

ಕೇಂದ್ರ ಸರ್ಕಾರವು ತನ್ನ ಕಾನೂನು ಅಧಿಕಾರಿಗಳ ಶುಲ್ಕವನ್ನು ಪರಿಷ್ಕರಿಸಿ ಫೆಬ್ರವರಿ 5ರಂದು ಅಧಿಸೂಚನೆ ಹೊರಡಿಸಿದೆ.
ಹೊಸ ಶುಲ್ಕ ವ್ಯವಸ್ಥೆಯನ್ನು ಒಳಗೊಂಡಿರುವ ಕಾನೂನು ಅಧಿಕಾರಿಗಳ (ಸೇವಾ ಷರತ್ತುಗಳು) ತಿದ್ದುಪಡಿ ನಿಯಮಾವಳಿ, ಫೆಬ್ರವರಿ 1, 2026ರಿಂದ ಜಾರಿಗೆ ಬರಲಿದೆ.
ಭಾರತದ ಅಟಾರ್ನಿ ಜನರಲ್ ಅವರಿಗೆ ಮಾಸಿಕ ರಿಟೇನರ್ ಶುಲ್ಕವಾಗಿ ₹1,20,000 ಪಾವತಿಸಲಾಗುವುದು. ಸಾಲಿಸಿಟರ್ ಜನರಲ್ ಅವರಿಗೆ ₹96,000 ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ₹72,000 ರಿಟೇನರ್ ಶುಲ್ಕ ನಿಗದಿಯಾಗಿದೆ.
ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ಇತರ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದೆ ವಿವಿಧ ಪ್ರಕರಣಗಳಲ್ಲಿ ವಾದ ಮಂಡಿಸಲು ಈ ಕಾನೂನು ಅಧಿಕಾರಿಗಳಿಗೆ ಪಾವತಿಸಬೇಕಾದ ಶುಲ್ಕಗಳನ್ನೂ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ದಾವೆ, ರಿಟ್ ಅರ್ಜಿಗಳು, ಮೇಲ್ಮನವಿಗಳು ಮತ್ತು ಉಲ್ಲೇಖ ಪ್ರಕರಣಗಳಲ್ಲಿ ಹಾಜರಾಗಲು, ಪ್ರತಿ ಪ್ರಕರಣಕ್ಕೆ ದಿನವಹಿ ₹38,000 ಶುಲ್ಕ ಪಾವತಿಸಲಾಗುತ್ತದೆ. ವಿಶೇಷ ಅನುಮತಿ ಅರ್ಜಿಗಳು, ಇನ್ನಿತರ ಅರ್ಜಿಗಳಲ್ಲಿ ಹಾಜರಾಗಲು ಪ್ರತಿ ದಿನ ₹24,000 ಸಂಭಾವನೆ ನಿಗದಿಯಾಗಿದೆ.
ಕಾನೂನು ಸಚಿವಾಲಯದಿಂದ ಕಳುಹಿಸಲಾದ ಪ್ರಕರಣಗಳ ಹೇಳಿಕೆಗಳ ಕುರಿತು (ಸಂವಿಧಾನಾತ್ಮಕ ಅಥವಾ ಕಾನೂನು ವ್ಯಾಖ್ಯಾನ ಮತ್ತು ಮಹತ್ವ ಹೊಂದಿರುವ ವಿಷಯಗಳಿಗೆ ಮಾತ್ರ) ಅಭಿಪ್ರಾಯ ನೀಡಲು ಪ್ರತಿ ಪ್ರಕರಣಕ್ಕೆ ₹24,000 ಶುಲ್ಕ ನಿಗದಿಯಾಗಿದೆ.
ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ತನಿಖಾ ಆಯೋಗಗಳು ಅಥವಾ ನ್ಯಾಯಮಂಡಳಿಗಳ ಮುಂದೆ ಲಿಖಿತ ವಾದ ಸಲ್ಲಿಕೆಗೆ ಪ್ರತಿ ಪ್ರಕರಣಕ್ಕೆ ₹24,000 ಶುಲ್ಕ ಪಾವತಿಸಲಾಗುತ್ತದೆ.
