ಕೇಂದ್ರ ಸರ್ಕಾರವು ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾ ಮರುನಿರ್ಮಾಣ ಯೋಜನೆಯ ಶಿಲಾನ್ಯಾಸ ನಡೆಸಬಹುದು ಎಂದು ಸೋಮವಾರ ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುವವರೆಗೆ ಯೋಜನೆ ಕೈಗೊಂಡಿರುವ ಸ್ಥಳದಲ್ಲಿ ಯಾವುದೇ ತೆರನಾದ ನಿರ್ಮಾಣ ಅಥವಾ ನೆಲಸಮ ಕಾಮಗಾರಿ ನಡೆಸುವಂತಿಲ್ಲ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಯೋಜನಾ ಸ್ಥಳದಲ್ಲಿ ಯಾವುದೇ ತೆರನಾದ ನಿರ್ಮಾಣ ಅಥವಾ ನೆಲಸಮ ಕಾಮಗಾರಿ ನಡೆಸುವುದಿಲ್ಲ ಎಂಬ ವಾಗ್ದಾನವನ್ನು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮೂಲಕ ಪಡೆದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.
“ಪ್ರಶ್ನಾರ್ಹವಾದ ಸ್ಥಳದಲ್ಲಿ ಯಾವುದೇ ತೆರನಾದ ಬದಲಾವಣೆ ಮಾಡದೇ ಡಿಸೆಂಬರ್ 10 ರಂದು ಈಗಾಗಲೇ ನಿರ್ಧರಿತವಾಗಿರುವ ನಿಗದಿತ ಶಿಲಾನ್ಯಾಸ ಕಾರ್ಯಕ್ರಮ ಸೇರಿದಂತೆ ಔಪಚಾರಿಕ ಪ್ರಕ್ರಿಯೆಯನ್ನು ಸರ್ಕಾರ ನಡೆಸಬಹುದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಬಹುದು.
ನಿರ್ಮಾಣ ಕಾಮಗಾರಿ ಆರಂಭಿಸುವ ಸರ್ಕಾರದ ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಮೇಲಿನಂತೆ ಸ್ಪಷ್ಟನೆ ನೀಡಿದೆ.
“ಸಾರ್ವಜನಿಕ ವಲಯದಲ್ಲಿ ಕೆಲವು ಬೆಳವಣಿಗೆಗಳು ಘಟಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕಾಯಿತು. ಇಷ್ಟು ಪ್ರಮುಖವಾಗಿ ನೀವು ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತೀರಿ ಎಂದು ನಾವು ಅಂದುಕೊಂಡಿರಲಿಲ್ಲ. ತಡೆಯಾಜ್ಞೆ ನೀಡಿಲ್ಲ ಎಂದ ಮಾತ್ರ ನೀವು ನಿಮ್ಮಿಷ್ಟದಂತೆ ಮುಂದುವರಿಯಬಹುದು ಎಂದರ್ಥವಲ್ಲ” ಎಂದು ಮೆಹ್ತಾ ಅವರಿಗೆ ಪೀಠ ಹೇಳಿತು.
“ನೀವು ವಿವೇಕಯುತವಾಗಿ ನಡೆದುಕೊಳ್ಳುತ್ತೀರಿ ಎಂದು ನಾವು ನಿಮಗೆ ಮನ್ನಣೆ ನೀಡುತ್ತೇವೆ. ನೀವು ಅದೇ ಮಾನ್ಯತೆಯನ್ನು ನ್ಯಾಯಾಲಯಕ್ಕೆ ನೀಡಬೇಕು. ನೀವು ಕಾಗದಪತ್ರ ವ್ಯವಹಾರ ಮಾಡುತ್ತೀರೋ ಅಥವಾ ಶಿಲಾನ್ಯಾಸವನ್ನೇ ನಡೆಸುತ್ತೀರೋ ಎಂಬುದು ನಮಗೆ ಮುಖ್ಯವಲ್ಲ, ಆದರೆ ಯಾವುದೇ ತೆರನಾದ ನಿರ್ಮಾಣ ಚಟುವಟಿಕೆ ಕೈಗೊಳ್ಳುವಂತಿಲ್ಲ” ಎಂದು ಪೀಠ ಹೇಳಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆದು ನ್ಯಾಯಾಲಯಕ್ಕೆ ತಿಳಿಸಲು ದಿನದ ಕಾಲಾವಕಾಶ ನೀಡುವಂತೆ ಪೀಠಕ್ಕೆ ಮೆಹ್ತಾ ಮೊರೆ ಇಟ್ಟರು. ಆದರೆ, ಐದು ನಿಮಿಷಗಳಲ್ಲಿ ಪ್ರತಿಕ್ರಿಯಿಸುವಂತೆ ಪೀಠ ಸೂಚಿಸಿತು. ಬಳಿಕ, ಸರ್ಕಾವು ಯಾವುದೇ ತೆರನಾದ ನಿರ್ಮಾಣ, ನೆಲಸಮ ಅಥವಾ ಮರಗಳ ಸ್ಥಳಾಂತರ ಚಟುವಟಿಕೆ ನಡೆಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಪೀಠಕ್ಕೆ ವಿವರಿಸಿದರು.
ಲಾಟ್ಯೆನ್ಸ್ ಡೆಲ್ಲಿ ಪ್ರದೇಶದ ಸಂಸತ್ ಭವನ, ರಾಷ್ಟ್ರಪತಿ ಭವನ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಬಿಲ್ಡಿಂಗ್‌ಗಳು ಮತ್ತು ಇಂಡಿಯಾ ಗೇಟ್ ಮುಂತಾದ ಮಹತ್ವದ ಕಟ್ಟಡಗಳನ್ನು ಸೆಂಟ್ರಲ್ ವಿಸ್ತಾ ಪ್ರದೇಶವು ಒಳಗೊಳ್ಳುತ್ತದೆ. 2019ರ ಡಿಸೆಂಬರ್ 21ರಂದು ಸೆಂಟ್ರಲ್ ವಿಸ್ತಾ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಬಳಕೆಯ ನಿಯಮಾವಳಿಗಳನ್ನು ಬದಲಾಯಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಅಧಿಸೂಚನೆಯನ್ನು ಪ್ರಶ್ನಿಸಿ ಮನವಿಗಳನ್ನು ಸಲ್ಲಿಸಲಾಗಿದೆ.