ಸ್ನೇಹಿತರು, ಸಂಬಂಧಿಕರ ಸಹಾಯದಿಂದ ಬದುಕುವ ಪೋಷಕರ ಪಾಲನೆಯ ಕರ್ತವ್ಯದಿಂದ ಮಕ್ಕಳು ಮುಕ್ತರಲ್ಲ: ಕೇರಳ ಹೈಕೋರ್ಟ್

ಮನುಸ್ಮೃತಿ, ಬೈಬಲ್, ಕುರಾನ್ ಮತ್ತು ಬುದ್ಧನನ್ನು ಉಲ್ಲೇಖಿಸಿದ ನ್ಯಾಯಾಲಯ , ಪೋಷಕರನ್ನು ನೋಡಿಕೊಳ್ಳುವುದು ಕೇವಲ ಕಾನೂನು ಬಾಧ್ಯತೆಯಲ್ಲ, ಬದಲಾಗಿ ನೈತಿಕ ಮತ್ತು ಸಾಮಾಜಿಕ ಕರ್ತವ್ಯ ಎಂದಿದೆ.
Senior Citizens
Senior Citizens
Published on

ಸಂಬಂಧಿಕರು ಮತ್ತು ಸ್ನೇಹಿತರ ಆರ್ಥಿಕ ಸಹಾಯದಿಂದ ಒಂದೊಮ್ಮೆ ಪೋಷಕರು ಬದುಕುತ್ತಿದ್ದರೂ ಸಹ ಅವರನ್ನು ಪಾಲಿಸುವ ಜವಾಬ್ದಾರಿ ಮಕ್ಕಳ ಮೇಲಿರುತ್ತದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಉನ್ನೀನ್ ಮತ್ತು ಶೌಕತ್‌ ಅಲಿ ಇನ್ನಿತರರ ನಡುವಣ ಪ್ರಕರಣ].

ನೈತಿಕ ಕರ್ತವ್ಯದ ಜೊತೆಗೆ ವಿವಿಧ ಕಾನೂನುಗಳು ಹೇಳುವಂತೆ ಪೋಷಕರನ್ನು ನೋಡಿಕೊಳ್ಳುವ ಕಾನೂನು ಬಾಧ್ಯತೆ ಕೂಡ ಮಕ್ಕಳ ಮೇಲಿದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್ ವಿವರಿಸಿದರು.

Also Read
ಪ್ರತಿಭಟನೆಗೆ ಚಿಕ್ಕ ಮಕ್ಕಳನ್ನು ಕರೆದೊಯ್ಯುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಕೇರಳ ಹೈಕೋರ್ಟ್

ಈ ನಿಟ್ಟಿನಲ್ಲಿ, ನ್ಯಾಯಾಲಯ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ-2007, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ-1956ರ ಸೆಕ್ಷನ್ 20 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 (ಡಿ) (ಈಗಿನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಸೆಕ್ಷನ್ 144(ಡಿ) ಅನ್ನು ನ್ಯಾಯಾಲಯ ಉಲ್ಲೇಖಿಸಿದೆ.

ತಮ್ಮ ಹೆತ್ತವರನ್ನು ಗೌರವಿಸುವುದು ಮತ್ತು ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು ಸಂವಿಧಾನದ 51 ಎ ವಿಧಿ ಹೇಳುತ್ತದೆ. ಪೋಷಕರನ್ನು ನಿರ್ಲಕ್ಷಿಸುವುದು ಕಾನೂನುಬಾಹಿರ ಮಾತ್ರವಲ್ಲ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವೂ ಆಗಿದೆ. ಸ್ನೇಹಿತರು, ಸಂಬಂಧಿಕರ ಸಹಾಯದಿಂದ ಬದುಕುವ ಪೋಷಕರಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಮಕ್ಕಳು ಮುಕ್ತರಾಗುವಂತಿಲ್ಲ. ವೃದ್ಧಾಪ್ಯದಲ್ಲಿ ಪೋಷಕರನ್ನು ಪೋಷಿಸುವುದು ಮಗನ ನೈತಿಕ ಕರ್ತವ್ಯ ಮತ್ತು ಕಾನೂನು ಬಾಧ್ಯತೆ ಎಂದು ಅದು ವಿವರಿಸಿದೆ.

ವೃದ್ಧ ಪೋಷಕರನ್ನು ನಿರ್ಲಕ್ಷಿಸುವುದು ಕಾನೂನುಬಾಹಿರ ಮಾತ್ರವಲ್ಲ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ವಿರುದ್ಧ ಕೂಡ.

ಕೇರಳ ಹೈಕೋರ್ಟ್

ಮಕ್ಕಳು ಬೆಳೆಯುತ್ತಿರುವಾಗ ಪೋಷಕರು ತೋರಿದ್ದ ಕಾಳಜಿಗೆ ಪ್ರತಿಯಾಗಿ ಮಕ್ಕಳು ಸ್ಪಂದಿಸುವುದು ನ್ಯಾಯಯುತವಾಗುತ್ತದೆ.  ಮಕ್ಕಳು ವಿಶೇಷವಾಗಿ ಗಂಡುಮಕ್ಕಳು ಪೋಷಕರನ್ನು ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಎಡಪ್ಪಗತ್ ಹೇಳಿದರು.

