ಅಪರಾಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರುವುದಕ್ಕೆ ಕೇಂದ್ರದ ವಿರೋಧ

ಹಾಗೆ ನಿಷೇಧ ವಿಧಿಸುವುದು ಸಂಸತ್ತಿನ ವಿವೇಚನೆಗೆ ಬಿಟ್ಟದ್ದು ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Supreme Court
Supreme Court
Published on

ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರು ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಲು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಹಾಗೆ ನಿಷೇಧ ವಿಧಿಸುವುದು ಸಂಸತ್ತಿನ ವಿವೇಚನೆಗೆ ಬಿಟ್ಟದ್ದೇ ವಿನಾ ನ್ಯಾಯಾಂಗಕ್ಕಲ್ಲ. ಪ್ರಮಾಣಾನುಗುಣತೆ ಮತ್ತು ಸಮಂಜಸತೆಯ ತತ್ವಗಳ ಆಧಾರದ ಮೇಲೆ ಸಂಸತ್ತು ಅಂತಹ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅದು ತಿಳಿಸಿದೆ.

Also Read
ಶಿಕ್ಷೆಗೊಳಗಾದ ರಾಜಕಾರಣಿಗಳ ಚುನಾವಣಾ ಸ್ಪರ್ಧೆಗೆ ಆಜೀವ ನಿಷೇಧ ಹೇರಲು ಕೋರಿಕೆ: ಎಜಿ ಅಭಿಪ್ರಾಯ ಕೇಳಿದ ಸುಪ್ರೀಂ

ಆಜೀವ ನಿಷೇಧ ಸೂಕ್ತವೇ ಅಥವಾ ಇಲ್ಲವೇ ಎಂಬುದು ಸಂಸತ್ತಿನ ವ್ಯಾಪ್ತಿಗಷ್ಟೇ ಒಳಪಡುವ ವಿಚಾರವಾಗಿದ್ದು ನಿಷೇಧ ಸೂಕ್ತ ಅಥವಾ ಅಲ್ಲ ಎನ್ನುವುದು ಅರ್ಜಿದಾರರಿಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

"ಕಾನೂನಿನ ವಿಷಯವಾಗಿ, ಯಾವುದೇ ಶಿಕ್ಷೆ ವಿಧಿಸುವಾಗ, ಸಂಸತ್ತು ಪ್ರಮಾಣಾನುಗುಣತೆ ಮತ್ತು ಸಮಂಜಸತೆಯ ತತ್ವಗಳನ್ನು ಪರಿಗಣಿಸಲು ಯತ್ನಿಸುತ್ತದೆ" ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಜನ ಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

ಶಿಕ್ಷೆಗೊಳಗಾದ ರಾಜಕಾರಣಿಗಳು ಶಿಕ್ಷೆಯ ಅವಧಿ ಮುಗಿದ ನಂತರ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಕಾಯಿದೆಯ ಸೆಕ್ಷನ್ 8 ನಿಷೇಧಿಸುತ್ತದೆ. ಇದು ಕೆಲವು ವರ್ಗೀಕೃತ ಅಪರಾಧಗಳಿಗೆ ಮತ್ತು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವ ಯಾವುದೇ ಕೃತ್ಯಕ್ಕೆ ಅನ್ವಯವಾಗುತ್ತದೆ.

ಭ್ರಷ್ಟಾಚಾರ ಅಥವಾ ದೇಶದ್ರೋಹದ ಕಾರಣದಿಂದಾಗಿ ಸರ್ಕಾರಿ ಉದ್ಯೋಗಗಳಿಂದ ವಜಾಗೊಂಡ ವ್ಯಕ್ತಿಗಳು, ವಜಾಗೊಂಡ ದಿನದಿಂದ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಕಾಯಿದೆಯ ಸೆಕ್ಷನ್ 9 ತಡೆಯುತ್ತದೆ.

Also Read
ಶಿಕ್ಷೆಗೊಳಗಾದ ರಾಜಕಾರಣಿಗಳ ಸ್ಪರ್ಧೆಗೆ ಆಜೀವ ನಿಷೇಧ: ಕೇಂದ್ರದಿಂದ ವಿರೋಧ

ಶಿಕ್ಷೆಗೊಳಗಾದ ಶಾಸಕರ ಅನರ್ಹತೆಯ ಅವಧಿಯನ್ನು ಆರು ವರ್ಷಗಳಿಗೆ ಸೀಮಿತಗೊಳಿಸುವುದರ ಹಿಂದಿನ ತಾರ್ಕಿಕತೆಯ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡುವಂತೆ ಫೆಬ್ರವರಿ 10 ರಂದು, ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ  ಸೂಚಿಸಿತ್ತು. ಕಾನೂನು ಭಂಜಕರನ್ನೇ ಕಾನೂನು ರೂಪಿಸುವವರನ್ನಾಗಿ ಮಾಡುವುದು "ಸ್ಪಷ್ಟ ಹಿತಾಸಕ್ತಿ ಸಂಘರ್ಷ" ಎಂದು ಅದು ಆಗ ಹೇಳಿತ್ತು.

ಆದರೆ ಕಾಯಿದೆಯಡಿ ಶಿಕ್ಷೆ ವಿಧಿಸುವುದು, ಸಮಯ ಅಥವಾ ಪ್ರಮಾಣಾನುಗುಣಕ್ಕೆ ಸಂಬಂಧಿಸಿದ್ದರಿಂದ ಆಜೀವ ನಿಷೇಧ ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

Kannada Bar & Bench
kannada.barandbench.com