2:1 ಬಹುಮತದ ತೀರ್ಪಿನ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ತೀರ್ಪಿನ ವೇಳೆ ನ್ಯಾ. ಸಂಜೀವ್ ಖನ್ನಾ ಅವರು ಯೋಜನೆಗೆ ಸಂಬಂಧಿಸಿದ ಭೂ ಬಳಕೆಯ ಮಾರ್ಪಾಟಿನ ಕುರಿತಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.
2:1 ಬಹುಮತದ ತೀರ್ಪಿನ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್
Central Vista

ನವದೆಹಲಿಯ ಸೆಂಟ್ರಲ್‌ ವಿಸ್ತಾ ಪ್ರದೇಶದ ಮರು ಅಭಿವೃದ್ಧಿಗೆ ಸುಪ್ರೀಂಕೋರ್ಟ್‌ ಮಂಗಳವಾರ ಹಸಿರು ನಿಶಾನೆ ತೋರಿದೆ. 2021ನೇ ಸಾಲಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಮೊದಲ ಮಹತ್ವದ ತೀರ್ಪು ಇದಾಗಿದ್ದು ಭೂ ಬಳಕೆ ಮತ್ತು ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದಡಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತ್ರಿಸದಸ್ಯ ಪೀಠ ಇದೇ ವೇಳೆ ತಿರಸ್ಕರಿಸಿದೆ.

"ದೆಹಲಿ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯಡಿ ಅಧಿಕಾರ ಚಲಾಯಿಸಿರುವುದು ನ್ಯಾಯಸಮ್ಮತ ಮತ್ತು ಸಮಂಜಸವಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಪರಿಸರ ಅನುಮತಿ ನೀಡಿರುವುದು ಕೂಡ ನ್ಯಾಯಸಮ್ಮತ ಮತ್ತು ಸೂಕ್ತವಾಗಿದೆ" ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ 2: 1ರಷ್ಟು ಬಹುಮತದ ತೀರ್ಪು ನೀಡಿತು.

Justices Dinesh Maheshwari, AM khanwilkar and Sanjiv Khanna
Justices Dinesh Maheshwari, AM khanwilkar and Sanjiv Khanna

ನ್ಯಾ ಸಂಜೀವ್‌ ಖನ್ನಾ ಅವರು ಯೋಜನೆಯ ಭೂ ಬಳಕೆಯ ಬದಲಾವಣೆ ಬಗ್ಗೆ ಮುಖ್ಯವಾಗಿ ಭಿನ್ನಮತದ ತೀರ್ಪು ನೀಡಿದರು. ಯೋಜನೆಯ ತೀರ್ಮಾನದಲ್ಲಿ ಲೋಪವಿಲ್ಲವಾದರೂ ಭೂ ಬಳಕೆಯ ಬದಲಾವಣೆ ವಿಷಯ ಬಂದಾಗ ಪಾರಂಪರಿಕ ಸಮಿತಿಯಿಂದ ಮೊದಲೇ ಅನುಮೋದನೆ ಪಡೆಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿತು.

"ಭೂ ಬಳಕೆಯ ಬದಲಾವಣೆಗೆ ಸಮ್ಮತಿ ಸೂಚಿಸಿದುದರ ಸಂಬಂಧ ನಾನು ಭಿನ್ನ ಅಭಿಪ್ರಾಯ ಹೊಂದಿದ್ದೇನೆ. ಪಾರಂಪರಿಕ ತಾಣಗಳ ರಕ್ಷಣಾ ಸಮಿತಿಯಿಂದ ಯಾವುದೇ ಪೂರ್ವ ಅನುಮೋದನೆ ಪಡೆಯಲಾಗಿಲ್ಲ. ಇದು ಸೂಕ್ತ ಕಾನೂನಿನ ಪಾಲನೆಯಲ್ಲ. ಆದ್ದರಿಂದ ಪ್ರಕರಣವನ್ನು ಸಾರ್ವಜನಿಕ ವಿಚಾರಣೆಗೆ ಮರಳಿಸಬೇಕು. ಪರಿಸರ ಸಂಬಂಧಿ ಒಪ್ಪಿಗೆ ವಿಚಾರದಲ್ಲಿ ಇದು ವಿವರಣಾರಹಿತ (ನಾನ್ ಸ್ಪೀಕಿಂಗ್) ಆದೇಶವಾಗಿದೆ " ಎಂದು ನ್ಯಾ. ಖನ್ನಾ ಹೇಳಿದ್ದಾರೆ.

