ಮದ್ಯ ಹಗರಣ: ಮಾಜಿ ಸಿಎಂ ಬಘೇಲ್ ಪುತ್ರನಿಗೆ ಜಾಮೀನು ನೀಡಿದ ಛತ್ತೀಸ್‌ಗಢ ಹೈಕೋರ್ಟ್

ಛತ್ತೀಸ್‌ಗಢ ಆರ್ಥಿಕ ಅಪರಾಧಗಳ ವಿಭಾಗ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿದ್ದ ಪ್ರಕರಣಗಳು ಮಾತ್ರವಲ್ಲದೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಚೈತನ್ಯ ಬಘೇಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ.
ಛತ್ತೀಸ್‌ಗಢ ಹೈಕೋರ್ಟ್
ಛತ್ತೀಸ್‌ಗಢ ಹೈಕೋರ್ಟ್
Published on

ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರ ಪುತ್ರ ಚೈತನ್ಯ ಬಘೇಲ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಮತ್ತು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಹೂಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಛತ್ತೀಸ್‌ಗಢ ರಾಜ್ಯ ಹೈಕೋರ್ಟ್‌ ಜಾಮೀನು ನೀಡಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರು ಆದೇಶ ಪ್ರಕಟಿಸಿದ್ದಾರೆ. ಛತ್ತೀಸ್‌ಗಢ ಆರ್ಥಿಕ ಅಪರಾಧಗಳ ವಿಭಾಗ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿದ್ದ ಪ್ರಕರಣಗಳು ಮಾತ್ರವಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಚೈತನ್ಯ ಬಘೇಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ.

Also Read
ಮದ್ಯ ಹಗರಣ: ಬಂಧನ ಪ್ರಶ್ನಿಸಿ ಭೂಪೇಶ್‌ ಪುತ್ರ ಸಲ್ಲಿಸಿದ್ದ ಅರ್ಜಿ ಕುರಿತು ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಈ ಎರಡೂ ಪ್ರಕರಣಗಳು 2019 ರಿಂದ 2023ರ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ನಡೆದಿದೆಯೆಂದು ಆರೋಪಿಸಲಾದ ದೊಡ್ಡ ಪ್ರಮಾಣದ ಮದ್ಯ ಹಗರಣಕ್ಕೆ ಸಂಬಂಧಿಸಿದ್ದು ಅಕ್ರಮವಾಗಿ ಕಮಿಷನ್‌ ಪಡೆದಿರುವುದು ಹಾಗೂ ಅಬಕಾರಿ ಆದಾಯದ ದುರ್ಬಳಕೆ ಆರೋಪಗಳನ್ನೂ ಒಳಗೊಂಡಿದೆ.

ರಾಜಕಾರಣಿಗಳು, ಅಬಕಾರಿ ಅಧಿಕಾರಿಗಳು ಮತ್ತು ಖಾಸಗಿ ಡಿಸ್ಟಿಲರಿ ನಿರ್ವಾಹಕರ ಜಾಲ ರಾಜ್ಯದ ಮದ್ಯ ವ್ಯಾಪಾರದಲ್ಲಿ ಅಕ್ರಮ ನಡೆಸಿ ಸರ್ಕಾರದ ಬೊಕ್ಕಸಕ್ಕೆ ₹3,000 ಕೋಟಿಗೂ ಹೆಚ್ಚು ನಷ್ಟ ಉಂಟುಮಾಡಿದೆ ಎಂದು ತನಿಖಾ ಸಂಸ್ಥೆಗಳು ದೂರಿದ್ದವು.

