ಅಲೋಪತಿ ಕುರಿತ ಹೇಳಿಕೆ: ರಾಮದೇವ್‌ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ

ಛತ್ತೀಸ್‌ಗಢ ಪೊಲೀಸರು ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿದ್ದಾರೆ ಎಂದು ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು. ಬಿಹಾರದಲ್ಲಿ ರಾಮದೇವ್ ಅವರ ವಿರುದ್ಧ ಮತ್ತೊಂದು ಎಫ್ಐಆರ್, ವಿಚಾರಣೆ ಎದುರು ನೋಡುತ್ತಿದೆ.
Patanjali Promoter Baba Ramdev, doctors
Patanjali Promoter Baba Ramdev, doctors
Published on

ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ್ದ ಸಂದರ್ಭದಲ್ಲಿ ಅಲೋಪತಿ ವೈದ್ಯರು ಲಕ್ಷಾಂತರ ಜನರ ಸಾವಿಗೆ ಕಾರಣರಾದರು ಎಂದು ತಮ್ಮ ಕರೋನಿಲ್‌ ಔಷಧ ಪ್ರಚಾರದ ವೇಳೆ ಮಾಡಿದ್ದ ಆರೋಪಗಳ ಕುರಿತು ಈ ಹಿಂದೆ ದಾಖಲಾಗಿದ್ದ ಎಫ್ಐಆರ್‌ಗೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಮುಕ್ತಾಯ ವರದಿ ಸಲ್ಲಿಸಿದ್ದಾರೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು .

ರಾಮದೇವ್ ಅವರ ವಿವಾದಾತ್ಮಕ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾದ ನಂತರ, ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

Also Read
ಸುಪ್ರೀಂ ಕಪಾಳಮೋಕ್ಷ: ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ

ಛತ್ತೀಸ್‌ಗಢ ಪೊಲೀಸರು ರಾಮ್‌ದೇವ್‌ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ಕೈಬಿಡುತ್ತಿದ್ದಾರೆಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠಕ್ಕೆ ಇಂದು ತಿಳಿಸಲಾಯಿತು. ಆದರೆ ಬಿಹಾರದಲ್ಲಿ ಇದೇ ರೀತಿಯ ಎಫ್‌ಐಆರ್‌ ಇನ್ನೂ ಬಾಕಿ ಉಳಿದಿದೆ.

ಇಂತಹ ಕ್ರಿಮಿನಲ್ ಮೊಕದ್ದಮೆಗಳು ನಿಜವಾಗಿಯೂ ತೊಂದರೆಗೀಡಾದವರಿಗಿಂತಲೂ ಸ್ವಾರ್ಥ ಹಿತಾಸಕ್ತಿಗಳಿಂದ ನಡೆಯುತ್ತವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದರು.

ಇಂತಹ ಎಫ್‌ಐಆರ್‌ಗಳನ್ನು ಕೆಲವು ಹಿತಾಸಕ್ತಿ ಗುಂಪುಗಳು ಪ್ರಾಯೋಜಿಸುತ್ತವೆ ಎಂದು ಅವರು ಹೇಳಿದರು.

ಈ ಮಧ್ಯೆ ಛತ್ತೀಸ್‌ಗಢ ಎಫ್‌ಐಆರ್‌ನಲ್ಲಿನ ಮುಕ್ತಾಯ ವರದಿಯನ್ನು ಇನ್ನೂ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿಲ್ಲ ಎಂದು ರಾಮದೇವ್ ಪರ ವಾದ ಮಂಡಿಸಿದ, ಹಿರಿಯ ವಕೀಲ ಸಿದ್ಧಾರ್ಥ್ ದವೆ ಹೇಳಿದರು. ದೂರುದಾರರು ಪ್ರತಿಭಟನಾ ಅರ್ಜಿ ಸಲ್ಲಿಸಿದರೆ ಪ್ರಕರಣಕ್ಕೆ ಮರು ಜೀವ ಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಿಹಾರ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಡಿಸೆಂಬರ್‌ನಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.

Also Read
ಪತಂಜಲಿ ಪ್ರಕರಣ: ಐಎಂಎ ಅಧ್ಯಕ್ಷರ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

2022ರಲ್ಲಿ, ಭಾರತೀಯ ವೈದ್ಯಕೀಯ ಸಂಘದ ಅರ್ಜಿಯನ್ನು ವಿಚಾರಿಸುತ್ತಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಾಮದೇವ್ ಅವರಿಗೆ ಛೀಮಾರಿ ಹಾಕಿತ್ತು. ಈ ಅರ್ಜಿ ಆಧುನಿಕ ವೈದ್ಯಶಾಸ್ತ್ರ ಮತ್ತು ಕೋವಿಡ್‌ ಲಸಿಕೆಗಳ ವಿರುದ್ಧನಡೆಸಲಾದ ಅಪಪ್ರಚಾರದ ಅಭಿಯಾನ ಎಂದು ಸಂಘ ದೂರಿತ್ತು.

ಅದೇ ಸಮಯದಲ್ಲಿ, ದೆಹಲಿ ಹೈಕೋರ್ಟ್ ಕೂಡ ವೈದ್ಯರ ಸಂಘಗಳು ಆರಂಭಿಸಿದ ವಿಚಾರಣೆಯಲ್ಲಿ ಅಲೋಪತಿಯ ಬಗ್ಗೆ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡದಂತೆ ರಾಮದೇವ್‌ ಅವರಿಗೆ ನಿರ್ಬಂಧ ವಿಧಿಸಿತ್ತು.

Kannada Bar & Bench
kannada.barandbench.com