
ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರು ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರ ಸಹಾಯ ಕೇಳಿದೆ.
ಪ್ರಜಾ ಪ್ರಾತಿನಿಧ್ಯ ಕಾಯಿದೆಯ (ಆರ್‌ಪಿ ಕಾಯ್ದೆ) ಸೆಕ್ಷನ್ 8 ಮತ್ತು 9 ರ ಕೆಲವು ವಿಷಯಗಳ ಸಿಂಧುತ್ವ ಪ್ರಶ್ನಿಸಿ, ಮತ್ತು ಅಂತಹ ಜನಪ್ರತಿನಿಧಿಗಳಿಗೆ ನಿಷೇಧ ವಿಧಿಸುವಂತೆ ಕೋರಿ ವಕೀಲ ಮತ್ತು ಹೋರಾಟಗಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 2017ರಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದರು.
ನಿರ್ದಿಷ್ಟವಾಗಿ ಹೇಳುವುದಾದರೆ, ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಸಂಸತ್ ಸದಸ್ಯರಾಗಿ ಅಥವಾ ಶಾಸಕರಾಗಿ ನಿರ್ದಿಷ್ಟ ಅವಧಿಗೆ ಮಾತ್ರ ಸ್ಪರ್ಧಿಸುವುದರಿಂದ ಅನರ್ಹಗೊಳಿಸುವ ಈ ನಿಬಂಧನೆಗಳ ಸಿಂಧುತ್ವವನ್ನು ಉಪಾಧ್ಯಾಯ ಪ್ರಶ್ನಿಸಿದ್ದರು.
ಪ್ರಕರಣ ಆರ್‌ಪಿ ಕಾಯಿದೆ ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಒಳಗೊಂಡಿರುವುದರಿಂದ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಇಂದು ಭಾರತದ ಅಟಾರ್ನಿ ಜನರಲ್ ಅವರನ್ನು ಈ ವಿಚಾರವಾಗಿ ಅಭಿಪ್ರಾಯ ನೀಡುವಂತೆ ತಿಳಿಸಿತು.
ಆರ್‌ಪಿ ಕಾಯಿದೆಯ ಸೆಕ್ಷನ್ 8ರ ಅಡಿ ಪ್ರಸ್ತುತ ಕೆಲವು ಅನುಸೂಚಿತ ಅಪರಾಧಗಳಿಗೆ ಶಿಕ್ಷೆಗೊಳಗಾದವರನ್ನು ಶಿಕ್ಷೆಗೊಳಗಾದ ದಿನಾಂಕದಿಂದ ಮತ್ತು ಕೆಲ ಪ್ರಕರಣಗಳಲ್ಲಿ ಜೈಲಿನಿಂದ ಬಿಡುಗಡೆಯಾದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸುತ್ತದೆ.
ಆರ್‌ಪಿ ಕಾಯಿದೆಯ ಸೆಕ್ಷನ್ 9 ಅದೇ ರೀತಿ ಭ್ರಷ್ಟಾಚಾರ ಅಥವಾ ಪ್ರಭುತ್ವಕ್ಕೆ ನಿಷ್ಠೆ ತೋರದ ಕಾರಣಕ್ಕಾಗಿ ಸರ್ಕಾರಿ ಸೇವೆಯಿಂದ ವಜಾಗೊಂಡವರನ್ನು ವಜಾಗೊಳಿಸಿದ ದಿನಾಂಕದ ನಂತರ ಐದು ವರ್ಷಗಳ ಅವಧಿಗೆ ಅನರ್ಹಗೊಳಿಸುತ್ತದೆ.
ಹೀಗೆ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಚುನಾಯಿತ ಹುದ್ದೆಗಳಿಂದ ಸ್ಪರ್ಧಿಸುವುದಕ್ಕೆ ಸೀಮಿತ ಅವಧಿಗೆ ಮಾತ್ರ ನಿಷೇಧಿಸುವುದು ಅಸಾಂವಿಧಾನಿಕ ಎಂದು ಪ್ರತಿಪಾದಿಸಲಾಗಿದೆ.