Central Vista
ಸೆಂಟ್ರಲ್‌ ವಿಸ್ತಾ ಮರುನಿರ್ಮಾಣ: ಶಿಲಾನ್ಯಾಸ ನಡೆಸಬಹುದು, ಸದ್ಯಕ್ಕೆ ನಿರ್ಮಾಣ, ನೆಲಸಮ ಮಾಡುವಂತಿಲ್ಲ ಎಂದ ಸುಪ್ರೀಂ

ಹೊಸ ಸಂಸತ್‌ ಕಟ್ಟಡ, ಪ್ರಧಾನ ಮಂತ್ರಿ ಮತ್ತು ಉಪರಾಷ್ಟ್ರಪತಿಗಳ ವಸತಿಗೆ ಅವಕಾಶ ಕಲ್ಪಿಸುವ ಸಂಕೀರ್ಣ ಹಾಗೂ ಅನೇಕ ಹೊಸ ಕಚೇರಿ ಕಟ್ಟಡ ಮತ್ತು ಸಚಿವಾಲಯದ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಕೇಂದ್ರ ಸೆಕ್ರೆಟೇರಿಯಟ್‌ ನಿರ್ಮಿಸುವ ಮೂಲಕ ಸೆಂಟ್ರಲ್‌ ವಿಸ್ತಾ ಪ್ರದೇಶವನ್ನು ಮರು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸೆಂಟ್ರಲ್‌ ವಿಸ್ತಾ ಪ್ರದೇಶದ ಮರು ಅಭಿವೃದ್ಧಿಗಾಗಿ ಭೂ ಬಳಕೆಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) 2019ರ ಡಿಸೆಂಬರ್ 21ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿದಾರರಲ್ಲಿ ಒಬ್ಬರಾದ ರಾಜೀವ್ ಸೂರಿ ಅವರು ಭೂ ಬಳಕೆ ಮತ್ತು ಜನಸಂಖ್ಯಾ ಸಾಂದ್ರತೆಯ ಮಾನದಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಅಂತಹ ಬದಲಾವಣೆ ತರಲು ಡಿಡಿಎ ಅಗತ್ಯ ಅಧಿಕಾರ ಹೊಂದಿಲ್ಲ ಎಂದು ವಾದ ಮಂಡಿಸಿದ್ದರು. ಹೀಗೆ ಬದಲಾವಣೆ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ತಿಳಿಸಿದ್ದರು.

ಮತ್ತೊಬ್ಬ ಅರ್ಜಿದಾರ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅನುಜ್ ಶ್ರೀವಾಸ್ತವ ಅವರು ಯೋಜನೆಯು ಯಾವುದೇ ಅರ್ಥಪೂರ್ಣ ಪರಿಣಾಮ ಇಲ್ಲದ ಔಪಚಾರಿಕ ಕಸರತ್ತಾಗಿದೆ ಎಂದು ವಾದ ಮಂಡಿಸಿದ್ದರು. ಇನ್ನೊಂದೆಡೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಮೀನಾ ಗುಪ್ತ ಅವರು ಮರು ಅಭಿವೃದ್ಧಿಯಿಂದಾಗಿ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಹಸ್ತಕ್ಷೇಪ ಅರ್ಜಿ ಸಲ್ಲಿಸಿದ್ದರು.

Central Vista
ಸೆಂಟ್ರಲ್ ವಿಸ್ತಾ ಯೋಜನೆ: ಸಾರ್ವಜನಿಕ ಸಹಭಾಗಿತ್ವ ಏಕಿರಬೇಕು ಎಂದು ವಿವರಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್

ಅವಶ್ಯಕತೆಯ ಒತ್ತಡಕ್ಕೆ ಅನುಗುಣವಾಗಿ ಪ್ರಸ್ತುತ ಹೊಸ ಸಂಸತ್‌ ಕಟ್ಟಡ ಮತ್ತು ಕೇಂದ್ರ ಸಚಿವಾಲಯ ನಿರ್ಮಿಸುವುದು ಅತ್ಯಗತ್ಯವಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸಮರ್ಥಿಸಿತು.

ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು 1927ರಲ್ಲಿ ನಿರ್ಮಾಣವಾದ ಈಗಿನ ಸಂಸತ್‌ ಕಟ್ಟಡ ಅಗ್ನಿ ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ಇಲ್ಲ. ವಾಯುದಾಳಿಯ ಗಂಭೀರ ಬಿಕ್ಕಟ್ಟನ್ನು ಇದು ಎದುರಿಸುತ್ತಿದೆ ಮತ್ತು ಭೂಕಂಪ- ನಿರೋಧಕಗಳು ಕಟ್ಟಡಕ್ಕಿಲ್ಲ ಎಂದು ತಿಳಿಸಿದರು. ಅಲ್ಲದೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕೂಡ ಕಟ್ಟಡದ ಪಾರಂಪರಿಕ ಸ್ವರೂಪಕ್ಕೆ ಧಕ್ಕೆ ತರುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ತುಂಬಿ ತುಳುಕುತ್ತವೆ. ಜಂಟಿ ಅಧಿವೇಶನಗಳು ನಡೆಯುವಾಗ ಸದಸ್ಯರು ಪ್ಲಾಸ್ಟಿಕ್‌ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದರಿಂದ ಸದನದ ಘನತೆ ಕುಂದುತ್ತದೆ” ಎಂದರು. ಮುಂದಿನ ವರ್ಷದ ಹೊಸ ಜನಗಣತಿಯ ನಂತರ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಳವಾದರೆ, ಕಟ್ಟಡ ಒತ್ತಡಕ್ಕೆ ಸಿಲುಕುತ್ತದೆ ಎಂದು ಹೇಳಿದ ಅವರು 2001ರ ಸಂಸತ್ತಿನ ದಾಳಿಯನ್ನು ನೆನಪಿಸಿದರು. ಹೊಸ ಕೇಂದ್ರ ಸೆಕ್ರೇಟರಿಯೇಟ್‌ಗೆ ಸಂಬಂಧಿಸಿದಂತೆ ಎಲ್ಲಾ ಕಚೇರಿಗಳನ್ನು ಒಂದೇ ಕಟ್ಟಡದಡಿ ತರಬೇಕಾದ ಅಗತ್ಯವನ್ನು ತಿಳಿಸಿದರು.

Current Parliament building
Current Parliament building

“ವಿವಿಧ ಸಚಿವಾಲಯಗಳನ್ನು ಎಡತಾಕಲು ನಗರದ ಎಲ್ಲೆಡೆ ಸಂಚರಿಸಬೇಕಾಗುತ್ತದೆ. ಇದರಿಂದ ಜನದಟ್ಟಣೆ ಮತ್ತು ಮಾಲಿನ್ಯ ಹೆಚ್ಚುತ್ತದೆ. ಒಂದೇ ಸ್ಥಳದಲ್ಲಿ ಕೇಂದ್ರ ಸಚಿವಾಲಯಗಳು ಇರಬೇಕು ಮತ್ತು ಆ ಸ್ಥಳ ಐತಿಹಾಸಿಕ ಮಹತ್ವದ್ದಾಗಿರಬೇಕು” ಎಂದು ಮೆಹ್ತಾ ವಾದಿಸಿದರು. ಉತ್ತಮ ಪ್ರಕ್ರಿಯೆ ಮತ್ತು ವಿಧಾನ ಅಳವಡಿಸಿಕೊಳ್ಳಬಹುದು ಎಂದು ಅರ್ಜಿದಾರರು ಭಾವಿಸಿದ ಮಾತ್ರಕ್ಕೆ ಯೋಜನೆಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಕೂಡ ಸರ್ಕಾರ ಮನವರಿಕೆ ಮಾಡಿಕೊಟ್ಟಿತು. ಸಾಂವಿಧಾನಿಕ ಅಥವಾ ಕಾನೂನು ನಿಬಂಧನೆಗಳ ಯಾವುದೇ ಉಲ್ಲಂಘನೆ ಇಲ್ಲದಿದ್ದಾಗ, ನ್ಯಾಯಾಲಯ ಯೋಜನೆ ರದ್ದುಗೊಳಿಸುವುದನ್ನು ತಡೆಯಬೇಕಿದ್ದು ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವಂತಹ ಯಾವುದೇ ಪ್ರಮೇಯ ಇಲ್ಲ ಎಂದು ಮೆಹ್ತಾ ತಿಳಿಸಿದರು.

2020 ರ ನವೆಂಬರ್ 5 ರಂದು ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿತ್ತು. ಅದಕ್ಕೂ ಮೊದಲು ಅಕ್ಟೋಬರ್‌ ಕೊನೆಯ ವಾರ ಮತ್ತು ನವೆಂಬರ್‌ ಮೊದಲ ವಾರದಲ್ಲಿ ವಾದ ಆಲಿಸಲಾಗಿತ್ತು.

No stories found.
Kannada Bar & Bench
kannada.barandbench.com