ಬದಲಾದ ಸರ್ಕಾರ: ಯಾರಾಗಲಿದ್ದಾರೆ ಅಡ್ವೊಕೇಟ್‌ ಜನರಲ್?

ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್‌, ಕಾಂತರಾಜ್‌, ಶಶಿಕಿರಣ ಶೆಟ್ಟಿ, ವಿಕ್ರಂ ಹುಯಿಲಗೋಳ, ಸಂದೇಶ ಚೌಟ, ಎ ಜಿ ಶಿವಣ್ಣ ಅವರ ಹೆಸರುಗಳು ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಕೇಳಿ ಬಂದಿವೆ.
Prof Ravivarma Kumar, H Kantaraj, Shashikiran Shetty, Sandesh Chouta, Vikram Huilgol, A G Shivanna.
Prof Ravivarma Kumar, H Kantaraj, Shashikiran Shetty, Sandesh Chouta, Vikram Huilgol, A G Shivanna.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದ ಬೆನ್ನಿಗೇ ರಾಜ್ಯದ ಅಗ್ರಗಣ್ಯ ಕಾನೂನು ಅಧಿಕಾರಿ ಅರ್ಥಾತ್‌ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಯಾರು ನೇಮಕವಾಗಲಿದ್ದಾರೆ ಎಂಬ ಚರ್ಚೆ ವಕೀಲ ಸಮುದಾಯದಲ್ಲಿ ಶುರುವಾಗಿದೆ. ಇದರ ಬೆನ್ನಿಗೇ ಪ್ರತಿಷ್ಠಿತ ಹುದ್ದೆಗೆ ಅನೇಕ ಹಿರಿಯ ವಕೀಲರ ಹೆಸರುಗಳು ಚಾಲ್ತಿಗೆ ಬಂದಿವೆ.

ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಹಲವು ನೀತಿ-ನಿರ್ಧಾರಗಳ ವಿರುದ್ಧ ಸಮರ್ಥವಾಗಿ ವಾದ ಮಂಡಿಸುವುದರ ಜೊತೆಗೆ ಪಕ್ಷದ ಸಿದ್ಧಾಂತವನ್ನು ಪ್ರಬಲವಾಗಿ ಮಂಡಿಸಬಲ್ಲ ಮುಖವನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ವಿರೋಧ ಪಕ್ಷವಾಗಿರುವ ಬಿಜೆಪಿಯು ರಾಜ್ಯ ಸರ್ಕಾರದ ಬಹುತೇಕ ಒಲವು-ನಿಲುವುಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಲಿದ್ದು, ಇಲ್ಲಿ ಸೈದ್ಧಾಂತಿಕ ಬದ್ಧತೆ ಮತ್ತು ಕಾನೂನು ಪಾಂಡಿತ್ಯ ಬಹುಮುಖ್ಯ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಈ ಬಾರಿ ಮಹತ್ವವಿದೆ.

ಈ ನೆಲೆಯಲ್ಲಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್‌, ಕಾಂತರಾಜ್‌, ಶಶಿಕಿರಣ ಶೆಟ್ಟಿ, ವಿಕ್ರಂ ಹುಯಿಲಗೋಳ, ಸಂದೇಶ ಚೌಟ, ಎ ಜಿ ಶಿವಣ್ಣ ಅವರ ಹೆಸರುಗಳು ಕೇಳಿ ಬಂದಿವೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪ್ರೊ. ರವಿವರ್ಮ ಕುಮಾರ್‌ ಅವರು ಕೆಲ ಸಮಯದವರೆಗೆ ಅಡ್ವೊಕೇಟ್‌ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಲಪಂಥೀಯ ಧೋರಣೆಯಿಂದ ತೆಗೆದುಕೊಂಡಿರುವ ಸಾಕಷ್ಟು ನೀತಿ, ನಿರ್ಧಾರಗಳನ್ನು ಸಂವಿಧಾನದ ನೆಲೆಗಟ್ಟಿನ ಮೂಲಕವೇ ಸೈದ್ಧಾಂತಿಕವಾಗಿ ಎದುರಿಸಲು, ಕಾನೂನಾತ್ಮಕವಾಗಿ ಸರಿಪಡಿಸಲು ರವಿವರ್ಮ ಕುಮಾರ್ ಅವರಂತಹವರು ಸೂಕ್ತ. ಅವರ ಹಿರಿತನ, ಅನುಭವ, ಸೈದ್ಧಾಂತಿಕ ಸ್ಪಷ್ಟತೆ, ಸಂವಿಧಾನದ ಬಗ್ಗೆ ಆಳವಾದ ಶ್ರದ್ಧೆ ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವಿದೆ ಎನ್ನುವ ಭಾವನೆ ಪಕ್ಷದ ವಲಯದಲ್ಲಿ, ವಕೀಲ ಸಮುಯದಾಯದಲ್ಲಿ ಕೇಳಿ ಬರುತ್ತಿದೆ.

