರಳುನೋಟ

ಮೂಂದ್ರಾ ಅವರ ಎರಡನೇ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸಿಐಸಿ ತನ್ನ ದೇಣಿಗೆಗಳಿಗಾಗಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಜಿ (2)(ಬಿ) ಅಡಿಯಲ್ಲಿ ವಿನಾಯಿತಿ/ಕಡಿತ ಪಡೆಯಲು ಟ್ರಸ್ಟ್ ಸಲ್ಲಿಸಿದ ಸಂಪೂರ್ಣ ಅರ್ಜಿಯ ಪ್ರತಿಯನ್ನು ಒದಗಿಸುವಂತೆ ಸಿಬಿಡಿಟಿಗೆ ನಿರ್ದೇಶನ ನೀಡಿತ್ತು. ಅರ್ಜಿಯೊಂದಿಗೆ ಟ್ರಸ್ಟ್‌ಗೆ ಸಂಬಂಧಿಸಿದ ಟ್ರಸ್ಟ್ ಡೀಡ್‌  ಪ್ರತಿಯನ್ನು ನೀಡುವಂತೆ ಸಿಬಿಡಿಟಿಗೆ ಸಿಐಸಿ ಆದೇಶಿಸಿತ್ತು.

ಸಿಐಸಿ ನಿರ್ದೇಶನಗಳನ್ನು ಪ್ರಶ್ನಿಸಿ ಸಿಪಿಐಒ, ಸಿಬಿಡಿಟಿ ನ್ಯಾಯಾಲಯದ ಮೊರೆ ಹೋಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.  ಪ್ರತಿಬಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಆದೇಶಕ್ಕೆ ತಡೆ ನೀಡಿದೆ.

ಆದಾಯ ತೆರಿಗೆ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಗೆ ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 138ರ ಅಡಿಯಲ್ಲಿ ವಿನಾಯಿತಿ ಇದೆ ಎಂಬ ಅಂಶವನ್ನು ಪರಿಗಣಿಸಲು ಸಿಐಸಿ ವಿಫಲವಾಗಿದೆ. ಸಿಪಿಐಒ, ಸಿಬಿಡಿಟಿ ಮತ್ತು ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ರದ್ದುಗೊಳಿಸಲು ಸಿಐಸಿ ತನ್ನ ಆದೇಶದಲ್ಲಿ ಯಾವುದೇ ಕಾರಣ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆರ್‌ಟಿಐ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ಪ್ರಕರಣದಲ್ಲಿ ಟ್ರಸ್ಟನ್ನು ಪ್ರತಿವಾದಿಯನ್ನಾಗಿ ಮಾಡಬೇಕೆ ಎಂಬುದನ್ನು ನಿರ್ಧರಿಸುವುದು ಸಿಪಿಐಒ ಮತ್ತು ಸಿಬಿಡಿಟಿಗೆ ಬಿಟ್ಟಿದೆ ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 23ರಂದು ನಡೆಯಲಿದೆ.

Kannada Bar & Bench
kannada.barandbench.com