ಸುಪ್ರೀಂ ನ್ಯಾಯಮೂರ್ತಿಗಳಾಗಿ ಸುಧಾಂಶು ಧುಲಿಯಾ, ಜೆ ಬಿ ಪರ್ದಿವಾಲಾ ಅವರ ನೇಮಕಾತಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಕಾನೂನು ಇಲಾಖೆಯ ವೆಬ್‌ಸೈಟ್‌ನಲ್ಲಿ ಮೇ 7ರಂದು ಪ್ರಕಟಿಸಲಾಗಿದೆ.
Chief Justice Sudhanshu Dhulia, Justice JB Pardiwala
Chief Justice Sudhanshu Dhulia, Justice JB Pardiwala
Published on

ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಕಾನೂನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಅಪ್‌ಲೋಡ್‌ ಮಾಡಲಾಗಿದೆ. ಮೇ 5ರಂದು ಈ ಇಬ್ಬರೂ ನ್ಯಾಯಮೂರ್ತಿಗಳ ಹೆಸರುಗಳನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ನ್ಯಾಯಮೂರ್ತಿ ಧುಲಿಯಾ ಅವರು 1960ರ ಆಗಸ್ಟ್‌ 10ರಂದು ಜನಿಸಿದ್ದು, 1986ರಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ ಸೇರ್ಪಡೆಗೊಂಡರು. 2000ರಲ್ಲಿ ಉತ್ತರಾಖಂಡ ರಚನೆಯಾದ ಬಳಿಕ ತವರು ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದರು. ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಥಮ ಮುಖ್ಯ ಸ್ಥಾಯಿ ವಕೀಲರಾಗಿದ್ದ ಅವರು ಬಳಿಕ ಉತ್ತರಾಖಂಡದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡರು. 2004ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದರು.

2008ರ ನವೆಂಬರ್‌ನಲ್ಲಿ ಉತ್ತರಾಖಂಡ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರನ್ನು 2021ರ ಜನವರಿ 10ರಂದು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು.

Also Read
ವೃಥಾ ಕೊಲೆ ಆರೋಪ, ಎಸ್‌ಟಿ ವೈದ್ಯಕೀಯ ವಿದ್ಯಾರ್ಥಿ ಭವಿಷ್ಯಕ್ಕೆ ಸಂಚಕಾರ: ₹ 42 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ

ನ್ಯಾಯಮೂರ್ತಿ ಪರ್ದಿವಾಲಾ ಅವರು 1965ರ ಆಗಸ್ಟ್‌ 12ರಂದು ಜನಿಸಿದರು. 1989ರಲ್ಲಿ ವಕೀಲಿಕೆ ಆರಂಭಿಸಿದರು. 2002ರಲ್ಲಿ ಗುಜರಾತ್‌ ಹೈಕೋರ್ಟ್‌ ಮತ್ತು ಅದರ ಅಧೀನ ನ್ಯಾಯಾಲಯಗಳಿಗೆ ಸ್ಥಾಯಿ ವಕೀಲರಾಗಿ ನೇಮಕವಾಗಿದ್ದ ಅವರು ನ್ಯಾಯಮೂರ್ತಿಯಾಗಿ ನೇಮಕವಾಗುವವರೆವಿಗೂ ಆ ಹುದ್ದೆಯಲ್ಲಿದ್ದರು.

2011ರ ಫೆಬ್ರವರಿ 17ರಂದು ಗುಜರಾತ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದನೋನ್ನತಿ ಪಡೆದ ನ್ಯಾ. ಪರ್ದಿವಾಲಾ ಅವರು 2013ರ ಜನವರಿ 28ರಂದು ಕಾಯಂಗೊಂಡಿದ್ದರು.

Kannada Bar & Bench
kannada.barandbench.com