ಇನ್ನು ಇದಲ್ಲದೆ ಮುಂಚೂಣಿಯಲ್ಲಿರುವ ಇತರ ಹೆಸರುಗಳೆಂದರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜ್‌ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರ ಪುತ್ರ ಹಾಗೂ ಹಿರಿಯ ವಕೀಲರಾದ ಶಶಿಕಿರಣ್‌ ಶೆಟ್ಟಿ ಅವರದ್ದು. ಇದೇ ರೀತಿ, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಟಿ ಜಯರಾಂ ಚೌಟ ಅವರ ಪುತ್ರ ಸಂದೇಶ್‌ ಚೌಟ, ವಿಕ್ರಂ ಹುಯಿಲಗೋಳ, ಮಾಜಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿದ್ದ ಎ ಜಿ ಶಿವಣ್ಣ ಅವರ ಹೆಸರುಗಳೂ ವಕೀಲ ವಲಯ ಹಾಗೂ ಪಕ್ಷದ ವಲಯದಿಂದ ಕೇಳಿಬಂದಿವೆ.

ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ 2017 ರಿಂದ 2018ರವರೆಗೆ ಸಂದೇಶ್‌ ಚೌಟ ಅವರು ಸರ್ಕಾರಿ ಅಭಿಯೋಜಕರಾಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 2018-2019ರಲ್ಲಿ ಅವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಇದುವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಅಡ್ವೊಕೇಟ್‌ ಜನರಲ್‌ ಹುದ್ದೆ ಸೇರಿದಂತೆ ಸರ್ಕಾರದಿಂದ ಯಾವುದೇ ಹುದ್ದೆ ನೀಡಿದರೂ ಆ ವಿಚಾರದಲ್ಲಿ ಮುಕ್ತವಾಗಿದ್ದೇನೆ” ಎಂದು ತಿಳಿಸಿದ್ದಾರೆ.

ಮೇಲಿನ ಈ ಹೆಸರುಗಳು ಸದ್ಯ ಚಾಲ್ತಿಯಲ್ಲಿರುವಂಥವಾಗಿವೆ. ಸರ್ಕಾರದ ರಚನೆಯ ನಂತರ ಮತ್ತೂ ಕೆಲ ಪ್ರಮುಖ ಹೆಸರುಗಳು ಮುನ್ನೆಲೆಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

M S Shyam Sundar, S A Ahmed, Surya Mukundaraj
M S Shyam Sundar, S A Ahmed, Surya Mukundaraj

ಎಎಜಿ ಹುದ್ದೆಗೂ ಡಿಮ್ಯಾಂಡ್‌: ಇನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಯತ್ತ ಗಮನಹರಿಸಿದರೆ 3-4 ಎಎಜಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹುದ್ದೆಗೆ ಕೆಪಿಸಿಸಿ ಕಾನೂನು ಘಟಕದ ಉಸ್ತುವಾರಿ ಅಧ್ಯಕ್ಷರಾಗಿರುವ ಎಸ್‌ ಎ ಅಹ್ಮದ್‌, ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ. ಈ ಸಂಬಂಧ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿರುವ ಅಹ್ಮದ್‌ ಅವರು “ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಪಕ್ಷ ವಹಿಸಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ” ಎಂದಷ್ಟೇ ಹೇಳಿದ್ದಾರೆ.

Also Read
ಹಿಜಾಬ್‌, ಮುಸ್ಲಿಮ್‌ ಮೀಸಲಾತಿ ರದ್ದು, ಗೋಹತ್ಯೆ, ಮತಾಂತರ ನಿಷೇಧ, ಪಿಎಸ್‌ಐ, ಜಾರಕಿಹೊಳಿ ಪ್ರಕರಣಗಳ ಸ್ಥಿತಿ ಮುಂದೇನು?

ಕ್ರಿಮಿನಲ್‌ ಕಾನೂನು ವಿಭಾಗದಲ್ಲಿ ಸಾಕಷ್ಟು ಅನುಭವಿಯಾಗಿರುವ ಹಿರಿಯ ವಕೀಲ ಶ್ಯಾಮಸುಂದರ್‌ ಅವರ ಹೆಸರು ವಿಶೇಷ ಸರ್ಕಾರಿ ಅಭಿಯೋಜಕರ ಹುದ್ದೆಗೆ ಕೇಳಿ ಬಂದಿದೆ. ಈ ಸಂಬಂಧ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ ಅವರು “ಸರ್ಕಾರದಿಂದ ಆಹ್ವಾನ ಬಂದರೆ ಖಂಡಿತವಾಗಿಯೂ ಆ ಬಗ್ಗೆ ಯೋಚನೆ ಮಾಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com