ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕೆ ಎಸ್‌ ಜ್ಯೋತಿಶ್ರೀ ಅವರು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ರ್‍ಯಾಪರ್‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ನಾಲ್ಕು ವರ್ಷಗಳ ದಾಂಪತ್ಯ ಬದುಕನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದು, ಪರಸ್ಪರ ಒಪ್ಪಿಗೆ ಮೂಲಕ ವಿವಾಹ ವಿಚ್ಛೇದನ ಪಡೆಯಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವೃತ್ತಿಯ ದೃಷ್ಟಿಯಿಂದ ಪರಸ್ಪರ ಸಮ್ಮತಿ ಮೇರೆಗೆ ವಿವಾಹ ವಿಚ್ಛೇದನ ಪಡೆಯಲು ನಿರ್ಧರಿಸಿರುವುದಾಗಿ ದಂಪತಿ ಹೇಳಿಕೊಂಡಿದ್ದು, ಈ ಸಂಬಂಧ ಜೂನ್‌ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಶುಕ್ರವಾರ (ಜೂನ್‌ 7) ವಿಚಾರಣೆಗೆ ಬಂದಿತ್ತು.

ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕೆ ಎಸ್‌ ಜ್ಯೋತಿಶ್ರೀ ಅವರು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೇ, ಅರ್ಜಿದಾರರ ನಡುವೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸುವಂತೆ ಮಧ್ಯಸ್ಥಿಕೆ ಕೇಂದ್ರಕ್ಕೆ ಸೂಚಿಸಿ ವಿಚಾರಣೆಯನ್ನು 2024ರ ಆಗಸ್ಟ್‌ 31ಕ್ಕೆ ಮುಂದೂಡಿದ್ದಾರೆ.

ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -6ರಲ್ಲಿ ರ್‍ಯಾಪರ್‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಬ್ಬರ ಮೊದಲ ಭೇಟಿಯಾಗಿತ್ತು. 2020ರ ಫೆಬ್ರವರಿ 26ರಂದು ಅವರಿಬ್ಬರು ಮದುವೆಯಾಗಿದ್ದರು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಇವರಿಬ್ಬರೂ ನಟಿಸಿರುವ ‘ಕ್ಯಾಂಡಿ ಕ್ರಶ್’ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Kannada Bar & Bench
kannada.barandbench.com