ಈ ಸಂಬಂಧ ವೇದ, ಉಪನಿಷತ್ತು, ಮನುಸ್ಮೃತಿ, ಬೈಬಲ್, ಕುರಾನ್ ಮತ್ತು ಬುದ್ಧನನ್ನು ಉಲ್ಲೇಖಿಸಿದ ನ್ಯಾಯಾಲಯ , ಪೋಷಕರನ್ನು ನೋಡಿಕೊಳ್ಳುವುದು ಕೇವಲ ಕಾನೂನು ಬಾಧ್ಯತೆಯಲ್ಲ, ಬದಲಾಗಿ ನೈತಿಕ ಮತ್ತು ಸಾಮಾಜಿಕ ಕರ್ತವ್ಯ ಎಂದಿತು.

ತನ್ನ ಹಿರಿಯರನ್ನು ಘನತೆ ಮತ್ತು ಕಾಳಜಿಯಿಂದ ನಡೆಸಿಕೊಂಡಾಗ ಸಮಾಜ ಉದ್ಧಾರವಾಗುತ್ತದೆ.

ಕೇರಳ ಹೈಕೋರ್ಟ್

ತಮ್ಮ ಮೂವರು ಮಕ್ಕಳು ತನಗೆ ಜೀವನಾಂಶ ನೀಡಬೇಕೆಂದು ಕೋರಿ 74 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಮೂವರೂ ಮಕ್ಕಳು ವ್ಯಕ್ತಿಯ ಮೊದಲ ಪತ್ನಿಯ ಮಕ್ಕಳು. 2013 ರಲ್ಲಿ ಮೊದಲ ಪತ್ನಿಗೆ ತಲಾಖ್‌ ನೀಡಿ ಎರಡನೇ ಪತ್ನಿಯೊಂದಿಗೆ ಈಗ ಅವರು ವಾಸಿಸುತ್ತಿದ್ದಾರೆ. ಮೂವರು ಮಕ್ಕಳು ಕುವೈತ್‌ನಲ್ಲಿ ಉತ್ತಮ ಉದ್ಯೋಗದಲ್ಲಿದ್ದರೂ ತಮ್ಮ ತಂದೆಯ ಹೇಳಿಕೆಯನ್ನು ನಿರಾಕರಿಸಿದರು. ಕುವೈತ್‌ನಲ್ಲಿ ನಡೆಯುತ್ತಿರುವ ತನ್ನ ವ್ಯವಹಾರದಿಂದ ತಮ್ಮ ತಂದೆ ತಮ್ಮ ಬದುಕನ್ನು ನಿರ್ವಹಿಸಿಕೊಳ್ಳಬಲ್ಲರು ಎಂದರು.  ಇದಕ್ಕೆ ಕೌಟುಂಬಿಕ ನ್ಯಾಯಾಲಯ ಸಹಮತ ವ್ಯಕ್ತಪಡಿಸಿತ್ತು.

Also Read
ತಲೆಮರೆಸಿಕೊಂಡಿರುವ ಆರೋಪಿಯ ಪೋಷಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ: ಅಲಾಹಾಬಾದ್ ಹೈಕೋರ್ಟ್

ವಯಸ್ಸಾದ ಅರ್ಜಿದಾರರ ಖಾತೆಯಲ್ಲಿರುವ ಹಣವನ್ನು ಅವರ ಸಹೋದರ ಅವರ ದೈನಂದಿನ ಖರ್ಚುಗಳನ್ನು ನಿಭಾಯಿಸಿಕೊಳ್ಳುವುದಕ್ಕಾಗಿ ವರ್ಗಾಯಿಸಿದ್ದರೆ ಹೊರತು ಯಾವುದೇ ವ್ಯವಹಾರಗಳಿಂದ ಬರುವ ಲಾಭದ ಪಾಲಾಗಿ ಅಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಹಾಗೆ ತಂದೆಗೆ ಹಣ ದೊರೆತ ಮಾತ್ರಕ್ಕೆ ಮಕ್ಕಳು ತಮ್ಮ ತಂದೆಯ ಪಾಲನೆಯಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಆದೇಶ ರದ್ದುಗೊಳಿಸಿದ ಅದು ಅರ್ಜಿಸಲ್ಲಿಸಿರುವ ತಂದೆಗೆ ಅವರ ಮಕ್ಕಳು ತಿಂಗಳಿಗೆ ₹20,000 ಜೀವನಾಂಶ ಪಾವತಿಸುವಂತೆ ಆದೇಶಿಸಿತು.

Kannada Bar & Bench
kannada.barandbench.com