ʼಗೊತ್ತಿಲ್ಲದ ಫಲಿತಾಂಶʼದ ಮೇಲೆ ಬೆಟ್ಟಿಂಗ್ ಕಟ್ಟಿ ಹಣ ಅಪಾಯಕ್ಕೆ ಸಿಲುಕಿಸುವುದು ಬಾಜಿ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಆನ್‌ಲೈನ್‌ ಜೂಜಾಟದಿಂದ ಸಾಕಷ್ಟು ಮಂದಿ ಹಣ, ಜೀವ ಕಳೆದುಕೊಂಡಿದ್ದಾರೆ. ಇದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಕೆಯಾಗಿದೆ ಎಂದು ತಿಳಿಸಿದ ಎಜಿ.
Karnataka HC and Online games
Karnataka HC and Online games
Published on

“ಆಟದ ಫಲಿತಾಂಶದ ಬಗ್ಗೆ ತಿಳಿಯದಿರುವಾಗ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್‌ ಕಟ್ಟುವುದು ಆಯ್ಕೆಯನ್ನು ಆಧರಿಸಿರಲಿ ಅಥವಾ ಕೌಶಲವನ್ನು ಆಧರಿಸಿರಲಿ, ಅದು ಬಾಜಿಗೆ ಸಮನಾಗಿರುತ್ತದೆ” ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ರಿಟ್‌ ಮನವಿಗಳ ವಿಚಾರಣೆ ವೇಳೆ ಕಾಯಿದೆಯನ್ನು ಸಮರ್ಥಿಸಿದ್ದಾರೆ.

ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ರಿಟ್‌ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ವಿಶೇಷ ವಿಭಾಗೀಯ ಪೀಠ ಮಂಗಳವಾರ ನಡೆಸಿತು. ಈ ಸಂದರ್ಭದಲ್ಲಿ ಅರ್ಜಿದಾರರ ಆಕ್ಷೇಪಗಳಿಗೆ ರಾಜ್ಯ ಸರ್ಕಾರದ ಪರವಾಗಿ ಎಜಿ ನಾವದಗಿ ಪ್ರತಿಕ್ರಿಯಿಸಿದರು.

“ಬಾಜಿ ಅಥವಾ ಬೆಟ್ಟಿಂಗ್‌ ಅನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಒಬ್ಬರಿಂದ ಹಣ ಸಂಗ್ರಹಿಸಿ, ಹಣದ ರೂಪದಲ್ಲಿ ಬಹುಮಾನದ ಮೊತ್ತ ಹಂಚಿಕೆ ಮಾಡುವುದಾಗಿದೆ. ಮುಂದೆ ಹೊರಹೊಮ್ಮಬಹುದಾದ ಫಲಿತಾಂಶದ ಬಗ್ಗೆ ತಿಳಿಯದೇ ತಮ್ಮ ಹಣ ಅಥವಾ ಇನ್ನಾವುದಾದರ ಮೇಲೆ ರಿಸ್ಕ್‌ ತೆಗೆದುಕೊಳ್ಳುವುದು ಬಾಜಿ ಅಥವಾ ಬೆಟ್ಟಿಂಗ್‌ಗೆ ಸಮನಾಗುತ್ತದೆ. ಹೀಗೆ ಮುಂಚಿತವಾಗಿಯೇ ಫಲಿತಾಂಶ ಗೊತ್ತಿಲ್ಲದ ಆಟವು ಆಯ್ಕೆ ಆಧಾರಿತ ಆಟ (ಗೇಮ್‌ ಆಫ್ ಚಾಯ್ಸ್‌) ಆಗಿರಬಹುದು ಅಥವಾ ಕೌಶಲದ ಆಟವಾಗಿರಬಹುದು (ಗೇಮ್‌ ಆಫ್‌ ಸ್ಕಿಲ್‌)” ಎಂದು ನಾವದಗಿ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಉದಾಹರಿಸಿದ ಎಜಿ ನಾವದಗಿ ಅವರು “ಭಾರತ ವರ್ಸಸ್‌ ಪಾಕಿಸ್ತಾನ ಆಟವಾಡುತ್ತಿದ್ದರೆ ಅದು ಕೌಶಲದ ಆಟ. ಸದರಿ ಆಟದ ಫಲಿತಾಂಶ ತಿಳಿಯದಿರುವಾಗ ಹಲವರಿಂದ ಬೆಟ್ಟಿಂಗ್‌ ಹಣವನ್ನು ನಾನು ಸಂಗ್ರಹಿಸುತ್ತೇನೆ. ಅದು ಕೌಶಲದ ಆಟವಾಗಿರಬಹುದು” ಎಂದು ನಾವದಗಿ ಹೇಳಿದರು.

ಆಕ್ಷೇಪಾರ್ಹವಾದ ಕಾಯಿದೆಯು ಕೌಶಲಕ್ಕೆ ಸಂಬಂಧಿಸಿದ್ದಲ್ಲ. ಇದು ಗೊತ್ತಿಲ್ಲದ ಫಲಿತಾಂಶದ ಬಗ್ಗೆ ಬೆಟ್ಟಿಂಗ್‌ ಸಂಗ್ರಹಿಸುವ ಸಂಘಟಿತ ಸಿಡಿಕೇಟ್‌ಗೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದರು. “ಗೊತ್ತಿಲ್ಲದ ಫಲಿತಾಂಶವನ್ನು ಆಧರಿಸಿ ಸಂಘಟಿತವಾಗಿ ಹಣ ಸಂಗ್ರಹಿಸುವ ಮತ್ತು ಬೆಟ್ಟಿಂಗ್‌ಗೆ ತಡೆಯೊಡ್ಡುವುದನ್ನು ನಿಷೇಧಿಸಬೇಕೆ ಅಥವಾ ಬೇಡವೇ? ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆ ಎಂದರು. “ನೀವು ಆನ್‌ಲೈನ್‌ ಗೇಮ್‌ ಮಾಲೀಕರಾಗಿದ್ದು, ಬಾಜಿ ಮತ್ತು ಬೆಟ್ಟಿಂಗ್‌ಗೆ ಅದನ್ನು ಬಳಸಿದರೆ ಅದು ಅಪರಾಧವಾಗುತ್ತದೆ” ಎಂದರು.

