ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ ವೈ ಚಂದ್ರಚೂಡ್ ಹೆಸರು ಶಿಫಾರಸ್ಸು ಮಾಡಿದ ಸಿಜೆಐ ಲಲಿತ್

ಸಿಜೆಐ ಲಲಿತ್ ನವೆಂಬರ್ 8ರಂದು ನಿವೃತ್ತರಾಗಲಿದ್ದು ನ್ಯಾ. ಡಿ ವೈ ಚಂದ್ರಚೂಡ್ ಅವರು ಎರಡು ವರ್ಷಗಳವರೆಗೆ ಸಿಜೆಐ ಆಗಿ ದೀರ್ಘಾವಧಿ ಸೇವೆ ಸಲ್ಲಿಸಲಿದ್ದಾರೆ.
Justice Chandrachud
Justice Chandrachud

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ ವೈ ಚಂದ್ರಚೂಡ್ ಅವರ ಹೆಸರನ್ನು ಸಿಜೆಐ ಉದಯ್ ಉಮೇಶ್ ಲಲಿತ್ ಅವರು ಇಂದು ಅಧಿಕೃತವಾಗಿ ಶಿಫಾರಸ್ಸು ಮಾಡಿದ್ದಾರೆ.

ಸಿಜೆಐ ಲಲಿತ್ ಅವರು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಎರಡು ವರ್ಷಗಳ ಸುದೀರ್ಘ ಅಧಿಕಾರಾವಧಿ  ಹೊಂದಿರುವ ನ್ಯಾ. ಚಂದ್ರಚೂಡ್ ಅವರ ಹೆಸರನ್ನು ಸಿಜೆಐ ಪದವಿಗೆ ಸೂಚಿಸಿದ್ದಾರೆ.

Also Read
ಉತ್ತರಾಧಿಕಾರಿ ಶಿಫಾರಸ್ಸು ಮಾಡಲು ಸಿಜೆಐ ಯು ಯು ಲಲಿತ್‌ಗೆ ಪತ್ರ ರವಾನಿಸಿದ ಕಾನೂನು ಸಚಿವ ಕಿರೆನ್‌ ರಿಜಿಜು

ಇದಕ್ಕೂ ಮುನ್ನ ಚಂದ್ರಚೂಡ್ ಅವರನ್ನು ಸುಪ್ರೀಂ ಕೋರ್ಟ್‌ನ 50ನೇ ಸಿಜೆಐ ಆಗಿ ಶಿಫಾರಸ್ಸು ಮಾಡಿರುವ ಪತ್ರವನ್ನು ಹಸ್ತಾಂತರಿಸುವ ವೇಳೆ ನ್ಯಾಯಮೂರ್ತಿಗಳ ಲಾಂಜ್‌ನಲ್ಲಿ ಸಭೆ ಸೇರುವಂತೆ ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳಿಗೆ ಹಾಲಿ ಸಿಜೆಐ ಯು ಯು ಲಲಿತ್ ಮನವಿ ಮಾಡಿದ್ದರು. ತಮ್ಮ ಉತ್ತರಾಧಿಕಾರಿಯ ಹೆಸರು ಶಿಫಾರಸು ಮಾಡುವಂತೆ ಅಕ್ಟೋಬರ್ 7ರಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಸಿಜೆಐ ಕಚೇರಿಗೆ ಪತ್ರ ಬರೆದಿದ್ದರು.  

ಸಿಜೆಐ ಲಲಿತ್ ಅವರು ನವೆಂಬರ್ 8 ರಂದು ಅಧಿಕಾರ ತ್ಯಜಿಸಲಿದ್ದಾರೆ. ಅಂದು ಸಾರ್ವಜನಿಕ ರಜೆ (ಗುರುನಾನಕ್ ಜಯಂತಿ) ಇರುವುದರಿಂದ ನವೆಂಬರ್ 7 ಅವರ ಕರ್ತವ್ಯದ ಕೊನೆಯ ದಿನವಾಗಲಿದೆ. ಈ ವರ್ಷದ ಆಗಸ್ಟ್ 27 ರಂದು ಮಾಜಿ ಸಿಜೆಐ ಎನ್‌ ವಿ ರಮಣ ಅವರು ನಿವೃತ್ತರಾದ ನಂತರ ನ್ಯಾ. ಲಲಿತ್ ಅವರು ಅಲ್ಪ ಅವಧಿಗೆ ಸಿಜೆಐ ಆಗಿ ಕಾರ್ಯಭಾರ ವಹಿಸಿಕೊಂಡರು

Kannada Bar & Bench
kannada.barandbench.com