ಕೇರಳ ಸಿಎಂ ಪುತ್ರಿಯ ಒಡೆತನದ ಸಂಸ್ಥೆ ವಿರುದ್ಧ ಕೇಂದ್ರ ಎಸ್‌ಎಫ್‌ಐಒ ತನಿಖೆ ನಡೆಸಲಾಗದು: ಅರವಿಂದ್‌ ದಾತಾರ್‌

ನ್ಯಾಯಾಲಯ ಆದೇಶ ಪ್ರಕಟಿಸುವವರೆಗೆ ಎಕ್ಸಾಲಾಜಿಕ್‌ ವಿರುದ್ಧ ಎಸ್‌ಎಫ್‌ಐಒ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂದು ನ್ಯಾ. ನಾಗಪ್ರಸನ್ನ ಮೌಖಿಕವಾಗಿ ಹೇಳಿದರು.
Veena Thaikkandiyil, Karnataka High Court
Veena Thaikkandiyil, Karnataka High Court Veena Thaikkandiyil image source: Linkedin
Published on

ಕೇಂದ್ರ ಸರ್ಕಾರವು ತನಗಿಷ್ಟ ಬಂದಂತೆ ಗಂಭೀರ ಅಪರಾಧ ತನಿಖಾ ಸಂಸ್ಥೆಯಿಂದ (ಎಸ್‌ಎಫ್‌ಐಒ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪುತ್ರಿ ವೀಣಾ ಟಿ ಮಾಲೀಕತ್ವದ ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ತನಿಖೆ ನಡೆಸಲಾಗದು ಎಂದು ಆಕೆಯ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಬಲವಾಗಿ ವಾದಿಸಿದರು.

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಎಕ್ಸಾಲಾಜಿಕ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್‌ ದಾತಾರ್‌ ಅವರು ಕಂಪೆನಿಗಳ ಕಾಯಿದೆ ಸೆಕ್ಷನ್‌ 210ರ ಅಡಿ ಕಂಪೆನಿಗಳ ರಿಜಿಸ್ಟ್ರಾರ್‌ ಈಗಾಗಲೇ ತನಿಖೆ ನಡೆಸುತ್ತಿದ್ದು, ಎಸ್‌ಎಫ್‌ಐಒ ಪರ್ಯಾಯವಾಗಿ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.

ಇದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು ಎಸ್‌ಎಫ್‌ಐಒ ತನಿಖೆ ಆರಂಭವಾಗಿರುವುದರಿಂದ ಪರ್ಯಾಯ ಪ್ರಕ್ರಿಯೆ ಪ್ರಶ್ನೆ ಉದ್ಭವಿಸುವುದಿಲ್ಲ. ಸೆಕ್ಷನ್‌ 210ರ ಅಡಿ ತನಿಖೆ ಸ್ಥಗಿತಗೊಳಿಸಲಾಗಿದ್ದು, ಎಕ್ಸಾಲಾಜಿಕ್‌ಗೆ ಸಂಬಂಧಿಸಿದ ಪ್ರಕರಣದ ಕಡತಗಳನ್ನು ಎಸ್‌ಎಫ್‌ಐಒಗೆ ವರ್ಗಾಯಿಸಲಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು‌ ಆದೇಶ ಪ್ರಕಟಿಸುವವರೆಗೆ ಎಕ್ಸಾಲಾಜಿಕ್ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಎಸ್‌ಎಫ್‌ಐಒಗೆ ಮೌಖಿಕವಾಗಿ ನಿರ್ದೇಶಿಸಿತು.

ಇದಕ್ಕೆ ಕಾಮತ್‌ ಅವರು ಪ್ರಕರಣವು ಪ್ರಾಥಮಿಕ ಹಂತದಲ್ಲಿದ್ದು, ಎಕ್ಸಾಲಾಜಿಕ್‌ ಕಡೆಯಿಂದ ಕೆಲವು ದಾಖಲೆಗಳನ್ನು ಕೇಳಲಾಗಿದೆ. ಆದರೆ, ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಬೇಡಿ ಎಂದು ಪೀಠಕ್ಕೆ ಮನವಿ ಮಾಡಿದರು.

