ಹೆಚ್ಚು ಮಹಿಳಾ ನ್ಯಾಯಾಧೀಶರ ಅಗತ್ಯತೆಯ ಬಗ್ಗೆ ವಿವರಿಸಿದ ಸಿಜೆಐ ಚಂದ್ರಚೂಡ್‌; ನ್ಯಾ. ಬೇಲಾ ಕಾರ್ಯವೈಖರಿ ಶ್ಲಾಘನೆ

ಎಲ್‌ಜಿಬಿಟಿಕ್ಯೂ ವಿಚಾರಗಳಲ್ಲಿ ನ್ಯಾಯಾಲಯದ ವಿಚಾರಣೆಯ ಪರಿಣಾಮ, ಮೀಸಲಾತಿ ಮತ್ತು ಅರ್ಹತೆಯ ನಡುವಿನ ಚರ್ಚೆ, ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ "ಪಾಪಿಗಳಿಗೆ ಭವಿಷ್ಯವಿದೆ" ಹೇಳಿಕೆ ಕುರಿತು ಸಿಜೆಐ ಮಾತನಾಡಿದರು.
CJI DY Chandrachud
CJI DY Chandrachud
Published on

ಮಹಿಳಾ ನ್ಯಾಯಾಧೀಶರು "ಉದಾರ" ತೀರ್ಪು ನೀಡಬಹುದು ಎಂಬ (ವಾಸ್ತವವಲ್ಲದ) ಜನಜನಿತ ಗ್ರಹಿಕೆಗಳ ಆಚೆಗೆ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿರಬೇಕಾದ ಅವಶ್ಯಕತೆಯ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಇತ್ತೀಚೆಗೆ ವಿವರಿಸಿದ್ದಾರೆ. 

ಬ್ರಿಟನ್‌ನ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಜೂನ್ 6ರಂದು ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು “ಪುರುಷರು ಪ್ರಕರಣದಲ್ಲಿ ತೀರ್ಪು ನೀಡುವುದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರು ಉದಾರ ತೀರ್ಪು ನೀಡುತ್ತಾರೆ ಎಂದು ಪ್ರತಿಪಾದಿಸುವುದು ತಪ್ಪು ಗ್ರಹಿಕೆಯಾಗುತ್ತದೆ. ನ್ಯಾಯಾಂಗ ಹೆಚ್ಚು ಉದಾರವಾಗಿರಬೇಕು ಎಂಬ ಕಾರಣಕ್ಕೆ ಮಹಿಳಾ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿರಬೇಕಿಲ್ಲ. ಇದರ ಬಗ್ಗೆ ಹೆಚ್ಚು ಸ್ಪಷ್ಟವಾಗಿರೋಣ” ಎಂದು ಅವರು ಎಚ್ಚರಿಕೆ ನೀಡಿದರು.

ಶಬರಿಮಲೆ ಪ್ರಕರಣದಲ್ಲಿ ಉಳಿದ ನ್ಯಾಯಮೂರ್ತಿಗಳಿಗಿಂತಲೂ ಭಿನ್ನ ತೀರ್ಪು ನೀಡಿದ ನ್ಯಾ. ಇಂದು ಮಲ್ಹೋತ್ರಾ (ಈಗ ನಿವೃತ್ತರು) ಅವರ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು “ಶಬರಿಮಲೆ ಪ್ರಕರಣದಲ್ಲಿ ಋತುಚಕ್ರದ ವಯೋಮಾನದಲ್ಲಿರುವ ಮಹಿಳೆಯರಿಗೆ ಪ್ರವೇಶ ನೀಡುವುದಿಲ್ಲವೇ ಎಂಬ ಪ್ರಶ್ನೆ ಇತ್ತು. ಸಂಪ್ರದಾಯದ ಪ್ರಕಾರ ದೇವತೆ ಬ್ರಹ್ಮಚಾರಿಯಾಗಿದ್ದರೂ ಕೂಡ ಋತುಚಕ್ರದ ವಯೋಮಾನದ ಮಹಿಳೆಯರನ್ನು ಅವರ ಪ್ರಾರ್ಥನೆ ಮಾಡುವ ಹಕ್ಕಿನಿಂದ ವಂಚಿತರನ್ನಾಗಿ ಮಾಡುವಂತಿಲ್ಲ ಎಂದು ನೀಡಲಾದ ಬಹುಮತದ ತೀರ್ಪಿನ ಭಾಗವಾಗಿ ನಾನಿದ್ದೆ. ಸಂಪ್ರದಾಯವನ್ನು ನಾನು ಗೌರವಿಸಿದರೂ ಸಾಂವಿಧಾನಿಕ ದೃಷ್ಟಿಕೋನದಂತೆ ತೀರ್ಪು ನೀಡಿದ್ದೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಏಕೈಕ ತೀರ್ಪು ಹೊರಬಿದ್ದದ್ದು ಮಹಿಳಾ ನ್ಯಾಯಮೂರ್ತಿಯಿಂದ. ತೀರ್ಪು ನೀಡಿ ಸಂಜೆ ನಾನು ಮರಳಿದಾಗ ನನ್ನ ಕಾನೂನು ಗುಮಾಸ್ತರು ʼನಿಮ್ಮ ಸಹೋದ್ಯೋಗಿ ಈ ರೀತಿಯ ಭಿನ್ನ ತೀರ್ಪು ನೀಡಬಹುದೇ?ʼ ಎಂದು ಪ್ರಶ್ನಿಸಿದರು. ಆಗ ನಾನು ʼಈ ನಿರ್ದಿಷ್ಟ ಅವಲೋಕನದಲ್ಲಿ ನೀವು ಎಡವಿದ್ದೀರಿʼ ಎಂದೆ. ʼಪೀಠದಲ್ಲಿ ಮಹಿಳಾ ನ್ಯಾಯಮೂರ್ತಿ ಇದ್ದ ಮಾತ್ರಕ್ಕೆ ಅವರು ಹೆಚ್ಚು ಪ್ರಗತಿಪರ ತೀರ್ಪು ನೀಡುತ್ತಾರೆ ಎಂಬುದು ನಿಮ್ಮ ನಿರೀಕ್ಷೆ. ಆದರೆ ಅದು ಹಾಗೆ ಕೆಲಸ ಮಾಡದು. ಆಕೆಯ ತೀರ್ಪನ್ನು ಶ್ಲಾಘಿಸಿದ ವಿದ್ವತ್‌ ವಲಯ ಬಹುದೊಡ್ಡದಿದೆ” ಎಂದರು. 

