ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಮತ್ತು ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್ ಮಹದೇವನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 11ರಂದು ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು.
ಈ ಇಬ್ಬರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್ 34 ನ್ಯಾಯಮೂರ್ತಿಗಳ ಪೂರ್ಣ ಪ್ರಮಾಣದ ಸಂಖ್ಯಾಬಲದಲ್ಲಿ ಕಾರ್ಯನಿರ್ವಹಿಸಲಿದೆ.
ನ್ಯಾ. ಕೋಟೀಶ್ವರ್ ಸಿಂಗ್ ಅವರು ಫೆಬ್ರವರಿ 2023ರಿಂದ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ .
ಅವರು ಮೂಲತಃ ಮಣಿಪುರದವರು. ಈ ನೇಮಕಾತಿ ಮೂಲಕ ಅವರು ರಾಜ್ಯದ ಮೊದಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
ನ್ಯಾ. ಸಿಂಗ್ ಅವರ ತಂದೆ ಎನ್ ಇಬೊಟೊಂಬಿ ಸಿಂಗ್ ಕೂಡ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಮಣಿಪುರದ ಮೊದಲ ಅಡ್ವೊಕೇಟ್ ಜನರಲ್ ಸಹ ಆಗಿದ್ದರು.
ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಮುನ್ನ ನ್ಯಾ. ಕೋಟೀಶ್ವರ್ ಸಿಂಗ್ ಕೆಲ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದರು. 2012ರಲ್ಲಿ ಅವರನ್ನು ಗುವಾಹಟಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಗಳನ್ನಾಗಿ ಮಾಡಲಾಯಿತು. ಬಳಿಕ ಮಣಿಪುರ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಗುವಾಹಟಿ ಹೈಕೋರ್ಟ್‌ಗೆ ಮರಳಿದರು.
ನ್ಯಾ. ಮಹದೇವನ್ ಅವರು ಮೇ 2024ರಿಂದ ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿ 1989ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು.
ತಮಿಳುನಾಡು ಸರ್ಕಾರದ ಹೆಚ್ಚುವರಿ ಸರ್ಕಾರಿ ವಕೀಲ, ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲ ಮತ್ತು ಹಿರಿಯ ಪ್ಯಾನಲ್ ವಕೀಲರಾಗಿ ಅವರು 9,000 ಕ್ಕೂ ಹೆಚ್ಚು ಪ್ರಕರಣಗಳ ವೃತ್ತಿ ಅನುಭವ ಹೊಂದಿದ್ದಾರೆ. 2013ರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅವರು ನಿಯುಕ್ತರಾದರು.