
ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ, 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿಕೊಳ್ಳುವಂತೆ ಕೋರಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಕಾಯಿದೆಯನ್ನು ಪ್ರಶ್ನಿಸಿ ಕರ್ನಾಟಕ ದೆಹಲಿ, ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಅರ್ಜಿಯನ್ನು ಮುಂದಿನ ಸೋಮವಾರ ವಿಚಾರಣೆ ನಡೆಸಲು ಸಮ್ಮತಿಸಿದರು.
ಸಾಂವಿಧಾನಿಕ ಹಾಗೂ ಸಾರ್ವಜನಿಕ ಮಹತ್ವದ ಪ್ರಶ್ನೆಗಳು ಇದರಲ್ಲಿರುವುದರಿಂದ ಸುಪ್ರೀಂ ಕೋರ್ಟ್ ಅಧಿಕೃತ ತೀರ್ಪು ನೀಡಬೇಕು. ಸಂವಿಧಾನದ 14, 19(1)(ಜಿ), ಹಾಗೂ 21ನೇ ವಿಧಿಗೆ ಸಂಬಂಧಿಸಿದಂತೆ ಆಲಿಸಬೇಕಿದೆ. ಅಲ್ಲದೆ ಒಂದೇ ಬಗೆಯ ಪ್ರಶ್ನೆಗಳನ್ನು ವಿವಿಧ ಹೈಕೋರ್ಟ್‌ಗಳಲ್ಲಿ ಎತ್ತಿರುವುದರಿಂದ ವ್ಯತಿರಿಕ್ತ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು ಇದನ್ನು ತಪ್ಪಿಸಬೇಕು. ಜೊತೆಗೆ ಬೇರೆ ಬೇರೆ ಪ್ರಕರಣಗಳನ್ನು ವಿವಿಧ ಹೈಕೋರ್ಟ್‌ಗಳಲ್ಲಿ ನಡೆಸುವುದರಿಂದ ವಿಳಂಬ ಉಂಟಾಗುತ್ತದೆ ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.
ಕೌಶಲ್ಯದ ಆಟವೇ ಇರಲಿ ಅಥವಾ ಅವಕಾಶದ ಆಟವೇ ಇರಲಿ ಇಲ್ಲವೇ ಎರಡರ ಮಿಶ್ರಣವಾಗಿದ್ದರೂ ಹಣಕಾಸು ವಹಿವಾಟು ನಡೆಯುತ್ತಿದ್ದರೆ ಆ ಎಲ್ಲ ವಿಧದ ಆಟಗಳನ್ನು ಆನ್‌ಲೈನ್ ಹಣದ ಆಟ ಎಂದು ವರ್ಗೀಕರಿಸಿ ನಿಷೇಧಿಸಲು ಕಾಯಿದೆ ಯತ್ನಿಸುತ್ತದೆ. ಇದೇ ಮೊದಲ ಬಾರಿಗೆ ಇಂತಹ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಸೆಪ್ಟೆಂಬರ್ 3 ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂತೆಯೇ ಹೆಡ್ ಡಿಜಿಟಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕಳೆದ ವಾರ ಕರ್ನಾಟಕ ಹೈಕೋರ್ಟ್ ಕೂಡ ಕೇಂದ್ರದ ಪ್ರತಿಕ್ರಿಯೆ ಕೇಳಿತ್ತು. ಮತ್ತೊಂದೆಡೆ ಆನ್‌ಲೈನ್ ಕ್ಯಾರಮ್ ಗೇಮ್ ಪ್ಲಾಟ್‌ಫಾರ್ಮ್ ಕಾಯಿದೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ವಿಧೇಯಕವನ್ನು ಆಗಸ್ಟ್ 20 ರಂದು ಲೋಕಸಭೆಯಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಎರಡು ದಿನಗಳ ನಂತರ ಎರಡೂ ಸದನಗಳಲ್ಲಿ ಧ್ವನಿಮತದ ಅಂಗೀಕಾರ ದೊರೆತಿತ್ತು. ಆಗಸ್ಟ್ 22 ರಂದು ರಾಷ್ಟ್ರಪತಿಯವರು ಮಸೂದೆಗೆ ಅಂಕಿತ ಹಾಕಿದ್ದರು.