ಕಿರುಕುಳ ನೀಡಲೆಂದು ನನ್ನನ್ನು ಸಿಜೆಐ ದೀಪಕ್‌ ಮಿಶ್ರಾ ವರ್ಗಾವಣೆ ಮಾಡಿದ್ದರು: ಅಲಾಹಾಬಾದ್‌ ಹೈಕೋರ್ಟ್‌ ಸಿಜೆ ದಿವಾಕರ್

ತನಗಾದ ಅನ್ಯಾಯ ಸರಿಪಡಿಸಿದ್ದಕ್ಕಾಗಿ ಪ್ರಸ್ತುತ ಸಿಜೆಐ ಡಿ ವೈ ಚಂದ್ರಚೂಡ್ ಅವರಿಗೆ ಧನ್ಯವಾದ ಅರ್ಪಿಸಿದ ನಿರ್ಗಮಿತ ಸಿಜೆ ಪ್ರೀತಿಂಕರ್‌ ದಿವಾಕರ್‌.
ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್‌ ದಿವಾಕರ್‌
ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್‌ ದಿವಾಕರ್‌
Published on

ದುರುದ್ದೇಶಪೂರ್ವಕವಾಗಿ ಮತ್ತು ಕಿರುಕುಳ ನೀಡಲೆಂದು ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ತನ್ನನ್ನು ಛತ್ತೀಸ್‌ಗಢ ಹೈಕೋರ್ಟ್‌ನಿಂದ ವರ್ಗಾವಣೆ ಮಾಡಿತ್ತು ಎಂದು ಅಲಾಹಾಬಾದ್‌ ಹೈಕೋರ್ಟ್‌ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್‌ ದಿವಾಕರ್‌ ಹೇಳಿದರು.

ಸಿಜೆ ಹುದ್ದೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಮಂಗಳವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

"ನನಗೆ ಇಂದಿಗೂ ಕಾರಣ ಏನೆಂದು ತಿಳಿಯದ, ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ನನ್ನ ಮೇಲೆ ತೋರಿದ ತುಸು ಹೆಚ್ಚಿನ ಪ್ರೀತಿಯಿಂದಾಗಿ ಅನೇಕ ಹಠಾತ್‌ ಘಟನೆಗಳು ನನ್ನ ಮೇಲೆ ಧುತ್ತನೆ ಎರಗಿದವು. ಇದರಿಂದಾಗಿ ನಾನು ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆಗೊಂಡು ಅಕ್ಟೋಬರ್ 3, 2018ರಂದು ಅಧಿಕಾರ ವಹಿಸಿಕೊಂಡೆ. ಕಿರುಕುಳ ನೀಡುವ ದುರುದ್ದೇಶದಿಂದ ನನ್ನ ವರ್ಗಾವಣೆಗೆ ಆದೇಶ ಹೊರಡಿಸಲಾಗಿತ್ತು ಎಂದು ತೋರುತ್ತದೆ" ಎಂಬುದಾಗಿ ಅವರು ತಿಳಿಸಿದರು.

Also Read
ತನಗೆ ಬೇಕಾದವರನ್ನು ಕೊಲಿಜಿಯಂ ಒಪ್ಪಲಿಲ್ಲವೆಂದು ಕೇಂದ್ರವು ನ್ಯಾಯಮೂರ್ತಿಗಳ ಪದೋನ್ನತಿ ನಿರ್ಬಂಧಿಸುವಂತಿಲ್ಲ: ಸುಪ್ರೀಂ

ಆದರೂ ಅದೃಷ್ಟವಶಾತ್‌ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳು ಹಾಗೂ ವಕೀಲ ಸಮುದಾಯದಿಂದ ಅಪಾರ ಬೆಂಲ ಸಹಕಾರ ದೊರೆತು ನಿಷೇಧವು ವರವಾಗಿ ಪರಿಣಮಿಸಿತು ಎಂದು ಅವರು ಹೇಳಿದರು.

ತನಗಾದ ಅನ್ಯಾಯ ಸರಿಪಡಿಸಿದ್ದಕ್ಕಾಗಿ ಪ್ರಸ್ತುತ ಸಿಜೆಐ ಡಿ ವೈ ಚಂದ್ರಚೂಡ್ ಅವರಿಗೆ ಅವರು ಧನ್ಯವಾದ ಅರ್ಪಿಸಿದರು. ಸಿಜೆಐ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಅವರನ್ನು ಅಲಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲು ಶಿಫಾರಸು ಮಾಡಿತ್ತು.

1961ರಲ್ಲಿ ಜನಿಸಿದ ನ್ಯಾ. ದಿವಾಕರ್ ಅವರ ಮಾತೃ ನ್ಯಾಯಾಲಯ ಛತ್ತೀಸ್ ಗಢ ಹೈಕೋರ್ಟ್ ಆಗಿದೆ. ಜಬಲ್ಪುರ ದುರ್ಗಾವತಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಅವರು 1984ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು.

ಜನವರಿ 2005ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡು ಬಳಿಕ ಮಾರ್ಚ್ 31, 2009ರಂದು ಛತ್ತೀಸ್‌ಗಢ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಅವರು ಅಕ್ಟೋಬರ್ 3, 2018 ರಿಂದ ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಹೈಕೋರ್ಟ್ ಆಯೋಜಿಸಿದ್ದ ಪೂರ್ಣ ನ್ಯಾಯಾಲಯ ಕಾರ್ಯಕ್ರಮದ ವೇಳೆ, ಕಾನೂನು ವೃತ್ತಿಯಲ್ಲಿನ ತಮ್ಮ ಅನುಭವ ಮತ್ತು ಯಾನವನ್ನು ನ್ಯಾ. ದಿವಾಕರ್‌ ನೆನೆದರು.

Kannada Bar & Bench
kannada.barandbench.com