ಸುಪ್ರೀಂ ಕೋರ್ಟ್‌ನ ಕಾನೂನು ಅಧಿಕಾರಿಗಳಿಗೆ ದೆಹಲಿಯ ಹೊರಗಿನ ನ್ಯಾಯಾಲಯಗಳಲ್ಲಿ ಹಾಜರಾಗುವ ಸಂದರ್ಭದಲ್ಲಿ ಪ್ರತಿ ಪ್ರಕರಣಕ್ಕೆ ಪ್ರತಿ ದಿನ ₹96,000 ಶುಲ್ಕ ಪಾವತಿಸಲಾಗುತ್ತದೆ.
ತಮ್ಮ ಕೇಂದ್ರ ಕಚೇರಿಯನ್ನು ಹೊರತುಪಡಿಸಿ, ತಮ್ಮ ನ್ಯಾಯವ್ಯಾಪ್ತಿಯೊಳಗಿನ ಇತರ ನ್ಯಾಯಾಲಯಗಳಲ್ಲಿ ಹಾಜರಾಗುವ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್‌ಗೆ ಪ್ರತಿ ಪ್ರಕರಣಕ್ಕೆ ದಿನವೊಂದಕ್ಕೆ ₹60,000 ಶುಲ್ಕ ಪಾವತಿಸಲಾಗುತ್ತದೆ.
ಸುಪ್ರೀಂ ಕೋರ್ಟ್ ಪ್ಯಾನಲ್ ವಕೀಲರನ್ನು ಎ ಬಿ ಹಾಗೂ ಸಿ ಗುಂಪುಗಳೆಂದು ವಿಂಗಡಿಸಿ ಪಾವತಿ ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮ ವಿಚಾರಣೆಗೆ ಎ ಗುಂಪಿನ ವಕೀಲರಿಗೆ ದಿನಕ್ಕೆ ₹21,600 ಹಾಗೂ ಗುಂಪು ಬಿ ಮತ್ತು ಸಿ ವಕೀಲರಿಗೆ ₹14,400 ನಿಗದಿಯಾಗಿದೆ. ಎಸ್‌ಎಲ್‌ಪಿ, ವರ್ಗಾವಣೆ ಅರ್ಜಿಗಳು ಮತ್ತು ಇತರ ಪ್ರಕರಣಗಳ ಪ್ರವೇಶ ಹಂತದಲ್ಲಿ ಗುಂಪು ಎ ವಕೀಲರಿಗೆ ₹14,400 ಮತ್ತು ಗುಂಪು ಬಿ ಹಾಗೂ ಸಿ ವಕೀಲರಿಗೆ ₹7,200 ನೀಡಲಾಗುತ್ತದೆ.
ಹೈಕೋರ್ಟ್‌ಗಳು ಮತ್ತು ನ್ಯಾಯಮಂಡಳಿಗಳ ಮುಂದೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಉಪ ಸಾಲಿಸಿಟರ್ ಜನರಲ್‌ಗಳು, ಹಿರಿಯ ಹಾಗೂ ಹೆಚ್ಚುವರಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರು ಮತ್ತು ಹಿರಿಯ ಪ್ಯಾನಲ್ ವಕೀಲರಿಗೆ ತಿಂಗಳಿಗೆ ₹14,400 ರಿಟೇನರ್ ಶುಲ್ಕ ನೀಡಲಾಗುತ್ತದೆ. ಅಲ್ಲದೆ, ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಹಿರಿಯ ವಕೀಲರಿಗೆ ಪ್ರತಿ ಪರಿಣಾಮಕಾರಿ ವಿಚಾರಣೆಗೆ ₹3,600 ಹಾಗೂ ಕಿರಿಯ ವಕೀಲರಿಗೆ ₹2,400 ಶುಲ್ಕ ನಿಗದಿಪಡಿಸಲಾಗಿದೆ.