[ಸೆಂಟ್ರಲ್ ವಿಸ್ಟಾ] ಶೌಚಾಲಯ, ಪಾರ್ಕಿಂಗ್‌ ಕಾಮಗಾರಿ ನಡೆಯುತ್ತಿದೆ, ಸಂಸತ್ತಿನದಲ್ಲ: ಹೈಕೋರ್ಟ್‌ಗೆ ಕೇಂದ್ರದ ಅಫಿಡವಿಟ್

ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ದೆಹಲಿ ಮೆಟ್ರೋ ಕಾರ್ಪೊರೇಷನ್ ಮುಂತಾದ ಸಂಸ್ಥೆಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ನಮ್ಮನ್ನೇ ಗುರಿಮಾಡಿದ ಅರ್ಜಿದಾರರ ಉದ್ದೇಶವೇನು ಎಂದು ಅಫಿಡವಿಟ್‌ನಲ್ಲಿ ಕೇಂದ್ರವು ಪ್ರಶ್ನಿಸಿದೆ.
[ಸೆಂಟ್ರಲ್ ವಿಸ್ಟಾ] ಶೌಚಾಲಯ, ಪಾರ್ಕಿಂಗ್‌ ಕಾಮಗಾರಿ ನಡೆಯುತ್ತಿದೆ, ಸಂಸತ್ತಿನದಲ್ಲ: ಹೈಕೋರ್ಟ್‌ಗೆ ಕೇಂದ್ರದ ಅಫಿಡವಿಟ್

ಸೆಂಟ್ರಲ್‌ ವಿಸ್ಟಾ ಪುನರಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲು ಕೋರಿ ದೆಹಲಿ ಹೈಕೋರ್ಟ್‌ ಮುಂದೆ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿದೆ. ಸೆಂಟ್ರಲ್‌ ವಿಸ್ಟಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೀವ್ ಶರ್ಮಾ ಮೂಲಕ ಕೇಂದ್ರವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಪ್ರಸ್ತುತ ರಾಜ್‌ಪಥ್‌ ಮತ್ತು ಇಂಡಿಯಾ ಗೇಟ್‌ ಸುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ನೂತನ ಸಂಸತ್ತು ಅಥವಾ ಕೇಂದ್ರ ಸರ್ಕಾರದ ನೂತನ ಕಚೇರಿಗಳಿಗೆ ಸಂಬಂಧಪಟ್ಟದ್ದಲ್ಲ ಎಂದು ತಿಳಿಸಿದೆ.

ಬದಲಿಗೆ, ಪ್ರಸಕ್ತ ನಿರ್ಮಾಣವು ಪ್ರವಾಸಿಗರು ಭೇಟಿ ನೀಡುವ ರಾಜ್‌ಪಥ್ ‌ಬಳಿಯ ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿಸಿದ್ದಾಗಿದ್ದು, ಸಾರ್ವಜನಿಕ ಬಳಕೆಗೆ ಅಗತ್ಯವಾದ ಶೌಚಾಲಯಗಳು, ವಾಹನ ನಿಲ್ದಾಣಗಳು, ಸಿ-ಹೆಕ್ಸಾಗನ್‌ ಪ್ರದೇಶದ ಕೆಳಗೆ ಪಾದಚಾರಿಗಳು ಸಾಗಲು ಕೈಗೆತ್ತಿಕೊಂಡಿರುವ ಸುರಂಗಮಾರ್ಗಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.

Also Read
2:1 ಬಹುಮತದ ತೀರ್ಪಿನ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ಇದೇ ವೇಳೆ, ಪ್ರಸಕ್ತ ನಡೆದಿರುವ ಕೆಲಸವು ಸಾಮಾನ್ಯವಾಗಿ ಸಾರ್ವಜನಿಕರು ಕರೆಯುವಂತೆ ʼಸೆಂಟ್ರಲ್‌ ವಿಸ್ಟಾ ಯೋಜನೆʼಗೆ ಸಂಬಂಧಿಸಿದ್ದಲ್ಲ (ಸಂಸತ್ತು, ನಾರ್ತ್‌ ಮತ್ತು ಸೌತ್‌ ಬ್ಲಾಕ್‌, ನೂತನ ಸಚಿವಾಲಯದ ಕಚೇರಿಗಳು, ಕೇಂದ್ರ ಸಮ್ಮೇಳನ ಸಭಾಂಗಣಗಳು ಮುಂತಾದವು); ಬದಲಿಗೆ ‘ಸೆಂಟ್ರಲ್‌ ವಿಸ್ಟಾ ಅವೆನ್ಯೂ’ಗೆ ಮಾತ್ರವೇ ಸೀಮಿತವಾಗಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆ ಇದಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಿದೆ.

