ಚಾಂದಿನಿ ಚೌಕ್ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತಡೆಗೆ ನುರಿತ ಪೇದೆಗಳ ನಿಯೋಜನೆಗೆ ಹೈಕೋರ್ಟ್ ಸೂಚನೆ

ಕರ್ಫ್ಯೂ ಇದ್ದ ದಿನಗಳು ಮತ್ತು ಗಣರಾಜ್ಯೋತ್ಸವ ದಿನದಂದು ಛಾಯಾಚಿತ್ರ ತೆಗೆದು ಒತ್ತುವರಿ ನಡೆದಿಲ್ಲ ಎಂದು ನಂಬಿಸಲು ಯತ್ನಿಸಿದ್ದಕ್ಕೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ದೆಹಲಿ ಪೊಲೀಸರ ಬಗ್ಗೆ ಅಸಮಧಾನ ವ್ಯಕ್ತಪಡಿಸಿತ್ತು.
Delhi High Court

Delhi High Court

Published on

ರಾಜಧಾನಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಅಕ್ರಮ ಬೀದಿಬದಿಯ ವ್ಯಾಪಾರ ತಡೆಯುವ ಸಲುವಾಗಿ ಸೂಕ್ತ ರೀತಿಯಲ್ಲಿ ತರಬೇತಿ ಪಡೆದ ಮತ್ತು ಒತ್ತುವರಿ ಬಗ್ಗೆ ಜಾಗೃತಿ ಹೊಂದಿರುವ ಬೀಟ್‌ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸುವ ಸಾಧ್ಯತೆ ಪರಿಶೀಲಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ರಾಷ್ಟ್ರ ರಾಜಧಾನಿಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಗಳ ಅಕ್ರಮ ಸ್ಥಿತಿಯನ್ನು ಎತ್ತಿ ತೋರಿಸಲು ಸ್ಥಳೀಯ ವರ್ತಕರ ಸಂಘಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಬೀದಿಬದಿ ವ್ಯಾಪಾರಿಗಳಿಂದ ನಡೆದ ಒತ್ತುವರಿ ಪರಿಶೀಲಿಸುವುದಕ್ಕಾಗಿ ನಿಯಂತ್ರಣ ಕೊಠಡಿಗಳಲ್ಲಿನ ಸಿಸಿಟಿವಿ ದೃಶ್ಯಗಳ ಮೇಲೆ ನಿಗಾ ಇಡಲು ಅಧಿಕಾರಿಗಳು/ಸಿಬ್ಬಂದಿಗಳ ತಂಡವೊಂದನ್ನು ರೂಪಿಸಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ದಿನೇಶ್ ಕುಮಾರ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿತು.

Also Read
ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್ 123(4)ರ ಅಡಿ ಚುನಾವಣಾ ಅಭ್ಯರ್ಥಿಯ ಸುಳ್ಳು ಶೈಕ್ಷಣಿಕ ಮಾಹಿತಿ: ದೆಹಲಿ ಹೈಕೋರ್ಟ್

ಅತಿಕ್ರಮಣದಾರರ ಮೇಲೆ ನಿಗಾ ಇಡಲು ಈ ಪ್ರದೇಶದಲ್ಲಿ 576 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಆದರೆ ದೃಶ್ಯಾವಳಿಗಳ ಮೇಲೆ ನಿಗಾ ಇಡುವ ನಿಯಂತ್ರಣ ಕೊಠಡಿ ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಸಲಾಯಿತು. ಇನ್ನೆರಡು ವಾರದಲ್ಲಿ ನಿಯಂತ್ರಣ ಕೊಠಡಿಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಪೀಠ ಸೂಚಿಸಿತು.

ಕರ್ಫ್ಯೂ ಇದ್ದ ದಿನಗಳು ಮತ್ತು ಗಣರಾಜ್ಯೋತ್ಸವ ದಿನದಂದು ಛಾಯಾಚಿತ್ರ ತೆಗೆದು ಒತ್ತುವರಿ ನಡೆದಿಲ್ಲ ಎಂದು ನಂಬಿಸಲು ಯತ್ನಿಸಿದ್ದಕ್ಕೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ದೆಹಲಿ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಏಪ್ರಿಲ್ 19ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.

Kannada Bar & Bench
kannada.barandbench.com