
ಸಂಬಂಧಿತ ಉಸ್ತುವಾರಿ-ಸಚಿವರು ತೆಗೆದುಕೊಂಡ ನಿರ್ಧಾರ ಪರಿಶೀಲಿಸಲು ಅಥವಾ ಮಾರ್ಪಡಿಸಲು ಮಹಾರಾಷ್ಟ್ರ ವ್ಯವಹಾರ ಮತ್ತು ಸೂಚನಾ ನಿಯಮಾವಳಿ ಅಡಿ ಮುಖ್ಯಮಂತ್ರಿಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಇತ್ತೀಚೆಗೆ ತಿಳಿಸಿದೆ [ಚಂದ್ರಾಪುರ ಜಿಲ್ಲಾ ಕೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಒಂದು ಇಲಾಖೆಯ ಉಸ್ತುವಾರಿ ಸಚಿವರು ಸಂಬಂಧಪಟ್ಟ ಇಲಾಖೆ ಬಗ್ಗೆ ಕಾರ್ಯನಿರ್ವಹಿಸಬೇಕಿರುವುದರಿಂದ, ಅವರು ಆ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಅವರ ಆದೇಶಗಳು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಸ್ವರೂಪ ಪಡೆದುಕೊಳ್ಳುತ್ತವೆ ಎಂದು ನ್ಯಾಯಾಲಯ ಹೇಳಿದೆ.
"ಉಸ್ತುವಾರಿ ಸಚಿವರಿಗೆ ಹಂಚಿಕೆಯಾದ ವಿಷಯದಲ್ಲಿ ಮಧ್ಯಪ್ರವೇಶಿಸಲು ವ್ಯವಹಾರ ನಿಯಮಗಳು ಮತ್ತು ಸೂಚನೆಗಳ ಅಡಿಯಲ್ಲಿ ಮುಖ್ಯಮಂತ್ರಿಗೆ ಸ್ವತಂತ್ರ ಅಧಿಕಾರವಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಯ ಮಧ್ಯಸ್ಥಿಕೆ ಸಂಪೂರ್ಣವಾಗಿ ಅನಧಿಕೃತವಾದುದಾಗಿದ್ದು ಅದು ಕಾನೂನಿನ ಮಾನ್ಯತೆ ಹೊಂದಿಲ್ಲ ಎಂದೂ ತಿಳಿಸಿದ ನ್ಯಾಯಾಲಯ ಸಹಕಾರ ಸಚಿವರ ನಿರ್ಣಯವನ್ನು ನವೆಂಬರ್ 29, 2022ರಂದು ತಡೆಹಿಡಿದಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿರ್ಧಾರವನ್ನು ರದ್ದುಪಡಿಸಿತು.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಾದ್ಯಂತ 93 ಶಾಖೆಗಳನ್ನು ಹೊಂದಿರುವ ಚಂದ್ರಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್‌ಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಹಕಾರ ಸಚಿವರು ಅನುಮತಿ ನೀಡಿದ್ದರು. ಈ ನಿರ್ಧಾರಕ್ಕೆ ತಡೆ ನೀಡಿದ್ದ ಮುಖ್ಯಮಂತ್ರಿಗಳ ಆದೇಶವನ್ನು ಬ್ಯಾಂಕ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]