ಪ್ರಸ್ತುತ ನಿರ್ಮಾಣ ಚಟುವಟಿಕೆಗಳು ಸಾರ್ವಜನಿಕ ಸೌಲಭ್ಯಗಳಾದ ಶೌಚಾಲಯ, ಕಾಲುದಾರಿ ನಿರ್ಮಾಣ; ಜನ್‌ಪಥ್‌ ಹಾಗೂ ಸಿ-ಹೆಕ್ಸಾಗನ್‌ ಪ್ರದೇಶದ ಬಳಿ ಪಾದಚಾರಿಗಳ ಸುರಂಗ ನಿರ್ಮಾಣ; ಕಾಲುವೆ, ಸೇತುವೆ, ಲಾನ್‌ ಮತ್ತು ದೀಪದ ಕಂಬಗಳ ನಿರ್ಮಾಣಕ್ಕೆ ಮಿತಿಗೊಂಡಿದೆ ಎಂದು ವಿವರವಾಗಿ ಹೇಳಲಾಗಿದೆ.

ಮುಂದುವರೆದು, ಅರ್ಜಿದಾರರಿಗೆ ಇದೆಲ್ಲದರ ಅರಿವಿದ್ದೂ ಸಹ ಕುಚೇಷ್ಟೆಯಿಂದ ತಮ್ಮ ಅರ್ಜಿಯಲ್ಲಿ ಇದನ್ನು ಮರೆಮಾಚಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಆಕ್ಷೇಪಿಸಲಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ದೆಹಲಿ ಮೆಟ್ರೋ ಕಾರ್ಪೊರೇಷನ್‌ ಮುಂತಾದ ಸಂಸ್ಥೆಗಳು ತಮ್ಮ ಯೋಜನೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ನಮ್ಮನ್ನೇ ಗುರಿಮಾಡಿದ ಅರ್ಜಿದಾರರ ಉದ್ದೇಶವೇನು ಎಂದು ಅಫಿಡವಿಟ್‌ನಲ್ಲಿ ಪ್ರಶ್ನಿಸಲಾಗಿದೆ. ಬೇರೆಲ್ಲಾ ನಿರ್ಮಾಣ ಕಾರ್ಯಗಳನ್ನು ಬಿಟ್ಟು ಇದೇ ಯೋಜನೆಯ ಬಗ್ಗೆ ಅರ್ಜಿದಾರರು ತೋರಿರುವ “ಸಾರ್ವಜನಿಕ ಹಿತಾಸಕ್ತಿಯ” ಸ್ಫೂರ್ತಿಯು ಅವರಿಗಿರುವ ಉದ್ದೇಶ, ಗುರಿಗಳ ಬಗ್ಗೆ ಸಾಕಷ್ಟು ಹೇಳುತ್ತದೆ ಎಂದು ಟೀಕಿಸಲಾಗಿದೆ. ಅರ್ಜಿದಾರರಿಗೆ ಯಾವುದೇ ಬಗೆಯ ನ್ಯಾಯಿಕ ಪರಿಹಾರ ಕಲ್ಪಿಸದಂತೆ ಅನರ್ಹಗೊಳಿಸಲು ಅವರು ಕೇವಲ ಇದೊಂದೇ ಯೋಜನೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿರುವ ನಡೆಯೊಂದೇ ಸಾಕು ಎಂದು ಹೇಳಲಾಗಿದೆ.

ಕೋವಿಡ್‌ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿಯೇ ಇದ್ದು ನಿರ್ಮಾಣ ಕಾರ್ಯದ ಕಾಮಗಾರಿ ಕೈಗೊಳ್ಳಲು 250 ಕೆಲಸಗಾರರು ಸಮ್ಮತಿಸಿದ್ದು, ಅವರಿಗೆ ಮಾರ್ಗಸೂಚಿಯ ಅನ್ವಯ ಸೌಲಭ್ಯ ಕಲ್ಪಿಸಲಾಗಿದೆ. ಸ್ಯಾನಿಟೈಸೇಷನ್‌, ಥರ್ಮಲ್‌ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಪಾಡುವಿಕೆಯಂತಹ ಕೋವಿಡ್‌ ಅನುಸರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಸೋಮವಾರ ಪ್ರಕರಣದ ವಿಚಾರಣೆ ಬಂದಾಗ ಅದನ್ನು ದೆಹಲಿ ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿತು. ಕೇಂದ್ರ ಸರ್ಕಾರದ ಪ್ರತಿಕ್ರಿಯೆಯು ಅಧಿಕೃತವಾಗಿ ಸಲ್ಲಿಕೆಯಾಗದ ಕಾರಣಕ್ಕೆ ವಿಚಾರಣೆ ಮುಂದೂಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com