ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಅರ್ಜಿ: ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸಂವಿಧಾನದ 162ನೇ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನುಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಡಿ ಅವಕಾಶವಿಲ್ಲ. ಸಿಪಿಸಿ ಸೆಕ್ಷನ್‌ 92ರ ಅಡಿಯಲ್ಲಿ ನಿಯಂತ್ರಣ ಹೊಂದಬಹುದು ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ಅಪ್ರಾಪ್ತ ವಿದ್ಯಾರ್ಥಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದಲೇ ತಮ್ಮ ಸೂಚನೆಯ ಅನುಸಾರ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದರಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಹಾನಿಯುಂಟಾಗುತ್ತದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಮುಂದೆ ಬಲವಾಗಿ ವಾದಿಸಿತು.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡಿ ಎಸ್‌ ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “‘ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ ಟ್ರಸ್ಟಿ ಮತ್ತು ಅಧ್ಯಕ್ಷರಾಗಿತಕ್ಕದ್ದು ಎಂದು 2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ವಿದ್ಯಾಪೀಠದ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ 106 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸಾವಿರಾರು ನೌಕರರು ದುಡಿಯುತ್ತಿದ್ದಾರೆ. ಶರಣರು ಜೈಲು ಸೇರಿರುವ ಕಾರಣ ಸಾರ್ವಜನಿಕ ಟ್ರಸ್ಟ್‌ ಅನ್ನು ಸರ್ಕಾರ ರಕ್ಷಣೆ ಮಾಡಬೇಕಿದ್ದು, ಅದಕ್ಕಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ” ಎಂದು ವಾದಿಸಿದರು.

“ಕೆಲವು ಮುಖಂಡರು ಹಾಗೂ ಇತರರು ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಸರ್ಕಾರ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಂದ ವರದಿಗಳನ್ನು ತರಿಸಿಕೊಂಡು ಆ ಬಳಿಕ ಆಡಳಿತಾಧಿಕಾರಿ ನೇಮಕ ಮಾಡಿದೆ. ಮಠದ ದೈನಂದಿನ ಪೂಜಾ ಕೈಂಕರ್ಯ, ದಾಸೋಹ ಹಾಗೂ ಇತರೆ ಚಟುವಟಿಕೆಗಳಿಗೆ ಆಡಳಿತಾಧಿಕಾರಿಯಿಂದ ಯಾವುದೇ ಅಡ್ಡಿಯಾಗುವುದಿಲ್ಲ. ಒಂದು ವೇಳೆ ಈಗಿರುವ ಸ್ಥಿತಿಯೇ ಮುಂದುವರಿದರೆ ಸಾವಿರಾರು ಕೋಟಿ ರೂಪಾಯಿಯ ಆಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ” ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌.ಪಾಟೀಲ್ ಅವರು “ಸರ್ಕಾರ ಸಂವಿಧಾನದ 162ನೇ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಡಿ ಅವಕಾಶವಿಲ್ಲ. ನಾಗರಿಕ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 92ರ ಅಡಿಯಲ್ಲಿ ನಿಯಂತ್ರಣ ಹೊಂದಬಹುದು. ಹೀಗಾಗಿ, ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು” ಮನವಿ ಮಾಡಿದರು.

“ಪ್ರತಿಯೊಂದು ಧಾರ್ಮಿಕ ಪಂಗಡಗಳಿಗೆ (ರಿಲಿಜಿಯಸ್ ಡಿನಾಮಿನೇಷನ್–ಮಠ) ಸಂವಿಧಾನದತ್ತವಾಗಿ ಕೆಲವು ಮೂಲಭೂತ ಹಕ್ಕುಗಳಿವೆ. ಇದನ್ನು ಸುಪ್ರೀಂ ಕೋರ್ಟ್‌ ಶಿರೂರು ಮಠ ಪ್ರಕರಣದಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ, ಮುರುಘಾಮಠ ಬಸವತತ್ವ ಪಾಲಿಸುವ ಅವೈದಿಕ ಪರಂಪರೆಯ ಲಿಂಗಾಯತ ಮಠವಾಗಿದ್ದು, ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರ ಕ್ರಮ” ಎಂದು ವಿವರಿಸಿದರು.

Also Read
ರಾಜ್ಯ ಸರ್ಕಾರದಿಂದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಆಗ ಪೀಠವು “ಅರ್ಜಿಯಲ್ಲಿ ಕೇವಲ ಲಿಂಗಾಯತ ಮಠ ಎಂದಷ್ಟೇ ಹೇಳಿದ್ದೀರಿ, ಅದನ್ನು ಪುಷ್ಟೀಕರಿಸುವ ಯಾವುದೇ ಅಂಶಗಳಿಲ್ಲ. ರಾಜ್ಯದ ಮಠಗಳ ಇತಿಹಾಸದಲ್ಲೇ ಈ ಮಠಕ್ಕೆ ಅತ್ಯಂತ ಮಹತ್ವದ ಮತ್ತು ಗೌರವ, ಘನತೆಯಿದೆ. ಈ ಮಠಕ್ಕೆ ಯಾರು ಪೀಠಾಧಿಪತಿ ಎಂಬುದು ಮುಖ್ಯವಲ್ಲ. ಇದು ಅಲ್ಲಮಪ್ರಭುಗಳು ಸ್ಥಾಪಿಸಿದ ಮಠ. ಈ ಮಠ 1,600 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದೆ ಎಂದು ಹೇಳುತ್ತಿದ್ದೀರಿ, ವಿರಕ್ತ ಮಠ ಎನ್ನುತ್ತಿದ್ದೀರಿ, ಆದರೆ ಅವಿರಕ್ತ ನಡೆ ಸರಿಯೇ" ಎಂದು ಪ್ರಶ್ನಿಸಿತು.

“ಒಂದು ವೇಳೆ ಶರಣರು ಜಾಮೀನು ಪಡೆದು ಹೊರಬಂದರೆ ಆಗ ಆಡಳಿತವನ್ನು ಬಿಟ್ಟುಕೊಡುತ್ತೀರಾ?” ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಪೀಠ ಪ್ರಶ್ನಿಸಿತು. ಇದಕ್ಕೆ ನಾವದಗಿ ಅವರು”ರಾಜ್ಯದ ಮಠಗಳ ಇತಿಹಾಸದಲ್ಲೇ ಪೀಠಾಧಿಪತಿಯೊಬ್ಬರು ಇಂತಹ ಗಂಭೀರ ಕ್ರಿಮಿನಲ್‌ ಪ್ರಕರಣದಲ್ಲಿ ಜೈಲು ಪಾಲಾದ ಉದಾಹರಣೆಗಳಿಲ್ಲ. ಒಂದು ವೇಳೆ ಶರಣರಿಗೆ ಜಾಮೀನು ದೊರೆತದ್ದೇ ಆದರೆ, ಆಗ ಸರ್ಕಾರ ಈ ಅಂಶವನ್ನು ಪರಿಶೀಲಿಸಲಿದೆ” ಎಂದು ವಿವರಿಸಿದರು.

Kannada Bar & Bench
kannada.barandbench.com