ಎಸ್‌ಎಫ್‌ಐಒ ಕೇಳಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕಂಪೆನಿಯ ವಕೀಲರಿಗೆ ಪೀಠ ಸೂಚಿಸಿತು. ಫೆಬ್ರವರಿ 15ರ ಒಳಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅದರೊಳಗೆ ಎಸ್‌ಎಫ್‌ಐಒ ಕೇಳಿರುವ ದಾಖಲೆ ಸಲ್ಲಿಸಲಾಗುವುದು ಎಂದು ದಾತಾರ್‌ ಪೀಠಕ್ಕೆ ವಿವರಿಸಿದರು.

ವಿಚಾರಣೆಯ ಒಂದು ಹಂತದಲ್ಲಿ ದಾತಾರ್‌ ಅವರು ಕೇಂದ್ರ ಸರ್ಕಾರವು ಕಂಪೆನಿಗಳ ಕಾಯಿದೆ ಸೆಕ್ಷನ್‌ 212ರ ಅಡಿ ತನಗಿಷ್ಟಬಂದಂತೆ ಎಕ್ಸಾಲಾಜಿಕ್‌ ವಿರುದ್ಧ ಎಸ್‌ಎಫ್‌ಐಒ ತನಿಖೆಗೆ ಆದೇಶಿಸಬಹುದೇ ಎಂಬ ಪ್ರಮುಖ ಪ್ರಶ್ನೆಯನ್ನು ಪ್ರಕರಣ ಒಳಗೊಂಡಿದೆ ಎಂದರು.

ಮುಂದುವರಿದು, “ಕೊಚ್ಚಿನ್‌ ಮಿನರಲ್ಸ್‌ ಅಂಡ್‌ ರುಟೈಲ್‌ ಲಿಮಿಟೆಡ್‌ (ಸಿಎಂಆರ್‌ಎಲ್‌) ಜೊತೆಗೆ ₹1.76 ಕೋಟಿ ವರ್ಗಾವಣೆ ಮಾಡಿಕೊಂಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಎಸ್‌ಎಫ್‌ಐಒ ತನಿಖೆ ನಡೆಸುವ ವಂಚನೆಯಾಗಿಲ್ಲ. ಸತ್ಯಂ ಅಥವಾ ಸಹರಾ ಪ್ರಕರಣದಲ್ಲಿ ಆದಂತೆ ನೂರಾರು ಕೋಟಿ ವಂಚನೆ ಪ್ರಕರಣ ಇದಲ್ಲ. ಎಸ್‌ಎಫ್‌ಐಒ ತನಿಖೆಯು ಗಂಭೀರ ಪರಿಣಾಮ ಉಂಟು ಮಾಡಲಿದ್ದು, ಇದರಲ್ಲಿ ಆರೋಪಿಯನ್ನು ಬಂಧಿಸಬಹುದು. ಅವರ ಆಸ್ತಿ ವಶಕ್ಕೆ ಪಡೆಯಬಹುದಾಗಿದೆ. ಯುಎಪಿಎ ಪ್ರಕರಣದಲ್ಲಿ ಆದಂತೆ ಜಾಮೀನು ಸಿಗುವುದೇ ಅಸಾಧ್ಯವಾಗಲಿದೆ. ಈ ಪ್ರಕ್ರಿಯೆಗೆ ಹಿಂಚಾಲನೆ ನೀಡಲಾಗದು” ಎಂದರು.

ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ ತನಿಖೆ ನಡೆಸುತ್ತಿರುವಾಗ 2024ರ ಜನವರಿ 31ರಂದು ಎಸ್‌ಎಫ್‌ಐಒ ತನಿಖೆ ಆರಂಭಿಸುವ ಅಗತ್ಯವಿರಲಿಲ್ಲ ಎಂದರು.