ಅಪರಾಧದ ಗಳಿಕೆಯಿಂದ ಲಭಿಸಿದ ಹಣದ ಒಂದು ಮೊತ್ತವನ್ನು ಚೈತನ್ಯ ಬಘೇಲ್‌ ಅವರು ತಮ್ಮ  ಬಘೇಲ್ ಡೆವಲಪರ್ಸ್ ನಡೆಸುತ್ತಿರುವ ರಿಯಲ್ ಎಸ್ಟೇಟ್ ಯೋಜನೆಯಾದ ‘ವಿಠಲ್ ಗ್ರೀನ್ ಮೂಲಕ  ಪಡೆದುಕೊಂಡಿದ್ದಾರೆ. ಜಪ್ತಿ ಮಾಡಲಾದ ಆಸ್ತಿಗಳು ಈ ನಿಧಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಇ ಡಿ ಹೇಳಿತ್ತು.

 ಸಹ ಆರೋಪಿಗಳ ಹೇಳಿಕೆ ಆಧರಿಸಿರುವ ಇ ಡಿ ಮದ್ಯ ಹಗರಣದಿಂದ ಸೃಷ್ಟಿಯಾದ ನಗದನ್ನು ಬನ್ಸಾಲ್ ಮೂಲಕ ಸಾಗಿಸಿ, ಅಂತಿಮವಾಗಿ ಬಘೇಲ್‌ ಅವರ ಯೋಜನೆಗೆ ನೀಡಿ, ಅದು ಕಳಂಕಿತವಲ್ಲ ಎಂಬ ಭ್ರಮೆ ಮೂಡಿಸಲಾಗಿದೆ ಎಂಬುದಾಗಿ ದೂರಿತ್ತು.

ಬಘೇಲ್‌ ಕನಿಷ್ಠ ₹16.70 ಕೋಟಿ ಅಪರಾಧ ಲಾಭವನ್ನು ಪಡೆದಿದ್ದು, ಮದ್ಯ ಹಗರಣಕ್ಕೆ ಸಂಬಂಧಿಸಿದ ₹1,000 ಕೋಟಿಗೂ ಹೆಚ್ಚು ಮೊತ್ತದ ಹಣದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು  ಅದು ಆಪಾದಿಸಿತ್ತು. ಮತ್ತೊಂದಡೆ ಬಘೇಲ್‌ ವೈಯಕ್ತಿಕವಾಗಿ ₹200 ಕೋಟಿಗೂ ಹೆಚ್ಚು ಲಾಭ ಪಡೆದಿದ್ದಾರೆ ಎಂದು ಆರ್ಥಿಕ ಅಪರಾಧಗಳ ವಿಭಾಗ  ಆರೋಪ ಮಾಡಿತ್ತು.

Also Read
ಮದ್ಯ ಹಗರಣ: ಪಿಎಂಎಲ್‌ಎ ವಿರುದ್ಧ ಭೂಪೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿ ಆಲಿಸಲು ಸುಪ್ರೀಂ ನಿರ್ಧಾರ

ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ಬಘೇಲ್‌ ಪರ ವಕೀಲರು ಇ ಡಿ ಮತ್ತು ಆರ್ಥಿಕ ಅಪರಾಧ ವಿಭಾಗ ಯಾಂತ್ರಿಕವಾಗಿ ಆರೋಪ ಮಾಡಿವೆ ಎಂಬುದಾಗಿ ವಾದಿಸಿದರು.  

ಈ ಹಿಂದೆ, ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣದಲ್ಲಿ ಬಘೇಲ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ, ಇ ಡಿ ಅವರು ಬಂಧಿಸಿದ್ದನ್ನು ಸಮರ್ಥನೀಯ ಎಂದಿತ್ತು. ಇದರಿಂದಾಗಿ ಚೈತನ್ಯ ಬಘೇಲ್‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಬಂಧನ ಹಾಗೂ ಪಿಎಂಎಲ್‌ಎ ಕಾಯಿದೆಯ ಕೆಲವು ವಿಧಿಗಳ ಕುರಿತ ಅವರ ಆಕ್ಷೇಪಣೆಗಳ ವಿಚಾರಣೆ ಇನ್ನೂ ಬಾಕಿ ಇದೆ.

Kannada Bar & Bench
kannada.barandbench.com