ಕಾಯಿದೆಯನ್ನು ಪ್ರಶ್ನಿಸಿರುವ ಯಾವುದೇ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿಲ್ಲ ಎಂದ ನಾವದಗಿ ಅವರು ತಡೆಯಾಜ್ಞೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. “ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವುದು ಅಳುಕಿನಿಂದ ಅಥವಾ ಕಳಕಳಿಯಿಂದ ಅಲ್ಲ. ತಮ್ಮ ವಿರುದ್ಧ ಕ್ರಮಕೈಗೊಳ್ಳಲಾಗಿದೆಯೇ ಎಂಬುದನ್ನು ಅವರು (ಅರ್ಜಿದಾರರು) ಹೇಳಬೇಕು” ಎಂದರು.

ಇದಕ್ಕೆ ನ್ಯಾಯಾಲಯವು “ಗ್ಯಾಂಗ್ರೀನ್‌ ಪತ್ತೆಯಾಗುವವರೆಗೆ ಕಾಯುವ ಅಗತ್ಯವಿಲ್ಲ. ಶ್ರೇಯಾ ಸಿಂಘಾಲ್ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ನಾಗರಿಕರು ನ್ಯಾಯಾಲಯಗಳನ್ನು ಸಂಪರ್ಕಿಸಲು ಕಾಯಬೇಕಾಗಿಲ್ಲ" ಎಂದಿತು.

“ಆನ್‌ಲೈನ್‌ ಜೂಜಾಟದಿಂದ ಸಾಕಷ್ಟು ಮಂದಿ ಹಣ, ಜೀವ ಕಳೆದುಕೊಂಡಿದ್ದಾರೆ. ಇದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಕೆಯಾಗಿದೆ. ಈ ಸಂಬಂಧ ಪೀಠವು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಅಂತೆಯೇ, ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಲಿದೆ ಎಂದು ಪೀಠಕ್ಕೆ ತಿಳಿಸಲಾಗಿತ್ತು. ಬಳಿಕ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆ ಜಾರಿಗೊಳಿಸಲಾಗಿದೆ” ಎಂದು ಪೀಠಕ್ಕೆ ಎಜಿ ವಿವರಿಸಿದರು.

ಇದಕ್ಕೂ ಮುನ್ನ ಪೆಸಿಫಿಕ್‌ ಗೇಮಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಪರ ವಾದಿಸಿದ್ದ ವಕೀಲ ಟಿ ಎಸ್‌ ಸುರೇಶ್‌ ಅವರು “ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವುದಲ್ಲ. ಅದನ್ನು ನಿಯಂತ್ರಿಸುವುದು ನಮ್ಮ ಮುಂದಿನ ಹಾದಿ ಎಂದು ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ” ಎಂದರು.

Also Read
[ಆನ್‌ಲೈನ್‌ ಜೂಜು ನಿಷೇಧ ಕಾಯಿದೆ] ಮಧ್ಯಂತರ ತಡೆಯಾಜ್ಞೆಗೆ ವಾದಿಸಿದ ಗೇಮಿಂಗ್‌ ಕಂಪೆನಿಗಳು

“ಕಾಯಿದೆಯನ್ನು ಹಿಂಪಡೆಯಲು ಸರ್ಕಾರ ಇಚ್ಛೆ ಹೊಂದಿದೆಯೇ ಎಂಬುದನ್ನು ಪೀಠ ಪ್ರಶ್ನಿಸಬೇಕು. ಈ ಕಾನೂನಿನಿಂದ ನಮ್ಮ ರಾಜ್ಯವು ಆದಾಯ, ಉದ್ಯೋಗ ನಷ್ಟ ಅನುಭವಿಸಲಿದೆ. ರಾಜ್ಯ ಸರ್ಕಾರದ ಕಾಯಿದೆಯು 19(1)(g) ಅಡಿ ನಮ್ಮ ಹಕ್ಕುಗಳನ್ನು ಕಸಿಯಲಿದೆ. ಇದು ಸ್ವೇಚ್ಛೆಯಿಂದ ಕೂಡಿದ್ದು, ಅರ್ಥಹೀನವಾಗಿದೆ” ಎಂದು ವಿರೋಧ ದಾಖಲಿಸಿದರು.

ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಗೆ ಮಧ್ಯಂತರ ತಡೆಯಾಜ್ಞೆ ವಿಚಾರವಾಗಿ ಮಾತ್ರ ಪೀಠವು ಅರ್ಜಿದಾರರು ಮತ್ತು ಪ್ರತಿವಾದಿ ರಾಜ್ಯ ಸರ್ಕಾರದಿಂದ ವಾದ-ಪ್ರತಿವಾದ ಆಲಿಸುತ್ತಿದೆ. ಈಗಾಗಲೇ ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌ ಪರ ಹಿರಿಯ ವಕೀಲ ಆರ್ಯಮಾ ಸುಂದರಂ, ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ, ಡಿಎಲ್‌ಎನ್‌ ರಾವ್‌ ಸೇರಿದಂತೆ ಹಲವರು ವಾದ ಮಾಡಿಸಿದ್ದಾರೆ. ನವೆಂಬರ್‌ 30ಕ್ಕೆ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com