ಅರ್ಜಿ ವಿಚಾರಣೆಯನ್ನು ನಡೆಸಿದ ಪೀಠವು ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ (ECI) ತಮ್ಮ ಪ್ರತಿಕ್ರಿಯೆಯನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ತಮ್ಮ ವಾದಗಳನ್ನು ಮಂಡಿಸಲು ಬಯಸುವ ರಾಜ್ಯ ಸರ್ಕಾರಗಳಿಗೂ ಸಹ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಎಲ್ಲಾ ಭಾಗೀದಾರರು ಸಮಯಕ್ಕೆ ಸರಿಯಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದರೆ ಅವರ ವಾದ ಆಲಿಸುವುದಾಗಿ ಅದು ಹೇಳಿತು.
2023 ರಲ್ಲಿ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸಂಸದರು ಮತ್ತು ಶಾಸಕರ ವಿರುದ್ಧದ ತ್ವರಿತ ವಿಚಾರಣೆಯ ಅಂಶದ ಕುರಿತು ಸಮಗ್ರ ತೀರ್ಪು ನೀಡಿತ್ತು.
ಶಾಸಕರ ವಿರುದ್ಧದ ವಿಚಾರಣೆಯ ಪ್ರಗತಿ ನಿಧಾನವಾಗಿ ಮುಂದುವರಿದಿದೆ ಎಂಬ ಕಳವಳವನ್ನು ನ್ಯಾಯಮೂರ್ತಿಗಳಾದ ದತ್ತ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ಪೀಠ ಇಂದು ತಿಳಿಸಿತು. ಆದರೆ ತ್ರಿಸದಸ್ಯರು ಇದ್ದ ವಿಸ್ತೃತ ಪೀಠ ಈ ಹಿಂದೆ ಪರಿಶೀಲಿಸಿದ ಪ್ರಕರಣವನ್ನು ಮರುಪರಿಶೀಲಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು. ಆದ್ದರಿಂದ ಪ್ರಕರಣದ ಕುರಿತು ವಿಚಾರಣೆ ನಡೆಸಲು ಸೂಕ್ತ ಪೀಠ ರಚಿಸುವಂತೆ ಸಿಜೆಐ ಸಂಜೀವ್ ಖನ್ನಾ ಅವರಿಗೆ ಅದು ಕೋರಿದೆ.
ಆದರೆ ಆರ್‌ಪಿ ಕಾಯಿದೆಯ ಸೆಕ್ಷನ್ 8 ಮತ್ತು 9ರ ಸಿಂಧುತ್ವಕ್ಕೆ ಸಂಬಂಧಿಸಿದ ವಿಷಯವನ್ನು ನ್ಯಾಯಮೂರ್ತಿಗಳಾದ ದತ್ತ ಮತ್ತು ಮನಮೋಹನ್ ಅವರಿರುವ ವಿಭಾಗೀಯ ಪೀಠ ಪರಿಗಣಿಸಲಿದೆ. 2017 ರಲ್ಲಿ ಸಲ್ಲಿಸಲಾದ ಮೂಲ ಮಧ್ಯಪ್ರವೇಶ ಅರ್ಜಿಗೆ ಕೆಲ ತಿದ್ದುಪಡಿಗಳನ್ನು ಪೀಠ ಇಂದು ಅನುಮತಿಸಿತು.
ಹಿರಿಯ ವಕೀಲ ವಿಕಾಸ್ ಸಿಂಗ್ ಇಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಪರವಾಗಿ; ಅಮಿಕಸ್ ಕ್ಯೂರಿಯಾಗಿ ವಿಜಯ್ ಹನ್ಸಾರಿಯಾ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 4 ರಂದು ನಡೆಯಲಿದೆ.