ಸೆಂಟ್ರಲ್ ವಿಸ್ಟಾ ಕಾಮಗಾರಿ ಸ್ಥಗಿತ ಕೋರಿದ್ದ ಅರ್ಜಿ: ನಾಳೆ ವಿಚಾರಣೆ ಕೈಗೆತ್ತಿಕೊಳ್ಳಲಿರುವ ದೆಹಲಿ ಹೈಕೋರ್ಟ್

ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಅವರನ್ನು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಕೋರಿದ್ದರು.
Central Vista
Central Vista
Published on

ಸೆಂಟ್ರಲ್ ವಿಸ್ಟಾ ಪುನರಭಿವೃದ್ಧಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಕೋರಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಲು ದೆಹಲಿ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ. ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 17ರ ಬದಲು ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ, ಕೋರಿದಾಗ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಅದನ್ನು ಪುರಸ್ಕರಿಸಿದರು.

ದೆಹಲಿ ಹೈಕೋರ್ಟ್ ಈ ಹಿಂದೆ ಯಾವುದೇ ಆದೇಶ ನೀಡದೆ ಮೇ 17ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಮೇ 17ರಂದು ವಿಚಾರಣೆ ಕೈಗೆತ್ತಿಕೊಳ್ಳುವುದರಿಂದ ಅರ್ಜಿಯ ಉದ್ದೇಶಕ್ಕೆ ಸೋಲುಂಟಾಗಲಿದೆ ಎಂದು ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದರು.ಅ

ದೆಹಲಿ ಹೈಕೋರ್ಟ್ ಈಗಾಗಲೇ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದೆ ಎಂಬ ಅಂಶವನ್ನು ಆಧರಿಸಿ ಸುಪ್ರೀಂಕೋರ್ಟ್‌ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಮೇ 7ರಂದು ನಿರಾಕರಿಸಿತ್ತು. ಪ್ರಕರಣವನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ಗೆ ಸೂಚಿಸಿತ್ತು.

Also Read
ಸೆಂಟ್ರಲ್‌ ವಿಸ್ತಾ ಮರುನಿರ್ಮಾಣ: ಶಿಲಾನ್ಯಾಸ ನಡೆಸಬಹುದು, ಸದ್ಯಕ್ಕೆ ನಿರ್ಮಾಣ, ನೆಲಸಮ ಮಾಡುವಂತಿಲ್ಲ ಎಂದ ಸುಪ್ರೀಂ

ದೆಹಲಿ ಸೆಂಟ್ರಲ್‌ ವಿಸ್ಟಾ ಪ್ರದೇಶದ ಮರು ಅಭಿವೃದ್ಧಿ ಮತ್ತು ನೂತನ ಸಂಸತ್‌ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಮಂತ್ರಿ ಹಾಗೂ ಉಪರಾಷ್ಟ್ರಪತಿ ಅವರ ನಿವಾಸ, ಹಲವಾರು ಕಚೇರಿ ಕಟ್ಟಡಗಳು ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳನ್ನು ಹೊಂದಿದ ಕೇಂದ್ರ ಸೆಕ್ರೇಟರಿಯೇಟ್‌ ಇಲ್ಲಿ ನೆಲೆಯೂರಲಿದೆ. ಭೂ ಬಳಕೆ ಮತ್ತು ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಕೆಲ ಅರ್ಜಿಗಳನ್ನು ತಿರಸ್ಕರಿಸಿ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಜನವರಿ 5 ರಂದು ಯೋಜನೆಗೆ ಹಸಿರು ನಿಶಾನೆ ತೋರಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಹೆಚ್ಚಳದಿಂದಾಗಿ ಸೆಂಟ್ರಲ್‌ ವಿಸ್ಟಾ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪುನರಭಿವೃದ್ಧಿಗೆ ತಡೆ ಕೋರಿ ಪ್ರಸ್ತುತ ಅರ್ಜಿ ಸಲ್ಲಿಕೆಯಾಗಿತ್ತು. ಸುಪ್ರೀಂಕೋರ್ಟ್‌ ಜನವರಿ 5 ರಂದು ನೀಡಿದ್ದ ಆದೇಶಕ್ಕೆ ಇದು ವಿರುದ್ಧವಾಗಿಲ್ಲ ಬದಲಿಗೆ ತಾತ್ಕಾಲಿಕ ತಡೆಯನ್ನಷ್ಟೇ ಕೋರಲಾಗುತ್ತಿದೆ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಗುತ್ತಿಗೆ ಗಡುವಿನೊಳಗೆ ಕಾಮಗಾರಿ ಪೂರೈಸಬೇಕು ಎಂದ ಮಾತ್ರಕ್ಕೆ ಸೆಂಟ್ರಲ್ ವಿಸ್ಟಾ ಯೋಜನೆಯನ್ನು "ಅಗತ್ಯ ಸೇವೆ" ಎಂದು ವರ್ಗೀಕರಿಸುವ ಯಾವುದೇ ತಾರ್ಕಿಕತೆ ಕಾಣುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರಿಗೆ ಅವಶ್ಯ ಅಥವಾ ಅಗತ್ಯ ಸೇವೆ ಎಂಬ ಯಾವುದೇ ವೈಶಿಷ್ಟ್ಯವನ್ನು ಯೋಜನೆ ಹೊಂದಿಲ್ಲ. ಸ್ಥಳದಲ್ಲಿಯೇ ಕಾರ್ಮಿಕರಿಗೆ ವಸತಿ ಕಲ್ಪಿಸಲು ಆಗದೇ ಇರುವುದರಿಂದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಹೊರಡಿಸಿದ ಆದೇಶಗಳನ್ನು ಯೋಜನೆ ಸಂಪೂರ್ಣ ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com