ಇದಕ್ಕೆ ಎಎಸ್‌ಜಿ ಕಾಮತ್‌ ಅವರು ಎಕ್ಸಾಲಾಜಿಕ್‌ ಪ್ರಕರಣದಲ್ಲಿ ಗಂಭೀರ ಅಪರಾಧವಾಗಿದ್ದು, ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಇದಕ್ಕಾಗಿ ಬಹು ಆಯಾಮದ ತನಿಖಾ ಸಂಸ್ಥೆಯಾಗಿರುವ ಎಸ್‌ಎಫ್‌ಐಒ ತನಿಖೆಗೆ ಅನುಮತಿಸಲಾಗಿದೆ. ಎಸ್‌ಎಫ್‌ಐಒ ಅನಿಯಂತ್ರಿತವಾಗಿ ಹಲವು ಸಂಸ್ಥೆ ಮತ್ತು ಪ್ರಾಧಿಕಾರಗಳಿಂದ ಮಾಹಿತಿ ಪಡೆಯಬಹುದಾಗಿದೆ. ಸಿಎಂಆರ್‌ಎಲ್‌ ₹135 ಕೋಟಿಯನ್ನು ರಾಜಕೀಯ ಪದಾಧಿಕಾರಿಗಳಿಗೆ ಹಂಚಿಕೆ ಮಾಡಿದ್ದು, ಆನಂತರ ಅದು ಖರ್ಚು ಎಂದಿರುವುದು ಆದಾಯ ತೆರಿಗೆ ಇಲಾಖೆ ದಾಖಲೆಗಳಿಂದ ತಿಳಿದುಬಂದಿದೆ. ಈ ಪೈಕಿ ₹1.76 ಕೋಟಿಯನ್ನು ಎಕ್ಸಾಲಾಜಿಕ್‌ಗೆ ಪಾವತಿಸಲಾಗಿದ್ದು, ಇದಕ್ಕೆ ಯಾವುದೇ ಸಾಫ್ಟ್‌ವೇರ್‌ ಸೇವೆ ನೀಡಲಾಗಿಲ್ಲ ಎಂದರು.

Also Read
ಎಸ್‌ಐಎಫ್‌ಒ ತನಿಖೆ ತಡೆ ಕೋರಿ ಹೈಕೋರ್ಟ್‌ ಕದತಟ್ಟಿದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಪುತ್ರಿ ವೀಣಾ

ಸಿಎಂಆರ್‌ಎಲ್‌ನಲ್ಲಿ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಶೇ. 13.4ರಷ್ಟು ಷೇರು ಹೊಂದಿದೆ. ಸಿಎಂಆರ್‌ಎಲ್‌ನಿಂದ ಕೆಲವು ಅನುಮಾನಾಸ್ಪದ ಹಣ ವರ್ಗಾವಣೆಯಾಗಿದೆ. ಈ ನೆಲೆಯಲ್ಲಿ ಎಸ್‌ಎಫ್‌ಐಒ ತನಿಖೆ ಆರಂಭಿಸಲಾಗಿದೆ. ಎಸ್‌ಎಫ್‌ಐಒ ತನಿಖೆ ನಡೆಸಲು ಎಕ್ಸಾಲಾಜಿಕ್‌ ಅನುಮತಿ ಅಗತ್ಯವಿಲ್ಲ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ನ್ಯಾಯಾಲಯವು ಈ ಹಂತದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ವಾದಿಸಿದರು.

ಎಕ್ಸಾಲಾಜಿಕ್‌ ಪರವಾಗಿ ವಕೀಲ ಮನು ಕುಲಕರ್ಣಿ ವಕಾಲತ್ತು ದಾಖಲಿಸಿದ್ದಾರೆ.

Kannada Bar & Bench
kannada.barandbench.com