ಮೂತ್ರ ನೆಕ್ಕಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ

ಬುಧವಾರ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಅರ್ಜುನ್ ಅವರನ್ನು ಇಂದು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
Chikkamagaluru district and sessions court
Chikkamagaluru district and sessions court
Published on

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನಿಗೆ ಮೂತ್ರ ನೆಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಕೆ. ಅರ್ಜುನ್ ಹೊರಕೇರಿ ಅವರಿಗೆ ಚಿಕ್ಕಮಗಳೂರತು ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಬುಧವಾರ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಅರ್ಜುನ್‌ ಅವರನ್ನು ಇಂದು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಅರ್ಜುನ್‌ ಅವರಿಗೆ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.

Also Read
ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಮೇ 10ರಂದು ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣ ಇದಾಗಿದೆ. ಕೆಲ ದಿನಗಳ ಬಳಿಕ ಯುವಕ ಪಿಎಸ್‌ಐ ವಿರುದ್ಧ ದೂರು ಸಲ್ಲಿಸಿದ್ದರು. ಅದರಂತೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರ ವಿರುದ್ಧ ಎಸ್‌ಸಿ ಎಸ್‌ಟಿ ಎಸ್‌ಟಿ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ದಿನಕಳೆದಂತೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಅರ್ಜುನ್‌ ಅವರನ್ನು ಅಮಾನತುಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೆ ರಾಜಕೀಯ ಮೊಗಸಾಲೆಯಲ್ಲಿಯೂ ಪ್ರಕರಣ ಪ್ರತಿಧ್ವನಿಸಿತ್ತು. ವಿರೋಧ ಪಕ್ಷಗಳು ಪೊಲೀಸ್‌ ಅಧಿಕಾರಿಯ ಬಂಧನಕ್ಕೆ ಆಗ್ರಹಿಸಿದ್ದವು.

ಈ ನಡುವೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಅರ್ಜುನ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ರಾಜ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಇತ್ತೀಚೆಗೆ ಹೈಕೋರ್ಟ್‌ ಅವರ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಅದಾದ ಕೆಲ ದಿನಗಳಲ್ಲಿ ಅಂದರೆ ನಿನ್ನೆ ಅವರನ್ನು ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

Kannada Bar & Bench
kannada.barandbench.com