ಪುರುಷ ನ್ಯಾಯಾಧೀಶರ ಅರಿವಿಗೆ ಬಾರದ ವಿಶಿಷ್ಟ ಜೀವನ ಅನುಭವಗಳು ಮತ್ತು ಗ್ರಹಿಕೆಗಳ ಕಾರಣಕ್ಕೆ ಹೆಚ್ಚಿನ ಮಹಿಳೆಯರು ನ್ಯಾಯಾಧೀಶರಾಗಬೇಕಿದೆ ಎಂದು ಅವರು ಹೇಳಿದರು. 

ಈ ನಿಟ್ಟಿನಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಅಥವಾ ಲಿಂಗ ಆಧಾರಿತ ಹಿಂಸಾಚಾರದಲ್ಲಿನ ಹೋಲಿಕೆಗಳು ಮತ್ತು ಮಾದರಿಗಳನ್ನು ಬಾಂಬೆ ಹೈಕೋರ್ಟ್‌ನ  ಮಹಿಳಾ ನ್ಯಾಯಮೂರ್ತಿಯೊಬ್ಬರು ಪ್ರಸ್ತಾಪಿಸಿರುವುದನ್ನು ಅವರು ನೆನೆದರು. 

ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ಪೀಠದೆದುರಿನ ಸಂಕೀರ್ಣ ಕ್ರಿಮಿನಲ್ ಪ್ರಕರಣದ ವಾಸ್ತವಾಂಶಗಳಿಗೆ ಹೇಗೆ ಜೀವ ತುಂಬಿದರು ಎಂಬುದನ್ನು ಪ್ರಸ್ತಾಪಿಸಿದ ಅವರು "ನಾನು ಮಹಿಳಾ ಸಹೋದ್ಯೋಗಿ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರೊಂದಿಗೆ ಪ್ರಕರಣ ಆಲಿಸುತ್ತಿದ್ದೆ. ಅಲ್ಲಿ, ವಿವಿದ ಸಾಕ್ಷಿ, ಸಾಕ್ಷ್ಯಗಳ ಸಂಕೀರ್ಣ ದಾಖಲೆಗಳಿದ್ದವು. ವಾದ ಮುಗಿದು ತೀರ್ಪು ನೀಡುವ ಮುನ್ನ ನಾನು ಅವರತ್ತ ತಿರುಗಿ 'ʼಈ ಪ್ರಕರಣದ ಬಗ್ಗೆ ನಿಮ್ಮ ಆಲೋಚನೆ ಏನು?' ಎಂದು ಕೇಳಿದೆ. ಅವರು ತಮ್ಮ ಟಿಪ್ಪಣಿ ನೀಡುತ್ತಾ ಸದ್ಯಕ್ಕೆ ನಮ್ಮ ಲೇಖನಿಯನ್ನು ಕೆಳಗಿರಿಸೋಣ ಎಂದರು. ಮುಂದಿನ ಹತ್ತು ನಿಮಿಷಗಳಲ್ಲಿ ಇಡೀ ಅಪರಾಧದ ದೃಶ್ಯವನ್ನು ಮರುಸೃಷ್ಟಿ ಮಾಡಿದರು. ದಾಖಲೆಗಳನ್ನಾಧರಿಸಿ ಅವರು ಘಟನಾವಳಿಗೆ ಜೀವ ತುಂಬಿದರು. ನ್ಯಾಯಾಲಯಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ನಮ್ಮ ಸಮುದಾಯದ ವೈವಿಧ್ಯಮಯ ಭಾಗಕ್ಕೆ ಕೊಡುಗೆ ನೀಡುತ್ತದೆ. ಕೇವಲ ಮಹಿಳೆಯ ವಿಚಾರದಲ್ಲಿ ಮಾತ್ರವಲ್ಲದೆ ಜಾತಿಯ ವಿಷಯದಲ್ಲಿ, ಸಾಮಾಜಿಕ ಗುಂಪುಗಳ ವಿಷಯದಲ್ಲಿಯೂ ವೈವಿಧ್ಯ ಇರಬೇಕು” ಎಂದರು.

ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸಂಬಂಧಿಸಿದ  ವಿಚಾರಗಳಲ್ಲಿ ನ್ಯಾಯಾಲಯದ ವಿಚಾರಣೆಯ ಪರಿಣಾಮ, ಮೀಸಲಾತಿ ಮತ್ತು ಅರ್ಹತೆಯ ನಡುವಿನ ಚರ್ಚೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ "ಪಾಪಿಗಳಿಗೆ ಭವಿಷ್ಯವಿದೆ" ಹೇಳಿಕೆ ಕುರಿತಂತೆಯೂ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡಿದರು. 

Kannada Bar & Bench
kannada.barandbench.com