ವೃಥಾ ಕೊಲೆ ಆರೋಪ, ಎಸ್‌ಟಿ ವೈದ್ಯಕೀಯ ವಿದ್ಯಾರ್ಥಿ ಭವಿಷ್ಯಕ್ಕೆ ಸಂಚಕಾರ: ₹ 42 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ

ವೈದ್ಯರಾಗುವ ಅವಕಾಶ ಕಳೆದುಕೊಂಡದ್ದರಿಂದ ಅವರ ಭವಿಷ್ಯ ಬಹುತೇಕ ನಾಶವಾಗಿದ್ದು ಪ್ರಕರಣದಿಂದಾಗಿ ಅವರ ಬದುಕು ಅಸ್ತವ್ಯಸ್ತಗೊಂಡಿತು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
Jail
Jail
Published on

ಕೊಲೆ ಪ್ರಕರಣವೊಂದರಲ್ಲಿ ಪೊಲೀಸರ ದುರುದ್ದೇಶಪೂರಿತ ಕಾನೂನು ಕ್ರಮಕ್ಕೆ ತುತ್ತಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿಯನ್ನು ದೋಷಮುಕ್ತಗೊಳಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಅವರಿಗೆ ₹ 42 ಲಕ್ಷ ಪರಿಹಾರ ಒದಗಿಸವಂತೆ ಸರ್ಕಾರಕ್ಕೆ ಸೂಚಿಸಿದೆ [ಚಂದ್ರೇಶ್ ಮರ್ಸ್ಕೊಲೆ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಮೇಲ್ಮನವಿದಾರರಾಗಿರುವ ಆರೋಪಿಯನ್ನು ಸುಮ್ಮನೆ ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ತನಿಖೆ ನಡೆಸಿದ್ದು ಅವರ ವಿರುದ್ಧದ ಪ್ರಕರಣ ದುರುದ್ದೇಶಪೂರಿತವಾಗಿದೆ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸುನಿತಾ ಯಾದವ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

"ಪೂರ್ವಗ್ರಹಪೀಡಿತವಾದ, ದಿಕ್ಕುತಪ್ಪಿಸುವ ಕೀಳುತನವೇ ತುಂಬಿದ ತನಿಖೆಯನ್ನು ಹಾಗೂ ಕೇಡಿನ ವಿಚಾರಣೆಯನ್ನು ಈ ಪ್ರಕರಣವು ತೋರಿಸುತ್ತದೆ. ಪೊಲೀಸರು ಅರ್ಜಿದಾರರನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲೆಂದೇ ಪ್ರಕರಣದ ತನಿಖೆ ನಡೆಸಿದ್ದಾರೆ. ಆ ಮೂಲಕ ಬಹುಶಃ ನೈಜ ಅಪರಾಧಿಯಾದ ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ಉದ್ದೇಶಪೂರ್ವಕವಾಗಿ ರಕ್ಷಿಸಿದಂತೆ ಕಂಡು ಬರುತ್ತದೆ," ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

Also Read
[ಲಕ್ಷದ್ವೀಪ] ಡೈರಿ ಫಾರಂ, ಶಾಲಾಮಕ್ಕಳಿಗೆ ಮಾಂಸದೂಟ ನಿರ್ಬಂಧ ಪ್ರಶ್ನಿಸಿ ಅರ್ಜಿ: ಮಧ್ಯಂತರ ಪರಿಹಾರ ನೀಡಿದ ಸುಪ್ರೀಂ

ಕೊಲೆ ಪ್ರಕರಣದಲ್ಲಿ ಅಪರಾಧಿಯನ್ನಾಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಆದೇಶದ ವಿರುದ್ಧ ಮೇಲ್ಮನವಿದಾರರು ದೂರಿದ್ದರು. ಪೊಲೀಸರೊಡಗೂಡಿ ಸಾಕ್ಷಿದಾರನೊಬ್ಬ ತನ್ನ ವಿರುದ್ಧ ಸುಳ್ಳು ಸಾಕ್ಷ್ಯ ನುಡಿದಿದ್ದಾನೆ ಎಂದು ಅಳಲು ತೋಡಿಕೊಂಡಿದ್ದರು. ಪ್ರಕರಣವನ್ನು ಕೂಲಂಕಷ ಪರಿಶೀಲನೆಗೊಳಪಡಿಸಿದ ನ್ಯಾಯಾಲಯವು ಸಾಕ್ಷಿದಾರ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯವರ ನಡುವೆ ಸಂಬಂಧವಿರುವುದನ್ನು ಗುರುತಿಸಿತು. ಇಂತಹ ಸನ್ನಿವೇಶದಲ್ಲಿ ಸಿಬಿಐನಂತಹ ತಟಸ್ಥ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ತನಿಖೆ ಅಪೂರ್ಣವಾಗಿದ್ದಾಗಲೇ ದೋಷಾರೋಪ ಮಾಡಲಾಗಿದೆ. ದುರುದ್ದೇಶ ಪೂರ್ವಕವಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು. ಜೊತೆಗೆ ಅರ್ಜಿದಾರರು 13 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರಿಂದ ವೈದ್ಯರಾಗಬೇಕೆಂಬ ಅವರ ಭವಿಷ್ಯ ಮಸುಕಾಯಿತು ಎಂಬ ಕಾರಣಕ್ಕೆ ಪರಿಹಾರ ಒದಗಿಸುವಂತೆ ಸೂಚಿಸಿತು. ತೊಂಬತ್ತು ದಿನಗಳಲ್ಲಿ ₹ 42 ಲಕ್ಷ ಪರಿಹಾರ ಒದಗಿಸುವಂತೆ ಆದೇಶಿಸಿತು. ಅಲ್ಲದೆ, ಮೇಲ್ಮನವಿದಾರರು ಸರ್ಕಾರದ ವಿರುದ್ಧ ನಾಗರಿಕ ಪರಿಹಾರ ಪಡೆಯುವುದಕ್ಕೆ ಕಾನೂನು ಕ್ರಮ ಕೈಗೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದಿತು.

Kannada Bar & Bench
kannada.barandbench.com