ಪೊಷಕರಲ್ಲಿ ಒಬ್ಬರಷ್ಟೇ ಸಾಮಾಜಿಕವಾಗಿ, ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೂ ಅಂತಹವರ ಮಗು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತೊಂದರೆ ಎದುರಿಸುತ್ತಿದ್ದರೆ ಆಗ ಆ ಮಗುವನ್ನು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ್ದು ಎಂದು ಪರಿಗಣಿಸಬಹುದು ಎಂಬುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ರೆಬೆಕಾ ಮಥಾಯ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತಾನು ಪಣಿಯ ಜಾತಿಗೆ ಸೇರಿದ್ದು ಪಣಿಯ ಜಾತಿಗೆ ನೀಡಲಾಗುತ್ತಿರುವ ಎಲ್ಲಾ ಸವಲತ್ತುಗಳಿಗೆ ಅರ್ಹಳು ಎಂದು ಘೋಷಿಸುವಂತೆ ಮತ್ತು ಆ ನಿಟ್ಟಿನಲ್ಲಿ ಜಾತಿ ಪ್ರಮಾಣಪತ್ರ ನೀಡುವಂತೆ ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಜು ಅಬ್ರಹಾಂ ಅವರು ಈ ವಿಚಾರ ತಿಳಿಸಿದ್ದಾರೆ.
ಅರ್ಜಿದಾರೆಯ ತಂದೆ ಆರ್ಥೊಡಕ್ಸ್ ಸಿರಿಯನ್ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಆಕೆಯ ತಾಯಿ ಹಿಂದೂ ಪಣಿಯಾ ಸಮುದಾಯದವರಾಗಿದ್ದಾರೆ. ಪಣಿಯ ಸಮುದಾಯವು 1950ರ ಸಂವಿಧಾನದ (ಪರಿಶಿಷ್ಟ ಬುಡಕಟ್ಟುಗಳು) ಆದೇಶ, ಎರಡನೇ ಶೆಡ್ಯೂಲ್ ಪ್ರಕಾರ ಮಾನ್ಯತೆ ಪಡೆದ ಪರಿಶಿಷ್ಟ ಪಂಗಡ ಸಮುದಾಯವಾಗಿದೆ.
ಮಗುವನ್ನು ತನ್ನ ಸಮುದಾಯದ ಭಾಗ ಎಂದು ಪರಿಶಿಷ್ಟ ಸಮುದಾಯ ಎಲ್ಲಿಯರವರೆಗೆ ಒಪ್ಪಿಕೊಂಡಿರುತ್ತದೋ ಅಲ್ಲಿಯವರೆಗೆ ಅದೇ ಸಾಮಾಜಿಕ ತತ್ತ್ವದಲ್ಲಿ ಬದುಕುತ್ತಿರುವ ಆ ಮಗುವನ್ನು ಪಣಿಯ ಸಮುದಾಯಕ್ಕೆ ಸೇರಿದ್ದು ಎಂದು ಪರಿಗಣಿಸಬೇಕು ಎಂಬುದಾಗಿ ನ್ಯಾ. ಅಬ್ರಾಹಂ ಸ್ಪಷ್ಟಪಡಿಸಿದ್ದಾರೆ.
“ಇಂದಿರಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದಲ್ಲಿ [AIR 2006 KER 1] ನೀಡಲಾದ ತೀರ್ಪಿನ ಪ್ರಕಾರ ಪೋಷಕರಲ್ಲಿ ಒಬ್ಬರು ಮಾತ್ರವೇ ಜಾತಿ/ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ್ದರೂ ಅಂತಹರ ಮಗು ಆ ಸಮುದಾಯದ ಪ್ರಯೋಜನ ಪಡೆಯಲು ಅರ್ಹವಾಗಿದೆ. ಆದರೆ ಆ ಮಗು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನರ್ಹತೆ ಅನುಭವಿಸುತ್ತಿದೆಯೇ ಮತ್ತು ಆ ಸಮಾಜ ಆ ಮಗುವನ್ನು ತನ್ನದೆಂದು ಒಪ್ಪಿಕೊಂಡಿದೆಯೇ ಆ ಮಗು ಅದೇ ಸಮುದಾಯದ ಸಾಮಾಜಿಕ ತತ್ವದಡಿ ಬದುಕುತ್ತಿದೆಯೇ ಎಂಬುದನ್ನು ಪರಿಗಣಿಸುವುದು ನಿರ್ಣಾಯಕ ಅಂಶವಾಗಿರುತ್ತದೆ” ಎಂದು ನ್ಯಾಯಾಲಯ ನುಡಿದಿದೆ.
ಈ ಹಿನ್ನೆಲೆಯಲ್ಲಿ ಕೆಐಆರ್‌ಟಿಎಡಿಎಸ್‌ನ ವರದಿ ಬದಿಗೆ ಸರಿಸಿದ ಹೈಕೋರ್ಟ್, ಅರ್ಜಿದಾರರ ವಿಚಾರಣೆಗೆ ಅವಕಾಶ ಕಲ್ಪಿಸಿ ಪ್ರಕರಣದ ಸೂಕ್ತ ತನಿಖೆ ನಡೆಸಿದ ನಂತರ ಆ ಪ್ರಕರಣವನ್ನು ಮರುಪರಿಶೀಲಿಸಿ ವರದಿ ಸಲ್ಲಿಸಬೇಕು. ಅಲ್ಲದೆ ತಾನು ಪಣಿಯ ಸಮುದಾಯಕ್ಕೆ ಸೇರಿದವಳು ಎಂಬ ವಾದವನ್ನು ಬೆಂಬಲಿಸುವ ಸೂಕ್ತ ದಾಖಲೆಗಳನ್ನು ಒದಗಿಸಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ಅದು ತಿಳಿಸಿತು.