ವಿಚ್ಛೇದನ ಪ್ರಕರಣ: ಫೋನ್‌ ಕರೆ ಹಾಗೂ ವಾಟ್ಸಾಪ್‌ ಸಂದೇಶ ಸಾಕ್ಷ್ಯವಾಗಿ ಬಳಸಲು ಅನುಮತಿಸಿದ ಛತ್ತೀಸ್‌ಗಢ ಹೈಕೋರ್ಟ್‌

ಪತ್ನಿಗೆ ಖಂಡಿತಾ ಖಾಸಗಿತನದ ಹಕ್ಕು ಇದೆ. ಆದರೆ ತನ್ನ ವಾದ ಸಾಬೀತುಪಡಿಸಲು ಸಂಬಂಧಪಟ್ಪ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಮಂಡಿಸಲು ಇರುವ ಪ್ರತಿವಾದಿಯ ಹಕ್ಕಿಗಿಂತ ಇದು ಮಿಗಿಲಲ್ಲ ಎಂದ ಪೀಠ.
WhatsApp chat
WhatsApp chat
Published on

ವಿಚ್ಛೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಫೋನ್‌ ಕರೆ ದಾಖಲೆ ಹಾಗೂ ವಾಟ್ಸಾಪ್‌ ಸಂದೇಶವನ್ನು ಸಾಕ್ಷ್ಯವಾಗಿ ಬಳಸಲು ಪತಿಗೆ ಈಚೆಗೆ ಅವಕಾಶ ನೀಡಿರುವ ಛತ್ತೀಸ್‌ಗಢ ಹೈಕೋರ್ಟ್‌ ಆ ಮೂಲಕ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.

ಕೌಟುಂಬಿಕ ನ್ಯಾಯಾಲಯ ಕಾಯಿದೆಯ ಸೆಕ್ಷನ್‌ 14 ಸಾಮಾನ್ಯ ಸಾಕ್ಷ್ಯ ಸ್ವೀಕಾರ ನಿಯಮಗಳಿಗೆ ಹೊರತಾಗುವ ವಿನಾಯಿತಿಯನ್ನು ಒದಗಿಸುತ್ತದೆ ಎಂದು ನ್ಯಾಯಮೂರ್ತಿ ಸಚಿನ್‌ ಸಿಂಗ್‌ ರಜಪೂತ್‌ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ವಿವಾದವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಅಗತ್ಯವಾದ ಯಾವುದೇ ಸಾಕ್ಷ್ಯವನ್ನು ಕುಟುಂಬ ನ್ಯಾಯಾಲಯ ಪರಿಗಣಿಸಬಹುದು ಎಂದು ಅವರು ತಿಳಿಸಿದರು.

Also Read
ನ್ಯಾ. ವರ್ಮಾ ಖುಲಾಸೆಯಾದರೂ ಮಾಧ್ಯಮ ವಿಚಾರಣೆಯಿಂದಾಗಿ ಅವರ ಪ್ರಾಮಾಣಿಕತೆಯನ್ನು ಯಾರೂ ನಂಬುವುದಿಲ್ಲ: ಮುಕುಲ್‌ ರೋಹಟ್ಗಿ

ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ಆಕ್ಷೇಪಣೆ ಆಧರಿಸಿ ಇಂತಹ ಸಾಕ್ಷ್ಯ ಹೊರಗಿಟ್ಟರೆ ಆ ಸೆಕ್ಷನ್‌ ಅರ್ಥಹೀನವಾಗುತ್ತದೆ ಎಂಬುದಾಗಿ ನ್ಯಾಯಾಲಯ ನುಡಿದಿದೆ.

Also Read
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗುವನ್ನು ಕೊಂದ ಪೋಷಕರು: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

 “ಕೌಟುಂಬಿಕ ನ್ಯಾಯಾಲಯದೆದುರು ಬರುವ ಹೆಚ್ಚಿನ ಪ್ರಕರಣಗಳಲ್ಲಿ, ಸಲ್ಲಿಸಲಾಗುವ ಸಾಕ್ಷ್ಯವು ವಿಚಾರಣೆಯಲ್ಲಿರುವ ಪಕ್ಷಕಾರರ ಖಾಸಗಿ ಜೀವನಕ್ಕೆ ಸಂಬಂಧಿಸಿರುವುದು ಸಹಜ. ಖಾಸಗಿತನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಸಾಕ್ಷ್ಯಗಳಿಗೆ 14ನೇ ವಿಧಿಯನ್ನು ಸಂಪೂರ್ಣವಾಗಿ ಅನ್ವಯಿಸಬಾರದು ಎಂದು ಹೇಳಿದರೆ, 14ನೇ ವಿಧಿ ಮಾತ್ರವಲ್ಲ, ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶವೇ ಅರ್ಥಹೀನವಾಗಬಹುದು. ಆದ್ದರಿಂದ, ಸಾಕ್ಷ್ಯ ಸ್ವೀಕಾರಕ್ಕೆ ಮುಖ್ಯ ಪರೀಕ್ಷೆ ಅದರ ಪ್ರಾಸಂಗಿಕತೆಯೇ ಆಗಿರಬೇಕು,” ಎಂದು ಪೀಠ ತಿಳಿಸಿದೆ.

ತನ್ನ ಮೊಬೈಲ್‌ ಹ್ಯಾಕ್‌ ಮಾಡಿ ಸಾಕ್ಷ್ಯ ಸಂಗ್ರಹಿಸಲಾಗಿದೆ ಹಾಗೂ ತನ್ನ ಗೌಪ್ಯತೆಯ ಹಕ್ಕು ಉಲ್ಲಂಘಿಸಲಾಗಿದೆ ಎಂದು ಪತ್ನಿ ವಾದಿಸಿದ್ದರು. ಆದರೆ ನ್ಯಾಯಾಲಯ ಪತ್ನಿಗೆ ಖಂಡಿತಾ ಖಾಸಗಿತನದ ಹಕ್ಕು ಇದೆ. ಆದರೆ ತನ್ನ ವಾದವನ್ನು ಸಾಬೀತುಪಡಿಸಲು ಸಂಬಂಧಿತವೆಂದು ಪರಿಗಣಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಮಂಡಿಸಲು ಇರುವ ಪ್ರತಿವಾದಿಯ ಹಕ್ಕಿಗಿಂತ ಇದು ಮಿಗಿಲಲ್ಲ ಎಂದಿತು. ಅಂತೆಯೇ ಪತ್ನಿಯ ಮೇಲ್ಮನವಿಯನ್ನು ಬದಿಗೆ ಸರಿಸಿತು. 

[ತೀರ್ಪಿನ ಪ್ರತಿ]

Attachment
PDF
X_v_B
Preview
Kannada Bar & Bench
kannada.barandbench.com